ಮಣಿಪುರ ಗಲಭೆ ನಿಯಂತ್ರಿಸಲು ಪ್ರಧಾನಿಯವರಿಗೆ ಸಾಧ್ಯವಿಲ್ಲವೇ: ದಿನೇಶ್ ಗುಂಡೂರಾವ್
ಬೆಂಗಳೂರು: ಮಣಿಪುರದಲ್ಲಿ ನಡೆಯುತ್ತಿರುವ ಸರಣಿ ಹಿಂಸಾಚಾರದ ಬಗ್ಗೆ ಮೌನವಾಗಿರುವ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಮಣಿಪುರದಲ್ಲಿ 3ತಿಂಗಳಿಂದ ಹಿಂಸಾಚಾರ ನಡೆಯುತ್ತಿದೆ. ಸಜೀವ ದಹನ,ಮಹಿಳೆಯರ ನಗ್ನ ಮೆರವಣಿಗೆಯಂತಹ ಭೀಭತ್ಸ ಕೃತ್ಯಗಳು ಸರಣಿ ರೂಪದಲ್ಲಿ ನಡೆಯುತ್ತಿವೆ. ಕೊಲೆ ಅತ್ಯಾಚಾರಗಳಿಗೆ ಲೆಕ್ಕವೇ ಇಲ್ಲ. ಮಣಿಪುರ ಭಾರತದಲ್ಲಿದೆಯೇ ಅಥವಾ ಅಫ್ಘಾನಿಸ್ತಾನದಲ್ಲಿದೆಯೇ? ಗಲಭೆ ನಿಯಂತ್ರಿಸಲು ಪ್ರಧಾನಿಯವರಿಗೆ ಸಾಧ್ಯವಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ಮಣಿಪುರ ಹಿಂಸಾಚಾರವನ್ನು ಕಳೆದ 3 ತಿಂಗಳಿಂದ ಜೀವಂತವಾಗಿ ಬಿಟ್ಟಿರುವುದು ಕೇಂದ್ರದ ಅಸಹಾಯಕತೆಗಿಂತ ಹೆಚ್ಚಾಗಿ ಹೇಡಿತನ ತೋರಿಸುತ್ತಿದೆ. ಮಣಿಪುರದ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಅಲ್ಲಿನ BJP ಸರ್ಕಾರ ಹಾಗೂ ಕೇಂದ್ರ ಸರ್ಕಾರದ ವೈಫಲ್ಯ ಎದ್ದು ಕಾಣುತ್ತಿದೆ. ಮೋದಿಯವರ 56 ಇಂಚಿನ ಎದೆಯಲ್ಲಿ ಹಿಂಸಾಚಾರ ಸದ್ದಡಗಿಸುವ ಎದೆಗಾರಿಕೆ ಯಾಕಿಲ್ಲ? ಎಂದು ಟೀಕಿಸಿದ್ದಾರೆ.
ಮಣಿಪುರದಲ್ಲಿ BJPಯಲ್ಲದೇ ಬೇರೆ ಪಕ್ಷದ ಸರ್ಕಾರವಿದ್ದಿದರೆ ಕೇಂದ್ರ ಸುಮ್ಮನಿರುತಿತ್ತೇ? ಮಣಿಪುರ ದೊಂಬಿ ಹಾಗೂ ಕೊಲೆಗಡುಕರ ರಾಜ್ಯವಾಗಲು ಅಲ್ಲಿನ ಸರ್ಕಾರದ ನಿಷ್ಕ್ರಿಯತೆ ಅತಿ ಮುಖ್ಯ ಕಾರಣ. ಕೇಂದ್ರ ಈ ಕೂಡಲೇ ಸಂವಿಧಾನದ 356ನೇ ವಿಧಿಯ ಅನ್ವಯ ಅಲ್ಲಿಯ ಸರ್ಕಾರವನ್ನು ವಜಾ ಮಾಡಲಿ. ರಾಷ್ಟ್ರಪತಿ ಆಳ್ವಿಕೆಯ ಮೂಲಕ ಪರಿಸ್ಥಿತಿ ನಿಯಂತ್ರಿಸಲಿ ಎಂದು ಆಗ್ರಹಿಸಿದ್ದಾರೆ.