ಚಿಕ್ಕಮಗಳೂರಿನಲ್ಲಿ ತಗ್ಗಿದ ಮಳೆ; ಪ್ರವಾಸಿ ತಾಣಗಳಿಗೆ ನಿರ್ಬಂಧ

Update: 2023-07-28 18:01 GMT

ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಶುಕ್ರವಾರ ಮಳೆ ಕೊಂಚ ಬಿಡುವು ನೀಡಿದ್ದು, ಅಲ್ಲಲ್ಲಿ ತುಂತುರು ಮಳೆಯೊಂದಿಗೆ ಮೋಡಕವಿದ ವಾತಾವರಣ ನಿರ್ಮಾಣವಾಗಿದೆ. ಜಿಲ್ಲೆಯ ಮಲೆನಾಡು ಭಾಗದಲ್ಲಿ ಆಗಾಗ್ಗೆ ಸಾಧಾರಣ ಮಳೆಯಾಗುತ್ತಿದ್ದರೆ, ಬಯಲು ಭಾಗದಾದ್ಯಂತ ಮೋಡಕವಿದ ವಾತಾವರಣ ಹಾಗೂ ತುಂತುರು ಮಳೆಯಾಗುತ್ತಿದೆ. ಮುಂದಿನ ಕೆಲ ದಿನಗಳವರೆಗೆ ಜಿಲ್ಲೆಯಲ್ಲಿ ಭಾರೀ ಮಳೆ ಮುಂದುವರಿಯುವ ಸಾಧ್ಯತೆಗಳ ಹಿನ್ನೆಲೆಯಲ್ಲಿ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಜಿಲ್ಲಾಡಳಿತ ತಾತ್ಕಾಲಿಕವಾಗಿ ನಿರ್ಬಂಧ ಹೇರಿದೆ.

ಭಾರೀ ಮಳೆ ಕ್ಷೀಣಿಸಿರುವ ಹಿನ್ನೆಲೆಯಲ್ಲಿ ಮಲೆನಾಡು ಭಾಗದ ಕಾಫಿ, ಅಡಿಕೆ ತೋಟಗಳು ಹಾಗೂ ಭತ್ತದ ಗದ್ದೆಗಳಲ್ಲಿ ಕೃಷಿ ಚಟುವಟಿಕೆ ಬಿರುಸು ಪಡೆದುಕೊಂಡಿದೆ.

ಇನ್ನು ಚಿಕ್ಕಮಗಳೂರು ತಾಲೂಕು ಸೇರಿದಂತೆ ಕಡೂರು, ತರೀಕೆರೆ, ಅಜ್ಜಂಪುರ ತಾಲೂಕು ವ್ಯಾಪ್ತಿಯಲ್ಲಿ ಶುಕ್ರವಾರ ಇಡೀ ದಿನ ಆಗಾಗ್ಗೆ ತುಂತುರು ಮಳೆಯಾಗಿದೆ. ಮಳೆ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಬಯಲು ಭಾಗದಲ್ಲೂ ಕೃಷಿ ಚಟುವಟಿಕೆ ಗರಿಗೆದರಿಕೊಂಡಿದ್ದು, ರೈತರು ಬಿತ್ತನೆ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಶುಕ್ರವಾರ ಮಳೆ ಕೊಂಚ ಕಡಿಮೆಯಾಗಿದ್ದರೂ ಹೇಮಾವತಿ, ತುಂಗಾ, ಭದ್ರಾ ಸೇರಿದಂತೆ ಹಳ್ಳ, ಕೊಳ್ಳಗಳು ತುಂಬಿ ಹರಿಯುತ್ತಿವೆ.

ಕೆಲವೇ ದಿನಗಳಲ್ಲಿ ಭರ್ತಿಯಾದ ಮದಗದ ಕೆರೆ: ಜಿಲ್ಲೆಯ ಮುಳ್ಳಯ್ಯನಗಿರಿ ಸುತ್ತಮುತ್ತ ಕಳೆದೊಂದು ವಾರದಿಂದ ಭಾರೀ ಮಳೆಯಾಗಿದ್ದು, ಈ ಭಾಗದಲ್ಲಿ ಸುರಿದ ಮಳೆಯಿಂದಾಗಿ ಕಡೂರು ತಾಲೂಕಿನ ಮದಗದ ಕೆರೆಗೆ ಭಾರೀ ಪ್ರಮಾಣದಲ್ಲಿ ನೀರು ಹರಿದು ಬಂದಿದೆ. ಸದ್ಯ ಕೆರೆ ಭರ್ತಿಯಾಗಿದ್ದು, ಕೋಡಿ ಬೀಳಲು ಕ್ಷಣಗಣನೆ ಆರಂಭವಾಗಿದೆ. ಕಳೆದ ಒಂದು ತಿಂಗಳ ಹಿಂದೆ ಮದಗದ ಕೆರೆ ನೀರಿನಲ್ಲದೇ ಒಣಗಿ ಹೋಗಿತ್ತು. ಗಿರಿ ಭಾಗದಲ್ಲಿ ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ಕೆಲವೇ ದಿನಗಳಲ್ಲಿ ಈ ಕೆರೆಗೆ ನೀರು ಹರಿದು ಬಂದಿದೆ. ಕೆರೆ ಭರ್ತಿಯಾಗಿರುವ ಸುದ್ದಿಯಿಂದಾಗಿ ಸುತ್ತಮುಲ್ಲ ಗ್ರಾಮಗಳ ಜನರು, ರೈತರು ಸಂತಸಗೊಂಡಿದ್ದಾರೆ. ಈ ಕೆರೆ ಕೋಡಿ ಬಿದ್ದಲ್ಲಿ ಕಡೂರು ತಾಲೂಕಿನ ನೂರಾರು ಹಳ್ಳಿಗಳ ರೈತರಿಗೆ ಅನುಕೂಲವಾಗಲಿದೆ. ಅಲ್ಲದೇ ತುಮಕೂರು ಜಿಲ್ಲೆಯ ವಾಣಿವಿಲಾಸ ಜಲಾಶಯಕ್ಕೂ ಈ ಕೆರೆಯ ನೀರು ನಾಲೆ ಮೂಲಕ ಸೇರಲಿದೆ.

