ಸುಪಾರಿ, ಹನಿಟ್ರ್ಯಾಪ್ ವಿಷಯ ಹೊರಬರಲು ಸಿಬಿಐ ತನಿಖೆ ಅನಿವಾರ್ಯ : ಛಲವಾದಿ ನಾರಾಯಣಸ್ವಾಮಿ
ಬೆಂಗಳೂರು : ಗುತ್ತಿಗೆದಾರ ಸಚಿನ್ ಪ್ರಾಣತ್ಯಾಗ ಯಾಕಾಗಿದೆ ಎಂದು ತನಿಖೆ ಮಾಡುವವರು ಹೇಳಬೇಕಿದೆ. ಸುಪಾರಿ ಕೊಟ್ಟ ವಿಷಯ, ಹನಿಟ್ರ್ಯಾಪ್ ವಿಷಯವೂ ಇದರ ಜೊತೆಗಿದ್ದು, ಸುಪಾರಿಯಲ್ಲಿ ಮಹಾರಾಷ್ಟ್ರದ ಸೋಲ್ಲಾಪುರದವರ ಹೆಸರುಗಳಿವೆ. ಇದು ಅಂತರರಾಜ್ಯ ವಿಚಾರವಾಗಿದ್ದು, ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆಗ್ರಹಿಸಿದರು.
ಮಂಗಳವಾರ ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ವಿಷಯವನ್ನು ವೈಯಕ್ತಿಕವಾಗಿ ತೆಗೆದುಕೊಂಡು ಸಚಿವ ಪ್ರಿಯಾಂಕ್ ಖರ್ಗೆಯವರು ಬಿಜೆಪಿ ಮತ್ತು ನಮ್ಮ ನಾಯಕರಿಗೆ ಸವಾಲು ಹಾಕಿದ್ದಾರೆ. ಬಟ್ಟೆ ಹರಿದುಕೊಂಡರೂ ರಾಜೀನಾಮೆ ಕೊಡುವುದಿಲ್ಲ ಎಂದಿದ್ದಾರೆ. ಇದರರ್ಥ ಏನು? ಹೋರಾಟಕ್ಕೆ ಬೆಲೆ ಇಲ್ಲವೇ? ನ್ಯಾಯ ಕೇಳುವುದು ತಪ್ಪೇ ಎಂದು ಪ್ರಶ್ನಿಸಿದರು.
ವಿಪಕ್ಷದಲ್ಲಿದ್ದಾಗ ತಪ್ಪು ಮಾಡಿದ್ದನ್ನು ಕೇಳುವುದು ನಮ್ಮ ಅಧಿಕಾರ ಮತ್ತು ಹಕ್ಕು. ಉತ್ತರ ಹೇಗೆ ಕೊಡಬೇಕೆಂದು ಗೊತ್ತಾಗದೆ ಇದ್ದರೆ ಪ್ರಿಯಾಂಕ್ ಖರ್ಗೆ ಬೇರೆಯವರನ್ನು ಕೇಳಿ ತಿಳಿದುಕೊಳ್ಳಲಿ. ನಿಮ್ಮನ್ನು ಟಾರ್ಗೆಟ್ ಮಾಡಿ ಬಿಜೆಪಿಗೆ ಏನೂ ಆಗಬೇಕಾಗಿಲ್ಲ. ಬಟ್ಟೆ ಹರಿದುಕೊಳ್ಳುವ ಕೆಲಸವನ್ನು ನೀವು ಮಾಡಿದ್ದೀರಿ. ನಿಮ್ಮ ಬಟ್ಟೆ ಹರಿಯಲು ನಾವು ಬರುವುದಿಲ್ಲ ಎಂದು ಅವರು ಟೀಕಿಸಿದರು.
ಆಪಾದನೆ ಬಂದಾಗ ಯಾವ ರೀತಿ ಎದುರಿಸಬೇಕೆಂದು ಪ್ರಿಯಾಂಕ್ ಖರ್ಗೆ ಕಲಿತುಕೊಳ್ಳಬೇಕು. ನಾವು ನ್ಯಾಯ ಕೇಳುತ್ತಿದ್ದೇವೆ. ನೀವು ಭಿತ್ತಿಪತ್ರ ಅಂಟಿಸಿದ ಮಾದರಿಯಲ್ಲೇ ನಾವು ನಿಮ್ಮ ರಾಜೀನಾಮೆಗೆ ಆಗ್ರಹಿಸಿ ಭಿತ್ತಿಪತ್ರ ಅಂಟಿಸಿದ್ದೇವೆ ಎಂದು ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಆಗ್ರಹಿಸಿ ನಡೆಸಿದ ಪೋಸ್ಟರ್ ಅಭಿಯಾನವನ್ನು ಛಲವಾದಿ ನಾರಾಯಣಸ್ವಾಮಿ ಸಮರ್ಥಿಸಿಕೊಂಡರು.
ಪೊಲೀಸರು ನ್ಯಾಯ ಕೊಡಿಸುವ ಭರವಸೆ ಇಲ್ಲ, ಸಿಐಡಿ ತನಿಖೆ ಬೇಕಾಗಿಲ್ಲ. ಸಿಬಿಐಗೆ ಒಪ್ಪಿಸಿ ನ್ಯಾಯ ಕೊಡಿಸಿ ಎಂದು ಮೃತರ ಸೋದರಿಯರು ಮನವಿ ಮಾಡಿದ್ದಾರೆ ಎಂದು ಛಲವಾದಿ ನಾರಾಯಣ ಸ್ವಾಮಿ ತಿಳಿಸಿದರು.