ಕೇಂದ್ರದಿಂದ ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸಲು ಹುನ್ನಾರ: ಸಿಎಂ ಸಿದ್ದರಾಮಯ್ಯ

Update: 2024-07-23 06:16 GMT

ಬೆಂಗಳೂರು: ವಾಲ್ಮೀಕಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಮತ್ತು ಮಾಜಿ ಸಚಿವ ಬಿ. ನಾಗೇಂದ್ರ ಅವರ ಹೆಸರು ಹೇಳುವಂತೆ ಪರಿಶಿಷ್ಟ ವರ್ಗಗಳ ಅಭಿವೃದ್ಧಿ ಇಲಾಖೆಯ ನಿರ್ದೇಶಕರಾಗಿದ್ದ ಬಿ. ಕಲ್ಲೇಶಪ್ಪ ಅವರಿಗೆ ಇ.ಡಿ ಆಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ವಿಧಾನಸೌಧದ ಆವರಣದಲ್ಲಿರುವ ಗಾಂಧಿ ಪ್ರತಿಮೆಯ ಮುಂಭಾಗದಲ್ಲಿ ಮುಖ್ಯಮಂತ್ರಿ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದ ಸಚಿವರು, ಶಾಸಕರು ಮಂಗಳವಾರ ಧರಣಿ ನಡೆಸಿದರು.

ಈ ವೇಳೆ ಸುದ್ದಿಗಾರರ ಜೊತೆ ಮಾತನಾಡಿದ ಮುಖ್ಯಮಂತ್ರಿಗಳು, ‘ಕಾನೂನು ರೀತಿಯ ಹೋರಾಟ ಮಾಡಲು ನಾವು ತಯಾರಿದ್ದೇವೆ. ಯಾರ ಮುಲಾಜಿಗೂ ಒಳಗಾಗುವುದಿಲ್ಲ. ಯಾರನ್ನೂ ರಕ್ಷಣೆ ಮಾಡುವುದಿಲ್ಲ. ತಪ್ಪಿತಸ್ಥರು ಯಾರೇ ಇದ್ದರೂ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.

‘ನನಗೂ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೂ ಯಾವುದೇ ಸಂಬಂಧ ಇಲ್ಲ. ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ನಿರ್ದೇಶಕರಾಗಿದ್ದ ಕಲ್ಲೇಶ್‌ ಅವರನ್ನು ವಿಚಾರಣೆಗೆ ಕರೆದು ಬೆದರಿಸಿ ನನ್ನ ಹೆಸರು ಹೇಳುವಂತೆ ಒತ್ತಡ ಹೇರುತ್ತಿದ್ದಾರೆ. ಈ ವಿಚಾರವನ್ನು ವಿಧಾನಸಭೆ ಹಾಗೂ ವಿಧಾನ ಪರಿಷತ್‌ನಲ್ಲಿ ನಾವು ಪ್ರಸ್ತಾಪಿಸುತ್ತೇವೆ. ರಾಜಕೀಯ ದ್ವೇಷ, ರಾಜಕೀಯ ಸೇಡಿನ ಬಗ್ಗೆ ತೀವ್ರವಾಗಿ ಖಂಡಿಸುತ್ತೇವೆ. ಹೈಕಮಾಂಡ್ ನಾಯಕರ ಜೊತೆಗೂ ನಾವು ಈ ಬಗ್ಗೆ ಮಾತನಾಡಿದ್ದೇವೆ. ಲೋಕಸಭೆಯಲ್ಲಿಯೂ ವಿಷಯ ಪ್ರಸ್ತಾಪಿಸಲು ಹೇಳಿದ್ದೇವೆ’ ಎಂದರು.

ವಾಲ್ಮೀಕಿ ಹಗರಣಕ್ಕೂ ರಾಜ್ಯ ಸರ್ಕಾರಕ್ಕೂ ಯಾವುದೇ ಸಂಬಂಧ ಇಲ್ಲ. ಆದರೂ, ಈ ಪ್ರಕರಣ ಮುಂದಿಟ್ಟು ರಾಜ್ಯ ಸರ್ಕಾರವನ್ನು ದುರ್ಬಲಗೊಳಿಸುವ ಯತ್ನಗಳು ನಡೆಯುತ್ತಿವೆ. ಇಡಿ ಅಧಿಕಾರಿಗಳು ಬೆದರಿಕೆಯೊಡ್ಡಿರುವ ಬಗ್ಗೆ ಪೊಲೀಸರಿಗೆ ಕಲ್ಲೇಶ್‌ ಅವರು ದೂರು ನೀಡಿದ್ದು ಎಫ್‌ಐಆರ್‌ ಕೂಡಾ ದಾಖಲಾಗಿದೆ. ಕೇಂದ್ರ ಸರ್ಕಾರ ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸಲು ಹುನ್ನಾರ ನಡೆಸುತ್ತಿದೆ ಎಂದರು.

