ನಿರ್ಮಲಾ ಸೀತಾರಾಮನ್ ವಿರುದ್ಧ ಎಫ್‌ಐಆರ್‌​ ದಾಖಲಿಸುವಂತೆ ಕೋರ್ಟ್ ​ಆದೇಶ; ವಿತ್ತ ಸಚಿವೆ ರಾಜೀನಾಮೆ ಕೊಡುತ್ತಾರೆಯೇ ಎಂದು ಪ್ರಶ್ನಿಸಿದ ಸಿಎಂ ಸಿದ್ದರಾಮಯ್ಯ

Update: 2024-09-28 12:05 GMT

ನಿರ್ಮಲಾ ಸೀತಾರಾಮನ್ / ಸಿದ್ದರಾಮಯ್ಯ (Photo: PTI)

ಬೆಂಗಳೂರು : ಚುನಾವಣಾ ಬಾಂಡ್‌ ಮೂಲಕ ಸುಲಿಗೆ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಇತರರ ವಿರುದ್ಧ ಎಫ್‌ಐಆರ್ ದಾಖಲಿಸಲು ತಿಲಕ್ ನಗರ ಪೊಲೀಸರಿಗೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಆದೇಶ ನೀಡಿದೆ.

ಚುನಾವಣಾ ಬಾಂಡ್‌ಗಳ ಮೂಲಕ ಹೆದರಿಸಿ ಸುಲಿಗೆ ಮಾಡಲಾಗಿದೆ. ಹೀಗಾಗಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ವಿರುದ್ಧ ಕ್ರಮ ಕೈಗೊಳ್ಳಲು ನಿರ್ದೇಶನ ನೀಡುವಂತೆ ಆದರ್ಶ ಅಯ್ಯರ್ ಎಂಬವರು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದರು.

ಈ ದೂರನ್ನು ವಿಚಾರಣೆಗೆ ಪರಿಗಣಿಸಿರುವ ನ್ಯಾಯಾಲಯವು, ಚುನಾವಣಾ ಬಾಂಡ್‌ಗಳ ಮೂಲಕ ಸುಲಿಗೆ ಮಾಡಿದ್ದಾರೆನ್ನಲಾದ ಆರೋಪಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸಲು ತಿಲಕ್ ನಗರ ಪೊಲೀಸ್ ಠಾಣೆ ಅಧಿಕಾರಿಗಳಿಗೆ ಸೂಚಿಸಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ, "ಚುನಾವಣಾ ಬಾಂಡ್ ಗೆ ಸಂಬಂಧಿಸಿದಂತೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ವಿರುದ್ಧವೂ ಎಫ್.ಐ.ಆರ್ ದಾಖಿಲಿಸಿರುವುದಾಗಿ ತಿಳಿದು ಬಂದಿದೆ. ಅವರೂ ರಾಜೀನಾಮೆ ಕೊಡುತ್ತಾರೆಯೇ" ಎಂದು ಪ್ರಶ್ನಿಸಿದ್ದಾರೆ.

ನಗರದ ಜಿ.ಪಂ‌.ನಲ್ಲಿ ಶುಕ್ರವಾರ ಸುಧೀರ್ಘ 10 ಗಂಟೆಗಳ ಕಾಲ ಮೈಸೂರು ಜಿಲ್ಲಾಮಟ್ಟದ ಕೆ.ಡಿ.ಪಿ. ಸಭೆ ನಡೆಸಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.

ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಜನಪ್ರತಿನಿಧಿಗಳ ನ್ಯಾಯಾಲಯದ ಆದೇಶದಂತೆ 17 ಎ ಪ್ರಕಾರ ಎಫ್‌ಐಆರ್‌ ದಾಖಲಾಗಿದೆ. ಆದರೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಮೇಲೂ ಚುನಾವಣಾ ಬಾಂಡ್ ಸಂಬಂಧ ‌ಎಫ್‌ಐಆರ್‌ ದಾಖಲಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧವೂ ಎಫ್‌ಐಆರ್‌ ಆಗಿದೆ. ಅವರು ರಾಜೀನಾಮೆ ನೀಡಬೇಕಾಗುತ್ತದೆ ಎಂದು ಹೇಳಿದರು.

ಬಿಜೆಪಿಯವರು ಸಿಎಂ ರಾಜೀನಾಮೆ ಕೊಡುತ್ತಾರೆ ಎಂದು ಹೇಳುತ್ತಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ಮೊದಲು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ರಾಜೀನಾಮೆ ನೀಡಲಿ ಎಂದು ಹೇಳಿದರು.

Full View

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News