ಪ್ರವಾಸಿ ತಾಣಗಳಿಗೆ ನಿರ್ಬಂಧ: ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ಭಾರೀ ಸುರಿದು ಅಲ್ಲಲ್ಲಿ ರಸ್ತೆ, ಮನೆ, ಭೂಕುಸಿತದಂತಹ ಅವಘಡಗಳು ಸಂಭವಿಸಿವೆ. ಝರಿ ಜಲಪಾತಗಳು ಧುಮ್ಮಿಕ್ಕಿ ಹರಿಯುತ್ತಿವೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯ ಪ್ರವಾಸಿತಾಣಗಳಿಗೆ ಪ್ರವಾಸಿಗರಿಗೆ ನಿರ್ಬಂಧ ಹೇರಿದೆ. ಭಾರೀ ಮಳೆ ಇದ್ದ ಸಂದರ್ಭದಲ್ಲೂ ಪ್ರವಾಸಿಗರು ಅಪಾಯ ಲೆಕ್ಕಿಸದೇ ಪ್ರವಾಸಿ ತಾಣಗಳಿಗೆ ಹರಿದು ಬರಲಾರಂಭಿಸಿದ್ದರು. ಪ್ರವಾಸವನ್ನು ಮುಂದೂಡುವಂತೆ ಜಿಲ್ಲಾಡಳಿತ ಮನವಿ ಮಾಡಿದರೂ ಇದಕ್ಕೆ ಪ್ರವಾಸಿಗರು ಕ್ಯಾರೆ ಎಂದಿರಲಿಲ್ಲ. ಝರಿ, ಜಲಪಾತಗಳಿಗೆ ತೆರಳಿ ಪ್ರವಾಸಿಗರು ಪುಂಡಾಟ ಮೆರೆಯುತ್ತಿದ್ದ ಘಟನೆಗಳು ವರದಿಯಾಗಿದ್ದವು. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಮುಳ್ಳಯ್ಯನಗಿರಿ, ಬಾಬಾ ಬುಡನ್‍ಗಿರಿ, ಸೀತಾಳಯ್ಯನಗಿರಿ, ಹೊನ್ನಮ್ಮನಹಳ್ಳದಂತಹ ಪ್ರವಾಸಿ ತಾಣಗಳಿಗೆ ತೆರಳುವುದಕ್ಕೆ ಜಿಲ್ಲಾಡಳಿತ ನಿರ್ಬಂಧ ಹೇರಿದ್ದು, ಮುಂದಿನ ಮೂರು ದಿನಗಳ ಕಾಲ ಗಿರಿ ಭಾಗ ಸೇರಿದಂತೆ ಕೆಲ ಪ್ರವಾಸಿ ತಾಣಗಳಿಗೆ ನಿರ್ಬಂಧ ಹೇರಲಾಗಿದೆ. ಮುಳ್ಳಯ್ಯನಗಿರಿಗೆ ತೆರಳುವ ಕೈಮರ ಚೆಕ್‍ಪೋಸ್ಟ್ ಬಳಿ ಪ್ರವಾಸಿಗರ ವಾಹನಗಳನ್ನು ತಡೆಯುತ್ತಿರುವ ಪೊಲೀಸರು ವಾಹನಗಳನ್ನು ಹಿಂದಕ್ಕೆ ಕಳುಹಿಸುತ್ತಿದ್ದಾರೆ. ಶೃಂಗೇರಿ, ಕಳಸ, ಮೂಡಿಗೆರೆ ಸೇರಿದಂತೆ ಜಿಲ್ಲಾದ್ಯಂತ ಇರುವ ಝರಿ, ಜಲಪಾತಗಳಿಗೆ ತೆರಳುವುದನ್ನು ತಡೆಯಲು ಸ್ಥಳೀಯ ಪೊಲೀಸರ ಮೂಲಕ ಕ್ರಮವಹಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News