ಚಿಕ್ಕಮಗಳೂರು: ಅಮಾನತಾದ ಪೊಲೀಸರನ್ನು ಬೆಂಬಲಿಸಿ ಬೀದಿಗಿಳಿದ ಸಿಬ್ಬಂದಿ, ಕುಟುಂಬಸ್ಥರು

Update: 2023-12-02 18:59 GMT

ಚಿಕ್ಕಮಗಳೂರು: ನಗರದಲ್ಲಿ ವಕೀಲರೊಬ್ಬರ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದಾರೆಂಬ ಆರೋಪ ಸಂಬಂಧ ನಗರ ಠಾಣೆಯ ಪಿಎಸ್‌ ಐ ಸೇರಿದಂತೆ 6ಮಂದಿ ಪೊಲೀಸರನ್ನು ಅಮಾನತು ಮಾಡಿ ಎಸ್ಪಿ ಆದೇಶಿಸಿದ್ದು, ಬಂಧನದ ಭೀತಿಯಲ್ಲಿರುವ 6ಮಂದಿ ಪೊಲೀಸರ ಪರ ನಗರ ವ್ಯಾಪ್ತಿಯ ವಿವಿಧ ಪೊಲೀಸ್ ಠಾಣೆಗಳ ಸಿಬ್ಬಂದಿ ಶನಿವಾರ ರಾತ್ರಿ ನಗರದ ಹನುಮಂತಪ್ಪ ವೃತ್ತದಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದು, ಪೊಲೀಸರ ಪ್ರತಿಭಟನೆಗೆ ಪೊಲೀಸರ ಕುಟುಂಬಸ್ಥರು ಸಾತ್ ನೀಡಿದ್ದರು. ಈ ವೇಳೆ ಸ್ಥಳಕ್ಕೆ ಐಜಿಪಿ ಚಂದ್ರಗುಪ್ತ ಭೇಟಿ ನೀಡಿ ಸೂಕ್ತ ಕ್ರಮದ ಭರವಸೆ ನೀಡಿದರೂ ಧರಣಿ ಕೇಳಲಿಲ್ಲ. ಪರಿಣಾಮ ನಗರದ ಹನುಮಂತಪ್ಪ ವೃತ್ತದಲ್ಲಿ ವಾಹನ ಸಂಚಾರ ಸ್ತಬ್ಧಗೊಂಡಿದೆ.

ಶನಿವಾರ ರಾತ್ರಿ ನಗರ ಠಾಣೆ ಎದುರು ಕೆಲಸ ಸ್ಥಗಿತಗೊಳಿಸಿ ಜಮಾಯಿಸಿದ ನಗರ ವ್ಯಾಪ್ತಿಯ 6 ಪೊಲೀಸ್ ಠಾಣಾ ವ್ಯಾಪ್ತಿಯ ಪೊಲೀಸರು ಹಾಗೂ ಕಟುಂಬಸ್ಥರು, ಸಾರ್ವಜನಿಕರಿಗೆ ರಕ್ಷಣೆ ನೀಡುತ್ತಿರುವ ಪೊಲೀಸರಿಗೆ ರಕ್ಷಣೆ ಇಲ್ಲದಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಈ ವೇಳೆ ಸ್ಥಳಕ್ಕೆ ಆಗಮಿಸಿದ ಎಸ್ಪಿ ಅವರ ಬಳಿ ಪೊಲೀಸರು ಅಳಲು ತೋಡಿಕೊಂಡರು.

ಹೆಲ್ಮೇಟ್ ವಿಚಾರಕ್ಕೆ ಪೊಲೀಸರೊಂದಿಗೆ ವಾಗ್ವಾದ ನಡೆಸಿರುವ ವಕೀಲ ಪ್ರೀತಮ್ ಠಾಣೆಯ ಬಳಿ ಪೊಲೀಸ್ ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ. ವಕೀಲ ಪ್ರೀತಮ್ ಬೆಂಬಲಕ್ಕೆ ಬಂದ ವಕೀಲರ ಗುಂಪು ಪೊಲೀಸರ ಕೆಲಸಕ್ಕೆ ಅಡ್ಡಿ ಪಡಿಸಿದ್ದಾರೆ. ಪೊಲೀಸರು ತಮ್ಮ ಕರ್ತವ್ಯ ಪಾಲಿಸಿದ್ದಕ್ಕೆ ಅಮಾನತು ಶಿಕ್ಷೆ ನೀಡಲಾಗಿದೆ. ಜನರಿಗೆ ರಕ್ಷಣೆ ನೀಡಲು ಸಾಧ್ಯವಾಗದ ಸ್ಥಳದಲ್ಲಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಜನರಿಗೆ ರಕ್ಷಣೆ ನೀಡುವ ಪೊಲೀಸರಿಗೆ ರಕ್ಷಣೆ ಇಲ್ಲದಂತಾಗಿದೆ. ಪೊಲೀಸ್ ಠಾಣೆ ಬಳಿ ಗುಂಪು ಸೇರಿಸಿಕೊಂಡು ಪೊಲೀಸರ ಕೆಲಸಕ್ಕೆ ಅಡ್ಡಿ ಪಡಿಸಿದ ವಕೀಲರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದರು..

