ರಾಜ್ಯ ಕೃಷಿ ಅಭಿವೃದ್ಧಿ ಏಜೆನ್ಸಿ ಸ್ಥಾಪಿಸಲು ಸಂಪುಟ ತೀರ್ಮಾನ : ಎಚ್.ಕೆ.ಪಾಟೀಲ್

Update: 2024-10-28 16:07 GMT

ಬೆಂಗಳೂರು : ಬೀಜೋತ್ಪಾದನಾ ಕೇಂದ್ರಗಳು, ರೈತ ಸಂಪರ್ಕ ಕೇಂದ್ರಗಳು, ಜಿಲ್ಲಾ ಕೃಷಿ ತರಬೇತಿ ಕೇಂದ್ರಗಳು, ಜೈವಿಕ ನಿಯಂತ್ರಣ, ಪರತಂತ್ರ ಜೀವಿ ಪ್ರಯೋಗಾಲಯಗಳನ್ನು ಒಂದೇ ಸೂರಿನಡಿ ತಂದು ಅವುಗಳಿಂದ ಬರುವ ಆದಾಯ ಹಾಗೂ ಸರಕಾರದಿಂದ ನೀಡುವ ಅನುದಾನವನ್ನು ಜೊತೆಗೂಡಿಸಿ ಈ ಘಟಕಗಳನ್ನು ಅಭಿವೃದ್ಧಿಪಡಿಸಲು ‘ಕರ್ನಾಟಕ ರಾಜ್ಯ ಕೃಷಿ ಅಭಿವೃದ್ಧಿ ಏಜೆನ್ಸಿ’ ಯನ್ನು ಸ್ಥಾಪಿಸಲು ತೀರ್ಮಾನಿಸಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದರು.

ಸೋಮವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಈ ನಾಲ್ಕು ಘಟಕಗಳು ಮತ್ತು ಕರ್ನಾಟಕ ರಾಜ್ಯ ಕೃಷಿ ಅಭಿವೃದ್ಧಿ ಏಜೆನ್ಸಿ ಘಟಕದ ಕಾರ್ಯನಿರ್ವಹಣೆಗೆ ಅವಶ್ಯವಿರುವ ಮಾನವ ಸಂಪನ್ಮೂಲವನ್ನು ಹೊರಗುತ್ತಿಗೆ ಆಧಾರದ ಮೇರೆಗೆ ಪಡೆಯಲು ಹಾಗೂ ನಿರ್ವಹಣಾ ವೆಚ್ಚ ಭರಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.

ಬೀಜೋತ್ಪಾದನಾ ಕೇಂದ್ರಗಳ ಜಮೀನನ್ನು ಅನಿವಾರ್ಯ ಸಂದರ್ಭಗಳಲ್ಲಿ ಇತರೆ ಇಲಾಖೆ, ಸಂಸ್ಥೆಗೆ ನೀಡಬೇಕಾದಲ್ಲಿ ಆ ಜಮೀನಿನ ಬದಲು ಸಾಗುವಳಿ ಯೋಗ್ಯ ಸಮಾನ ಮೌಲ್ಯದ, ಆದ್ಯತೆ ಮೇರೆಗೆ ಅದೇ ತಾಲೂಕಿನಲ್ಲಿ ಜಮೀನು ಮಂಜೂರು ಮಾಡುವ ಷರತ್ತಿಗೊಳಪಟ್ಟು ರಾಜ್ಯ ಕೃಷಿ ಅಭಿವೃದ್ಧಿ ಏಜೆನ್ಸಿಯ ಸಹಮತಿಯನ್ನು ಪಡೆಯಲು ಸಚಿವ ಸಂಪುಟ ನಿರ್ಣಯಿಸಿದೆ ಎಂದು ಎಚ್.ಕೆ.ಪಾಟೀಲ್ ವಿವರಿಸಿದರು.

23 ಜಿಲ್ಲೆಗಳಲ್ಲಿ 45 ಬೀಜೋತ್ಪಾದನ ಕೇಂದ್ರಗಳು, 742 ರೈತ ಸಂಪರ್ಕ ಕೇಂದ್ರಗಳು, 23 ಕೃಷಿ ತರಬೇತಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಮಂಡ್ಯ, ಕಲಬುರಗಿ, ಗಂಗಾವತಿ, ದಾವಣಗೆರೆ, ಧಾರವಾಡ ಮತ್ತು ಬೈಲಹೊಂಗಲಗಳಲ್ಲಿ ಜೈವಿಕ ನಿಯಂತ್ರಣ ಹಾಗೂ ಪರತಂತ್ರ ಜೀವಿ ಪ್ರಯೋಗಾಲಯಗಳು ಕಾರ್ಯನಿರ್ವಹಿಸುತ್ತಿವೆ ಎಂದು ಅವರು ಹೇಳಿದರು.