‘ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಹಣ ಅಕ್ರಮ ವರ್ಗಾವಣೆ ಪ್ರಕರಣವನ್ನು ಎಸ್ಐಟಿ, ಸಿಬಿಐ, ಇ.ಡಿ ಹೀಗೆ ಮೂರು ಸಂಸ್ಥೆಗಳು ತನಿಖೆ ನಡೆಸುತ್ತಿವೆ. ಒಂದೇ ಪ್ರಕರಣದಲ್ಲಿ ಮೂರು ತನಿಖಾ ಸಂಸ್ಥೆಗಳು ತನಿಖೆ ಮಾಡುತ್ತಿರುವುದು ವಿಶೇಷ. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಅಕ್ರಮ ನಡೆದಿಲ್ಲ ಎಂದು ನಾವು ಯಾವತ್ತೂ ಹೇಳಿಲ್ಲ. ಹಿಂದೆ ಬಿಜೆಪಿ ಅವಧಿಯಲ್ಲಿ ನಡೆದ ಹಗರಣಗಳನ್ನು ಈಡಿ ತನಿಖೆಯೇ ಮಾಡಿಲ್ಲ. ಸಿಬಿಐಗೂ ಕೊಟ್ಟಿಲ್ಲ. ಕೇಂದ್ರದಲ್ಲಿ ಅವರದ್ದೇ (ಬಿಜೆಪಿ) ಸರ್ಕಾರ ಇರುವುದರಿಂದ ಈಗ ಸಿಬಿಐಗೆ ಕೊಡಿ, ಸಿಬಿಐಗೆ ಕೊಡಿ ಎಂದು ಹೇಳುತ್ತಿದ್ದಾರೆ’ ಎಂದರು.

ನಾವು ಎಸ್ಐಟಿ ರಚನೆ ಮಾಡಿದ ಮೇಲೆ ತ್ವರಿತವಾಗಿ ತನಿಖೆ ನಡೆಯುತ್ತಿದ್ದು, ಶೇ 90ರಷ್ಟು ತನಿಖೆ ಮುಗಿದಿದೆ. ಅಗತ್ಯವಿರುವಪ್ರಕರಣಗಳನ್ನು ನಾವು ಸಿಬಿಐಗೆ ಕೊಟ್ಟಿದ್ದೇವೆ. ₹ 25 ಕೋಟಿಗಿಂತ ಹೆಚ್ಚು ಮೊತ್ತದ ಹಗರಣ ನಡೆದರೆ ಸಿಬಿಐ ತನಿಖೆ ಮಾಡಲಿ. ನಮ್ಮದೇನು‌ ತಕರಾರು ಇಲ್ಲ. ಆದರೆ ಕಾನೂನು ಬಾಹಿರವಾಗಿ ಯಾರನ್ನೂ ಗುರಿಯಾಗಿಸಿಕೊಂಡು ತನಿಖೆ ಮಾಡಬಾರದು. ಚುನಾಯಿತ ಸರ್ಕಾರವನ್ನು ಅಸ್ಥಿರಗೊಳಿಸಲು ಹೋಗಬಾರದು’ ಎಂದರು.

‘ನಿಗಮದಲ್ಲಿ ₹ 187 ಕೋಟಿ ದುರುಪಯೋಗ ಆಗಿದೆ ಎಂದು ವಿರೋಧ ಪಕ್ಷದವರು ಪದೇ ಪದೇ ಹೇಳುತ್ತಿದ್ದಾರೆ. ಎಂ.ಜಿ ರಸ್ತೆಯ ಯೂನಿಯನ್‌ ಬ್ಯಾಂಕ್‌ ನಿಂದ ತೆಲಂಗಾಣಕ್ಕೆ ಹೋಗಿರುವುದು ₹ 89.63 ಕೋಟಿ ಮಾತ್ರ. ಅದರಲ್ಲಿ ₹ 34 ಕೋಟಿ ನಗದು ವಸೂಲಿ ಆಗಿದೆ. ಇಡಿ ಅಧಿಕಾರಿಗಳು ಮಾಜಿ ಸಚಿವ ಬಿ. ನಾಗೇಂದ್ರ ಮತ್ತು ಶಾಸಕ ದದ್ದಲ್ ಮನೆ ಮೇಲೆ ದಾಳಿ ಮಾಡಿದ್ದಾರೆ. ನಾಗೇಂದ್ರ ಅವರನ್ನು ವಶಕ್ಕೆ ಪಡೆದು, ನ್ಯಾಯಾಂಗದ ಬಂಧನಕ್ಕೆ ಒಪ್ಪಿಸಿದ್ದಾರೆ ಎಂದರು.

‘ಅಕ್ರಮವಾಗಿ ಹಣ ವರ್ಗಾವಣೆಯಾಗಲು ಬ್ಯಾಂಕಿನವರು ಕಾರಣ ಎಂದು ಬ್ಯಾಂಕಿನ ಅಧಿಕಾರಿಗಳೇ ದೂರು ಕೊಟ್ಟಿದ್ದಾರೆ. ಹೀಗಾಗಿ ಸಿಬಿಐನವರು ತನಿಖೆ ಮಾಡುತ್ತಿದ್ದಾರೆ. ಆದರೆ ಈ ಮಧ್ಯೆ ಹಣ ವರ್ಗಾವಣೆಗೆ ಮುಖ್ಯಮಂತ್ರಿ ಆದೇಶ ಇತ್ತು ಎಂದು ಬರೆದುಕೊಡುವಂತೆ ಇಡಿಯವರು ಒತ್ತಡ ಹಾಕುತ್ತಿದ್ದಾರೆ ಎಂದು ಆರೋಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News