ಪೊಲೀಸರು ಹಾಗೂ ಕುಟುಂಬಸ್ಥರ ಅಳಲು ಕೇಳಿದ ಎಸ್ಪಿ ಡಾ.ವಿಕ್ರಮ್ ಅಮಟೆ, ವ್ಯಾಜ್ಯ ಹೈಕೋರ್ಟ್ ಮೆಟ್ಟಿಲೇರಿದ್ದು, ಪ್ರಕರಣದ ತನಿಖೆ ನಡೆಯುತ್ತಿದೆ. ತಪ್ಪಿತಸ್ಥರಿಗೆ ಶಿಕ್ಷೆಯಾಗಲಿದ್ದು, ನಿರಪರಾಧಿಗಳಿಗೆ ಕಾನೂನಿನ ರಕ್ಷಣೆ ಸಿಗಲಿದೆ ಎಂದು ಭರವಸೆ ನೀಡಿ, ಪೊಲೀಸರು ಕರ್ತವ್ಯಕ್ಕೆ ಮರಳಬೇಕೆಂದು ಸೂಚಿಸಿದರು. ಆದರೆ ಎಸ್ಪಿ ಮಾತಿಗೆ ಒಪ್ಪದ ಪೊಲೀಸ್ ಸಿಬ್ಬಂದಿ ಹಾಗೂ ಅವರ ಕುಟುಂಬಸ್ಥರು ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ವಕೀಲರ ವಿರುದ್ಧವೂ ಪ್ರಕರಣ ದಾಖಲಿಸಬೇಕು. ಅಮಾನತುಗೊಂಡಿರುವ ಪೊಲೀಸರ ವಿರುದ್ಧದ ಪ್ರಕರಣವನ್ನು ಹಿಂಪಡೆಯಬೇಕೆಂದು ಪಟ್ಟು ಹಿಡಿದು ರಸ್ತೆಯಲ್ಲಿ ಕುಳಿತು ಧರಣಿ ಮುಂದುವರಿಸಿದರು. ಪೊಲೀಸರ ಧರಣಿಗೆ ಸಾರ್ವಜನಿಕರು, ಸಂಘ ಸಂಸ್ಥೆಗಳ ಮುಖಂಡರೂ ಬೆಂಬಲ ನೀಡಿ ಧರಣಿಯಲ್ಲಿ ಭಾಗವಹಿಸಿದ್ದರು.

ಐಜಿಪಿ ಮನವೊಲಿಕೆಗೂ ಬಗ್ಗದ ಸಿಬ್ಬಂದಿ, ಕುಟುಂಬಸ್ಥರು: ಪೊಲೀಸ್ ಸಿಬ್ಬಂದಿಯ ಧರಣಿ ಸ್ಥಳಕ್ಕೆ ಶನಿವಾರ ರಾತ್ರಿ ಐಜಿಪಿ ಚಂದ್ರಗುಪ್ತ ಆಗಮಿಸಿದ್ದು, ಈ ವೇಳೆ ಪೊಲೀಸರ ಕುಟುಂಬಸ್ಥರು ಐಜಿಗೆ ಮುತ್ತಿಗೆ ಹಾಕಿ ಪೊಲೀಸರಿಗೆ ರಕ್ಷಣೆ ನೀಡಬೇಕು, ಪೊಲೀಸರ ಕೆಲಸಕ್ಕೆ ಅಡ್ಡಿ ಪಡಿಸಿದ ವಕೀಲರ ವಿರುದ್ಧವೂ ಎಫ್‍ಐಆರ್ ದಾಖಲಿಸಬೇಕೆಂದು ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಐಜಿ ಚಂದ್ರಗುಪ್ತ, ಸೂಕ್ತ ಕ್ರಮದ ಭರವಸೆ ನೀಡಿದರು. ಆದರೆ ಐಜಿಪಿ ಮಾತಿಗೂ ಬಗ್ಗದ ಪೊಲೀಸರು ಹನುಮಂತಪ್ಪ ವೃತ್ತದಲ್ಲಿ ಧರಣಿಯನ್ನು ಮುಂದುವರಿಸಿದ್ದು, ವಕೀಲರ ವಿರುದ್ಧ ಎಫಐಆರ್ ದಾಖಲಿಸದ ಹೊರತು ಧರಣಿ ಕೈಬಿಡುವುದಿಲ್ಲ ಎಂದು ಪಟ್ಟು ಹಿಡಿದು ರಸ್ತೆ ತಡೆ ಮಂದುವರಿಸಿದರು. ಸದ್ಯ ಸ್ಥಳದಲ್ಲಿ ಸಾವಿರಕ್ಕೂ ಹೆಚ್ಚು ಪೊಲೀಸರು ಜಮಾಯಿಸಿದ್ದು, ರಸ್ತೆಯಲ್ಲಿ ವಾಹನ ಸಂಚಾರ ಸ್ತಬ್ಧಗೊಂಡಿದೆ.

ಓರ್ವ ಪೊಲೀಸ್ ಸಿಬ್ಬಂದಿಯ ವಿಚಾರಣೆ: ಪೊಲೀಸ್ ಸಿಬ್ಬಂದಿಯ ಧರಣಿ ನಡುವೆಯೂ ವಕೀಲನ ಮೇಲೆ ಹಲ್ಲೆ ನಡೆಸಿದ ಪ್ರಕರಣದ ಆರೋಪಿಯಾಗಿರುವ 6 ಮಂಧಿ ಪೊಲೀಸರ ಪೈಕಿ ಗುರುಪ್ರಸಾದ್ ಎಂಬವರನ್ನು ಶನಿವಾರ ರಾತ್ರಿ  ಡಿವೈಎಸ್ಪಿ ಶೈಲೇಂದ್ರ ನೇತೃತ್ವದ ತಂಡ ವಿಚಾರಣೆಗೆ ವಶಕ್ಕೆ ಪಡೆದು ಬಳಿಕ ಬಿಡುಗಡೆಗೊಳಿಸಿದ್ದಾರೆ ಎಂದು ತಿಳಿದುಬಂದಿದೆ. 

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News