ಜಿ.ಎಸ್.ಟಿ ಕಾಯ್ದೆಗೆ ತಿದ್ದುಪಡಿ: ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ (ಎರಡನೇ ತಿದ್ದುಪಡಿ) ವಿಧೇಯಕ, 2024”ಕ್ಕೆ ಅನುಮೋದನೆ ನೀಡಿದ್ದು, ಮುಂದಿನ ವಿಧಾನಮಂಡಲ ಅಧಿವೇಶನದಲ್ಲಿ ಮಂಡನೆ ಮಾಡಲಾಗುವುದು. ಅದಕ್ಕೂ ಮುಂಚಿತವಾಗಿ ಅದ್ಯಾಧೇಶದ ಮೂಲಕ ವಿಧೇಯಕ ಜಾರಿಗೆ ತರಲು ನಿರ್ಧರಿಸಲಾಗಿದೆ ಎಂದು ಎಚ್.ಕೆ.ಪಾಟೀಲ್ ತಿಳಿಸಿದರು.

ಇತರ ನಿರ್ಣಯಗಳು: ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ಮಂಜೂರಾದ ಒಟ್ಟು 7045 ಸಮುದಾಯ ಆರೋಗ್ಯ ಅಧಿಕಾರಿ ಉದ್ದೆಗಳ ಕಾಲಾವಧಿಯನ್ನು ಗುತ್ತಿಗೆ ಆಧಾರದಲ್ಲಿ 2025ನೇ ಮಾರ್ಚ್ ಅಂತ್ಯದವರೆಗೆ ಕೇಂದ್ರ ಸರಕಾರದಿಂದ 2024-25ನೇ ಸಾಲಿಗೆ ಆರ್‌ಒಪಿಯಲ್ಲಿ ಅನುಮೋದನೆಯಾಗಿರುವ 278.64 ಕೋಟಿ ರೂ.ಗಳ ಅನುದಾನದಲ್ಲಿ ಭರಿಸಿ ಮುಂದುವರೆಸಲು ಅನುಮೋದನೆ ನೀಡಲಾಗಿದೆ.

ಬೆಂಗಳೂರಿನ ಜನರಲ್ ಕೆ.ಎಸ್.ತಿಮ್ಮಯ್ಯ ರಸ್ತೆಯಲ್ಲಿನ ಕೆಎಸ್‍ಆರ್‍ಪಿ 1ನೇ ಪಡೆಯ ಆವರಣದಲ್ಲಿ ಪೊಲೀಸ್ ಇಲಾಖೆಯ ಸೆಂಟ್ರಲ್ ಕಮಾಂಡ್ ಸೆಂಟರನ್ನು ಒಳಗೊಂಡಂತೆ ಸುಸಂಘಟಿತ ಪೊಲೀಸ್ ಭವನ ನಿರ್ಮಾಣ ಕಾಮಗಾರಿಯ 102.80 ಕೋಟಿ ರೂ.ಗಳ ಪರಿಷ್ಕೃತ ಅಂದಾಜು ವೆಚ್ಚಕ್ಕೆ ಆಡಳಿತಾತ್ಮಕ ಅನುಮೋದನೆ.

ಬೆಂಗಳೂರಿನ ಆನೇಕಲ್ ತಾಲೂಕಿನ ಸೂರ್ಯನಗರ 1ನೇ ಹಂತದ ನಿವೇಶನ ಸಂಖ್ಯೆ: 953 ಮತ್ತು 454, 455ರಲ್ಲಿ ಆಧುನಿಕ ಸೌಲಭ್ಯಗಳನ್ನು ಒಳಗೊಂಡ ಎರಡು ಬಹುಮಹಡಿ ವಸತಿ ಸಮುಚ್ಛಯಗಳನ್ನು (50 ಮತ್ತು 40 ಫ್ಲಾಟ್‍ಗಳು) ನಿರ್ಮಿಸುವ 101 ಕೋಟಿ ರೂ.ಗಳ ಅಂದಾಜು ಮೊತ್ತದ ಯೋಜನೆಗೆ ಆಡಳಿತಾತ್ಮಕ ಅನುಮೋದನೆ.

ಶಿವಮೊಗ್ಗ ಗ್ರೀನ್ ಫೀಲ್ಡ್ ವಿಮಾನ ನಿಲ್ದಾಣದ ಅಭಿವೃದ್ಧಿಗೆ 127.44 ಕೋಟಿ ರೂ.ಗಳ ಹೆಚ್ಚುವರಿ ಮೊತ್ತಕ್ಕೆ ಅನುಮೋದನೆ. ದೇವನಹಳ್ಳಿ-ವಿಜಯಪುರ-ಎಚ್.ಕ್ರಾಸ್-ವೇಮಗಲ್- ಮಾಲೂರು-ತಮಿಳುನಾಡುಗಡಿವರೆಗೆ (ಮಾಲೂರು-ಹೊಸಕೋಟೆ ರಸ್ತೆ ಸೇರಿದಂತೆ) 110.40 ಕಿ.ಮೀ ಉದ್ದದ ರಸ್ತೆಯನ್ನು ಹೈಬ್ರಿಡ್ ವರ್ಷಾಸನ ಮಾದರಿಯಲ್ಲಿ 3190 ಕೋಟಿ ರೂ.ಗಳ ಮೊತ್ತದಲ್ಲಿ ಅಭಿವೃದ್ಧಿಪಡಿಸಲು ಆಡಳಿತಾತ್ಮಕ ಅನುಮೋದನೆ.

ರಾಜ್ಯದ ಸರ್ಕಾರಿ ಶಾಲೆಗಳಲ್ಲಿನ 4 ಮತ್ತು 5ನೇ ತರಗತಿ ವಿದ್ಯಾರ್ಥಿಗಳಿಗೆ 2024-25ನೇ ಶೈಕ್ಷಣಿಕ ಸಾಲಿನಲ್ಲಿ ಕಲಿಕಾ ಸಾಮಗ್ರಿಗಳನ್ನು ವಿನ್ಯಾಸಗೊಳಿಸಿ, ಮುದ್ರಿಸಿ, ವಿತರಿಸು ಹಾಗೂ ಶಿಕ್ಷಕರಿಗೆ ಅಗತ್ಯ ತರಬೇತಿ ನೀಡುವ 14.24 ಕೋಟಿ ರೂ.ಗಳ ಅಂದಾಜು ಮೊತ್ತದ “ಓದು ಕರ್ನಾಟಕ” ಚಟುವಟಿಕೆಗೆ ಅನುಮೋದನೆ.

ವೀರಪ್ಪನ್ ಕಾರ್ಯಾಚರಣೆಯ ಎಸ್.ಟಿ.ಎಫ್ ಕಾರ್ಯಪಡೆಯಲ್ಲಿ ಭಾಗವಹಿಸಿದ್ದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನಿವೃತ್ತ ವೈದ್ಯಕೀಯ ಅಧಿಕಾರಿ ಡಾ.ಸಿದ್ದಪ್ಪಸ್ವಾಮಿ, ನಿವೃತ್ತ ಶುಶ್ರೂಷಕರಾದ ಮಹಾದೇವಯ್ಯ ಹಾಗೂ ಕುಮಾರಸ್ವಾಮಿಯವರಿಗೆ ಚಾಮರಾಜನಗರ-ರಾಮಸಮುದ್ರ ನಗರಾಭಿವೃದ್ಧಿ ಪ್ರಾಧಿಕಾರವು ಅಭಿವೃದ್ಧಿಪಡಿಸುತ್ತಿರುವ ಬಡಾವಣೆಯಲ್ಲಿ ನಿವೇಶನ ಮಂಜೂರು ಮಾಡಲು ನಿರ್ಣಯ.

ಬಾಗಲಕೋಟೆ ಜಿಲ್ಲೆಯ ಮುಧೋಳ ನಗರಕ್ಕೆ ಗುಳಬಾಳ ಹಳ್ಳಿ ಹತ್ತಿರದ ಕೃಷ್ಣಾ ನದಿ ಮೂಲದಿಂದ ಸುಧಾರಿತ ನೀರು ಸರಬರಾಜು ವ್ಯವಸ್ಥೆ ಒದಗಿಸುವ 177.10 ಕೋಟಿ ರೂ.ಗಳ ಪರಿಷ್ಕøತ ಅಂದಾಜಿಗೆ ಹಾಗೂ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಯಮಿತದಲ್ಲಿ ರಾಜ್ಯ ಸರಕಾರದ ಈಕ್ವಿಟಿ ಷೇರುಗಳ ಪ್ರಮಾಣವನ್ನು ಶೇ.49 ರಿಂದ 90ಕ್ಕೆ ಹೆಚ್ಚಿಸಲು ಅನುಮೋದನೆ.

ಮೈಸೂರಲ್ಲಿ ಜಿ.ಟಿ.ಟಿ.ಸಿ: ಮೈಸೂರು ಜಿಲ್ಲೆಯ ವರುಣಾ ಹೋಬಳಿ ಚೋರನಹಳ್ಳಿ ಗ್ರಾಮದಲ್ಲಿರುವ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಆವರಣದಲ್ಲಿ ಜಿಟಿಟಿಸಿ ಬಹುಕೌಶಲ್ಯಾಭಿವೃದ್ಧಿ ಕೇಂದ್ರವನ್ನು ನಬಾರ್ಡ್‍ನ ಆರ್.ಐ.ಡಿ.ಎಫ್ ಟ್ರಾಂಚ್-30 ರಡಿ ಅನುಮೋದಿಸಿರುವ 35 ಕೋಟಿ ರೂ. ಮೊತ್ತದಲ್ಲಿ ಸ್ಥಾಪಿಸಲು ನಿರ್ಣಯ.

ಬೆಂಗಳೂರು-ಬೀದರ್ ಮಾರ್ಗವಾಗಿ ವಿಮಾನಯಾನ ಕಾರ್ಯಾಚರಣೆ ಮಾಡಲು ನಿರ್ಣಯಿಸಲಾಗಿದೆ. ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ವಿ.ಸಿ ಕಾಲೋನಿಯಲ್ಲಿ ಕಾವೇರಿ ನೀರಾವರಿ ನಿಗಮಕ್ಕೆ ಸೇರಿದ 120/200 ಚ.ಅಡಿ ಅಳತೆಯ ಜಮೀನನ್ನು ಶ್ರೀ ಆದಿಚುಂಚನಗಿರಿ ಮಠಕ್ಕೆ ಮಂಜೂರು ಮಾಡಲು ನಿರ್ಧರಿಸಲಾಗಿದೆ.

ಹಾಸನ ನಗರಸಭೆಯನ್ನು ಮಹಾನಗರ ಪಾಲಿಕೆಯನ್ನಾಗಿ ಮೇಲ್ದರ್ಜೆಗೇರಿಸಲು ತೀರ್ಮಾನಿಸಲಾಗಿದೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಹಾಗೂ ಹೊಸದಾಗಿ ಮಂಜೂರು ಮಾಡಿದ ವಿದ್ಯಾರ್ಥಿ ನಿಲಯಗಳಿಗೆ ಮೂಲಭೂತ ಸೌಕರ್ಯಗಳನ್ನು 39.07 ಕೋಟಿ ರೂ.ಗಳ ಮೊತ್ತದಲ್ಲಿ ಒದಗಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ರಾಯಚೂರು ವಿವಿಯನ್ನು ‘ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯ’ ಎಂದು ಮರುನಾಮಕರಣ ಮಾಡಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ.

Full View

ವಿಧಾನ ಮಂಡಲ ಅಧಿವೇಶನ: ವಿಧಾನ ಮಂಡಲದ ಉಭಯ ಸದನಗಳ ಅಧಿವೇಶನವನ್ನು ಬೆಳಗಾವಿಯಲ್ಲಿ ಡಿಸೆಂಬರ್ 2ನೆ ವಾರದಲ್ಲಿ ಸಮಾವೇಶಗೊಳಿಸಲು ಪರಿಶೀಲಿಸಲಾಗುತ್ತಿದ್ದು, ದಿನಾಂಕ, ಸ್ಥಳ ಮತ್ತು ಅಧಿವೇಶನದ ಅವಧಿಯನ್ನು ನಿರ್ಣಯಿಸಲು ಮುಖ್ಯಮಂತ್ರಿಗೆ ಸಂಪುಟ ಅಧಿಕಾರ ನೀಡಿದೆ.

-ಎಚ್.ಕೆ.ಪಾಟೀಲ್, ಕಾನೂನು ಸಚಿವ

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News