ಚಿಕ್ಕಮಗಳೂರು | ಬಾಡಿಗೆ ವಾಹನಗಳ ಪರವಾನಿಗೆ ನೀಡಲು ಲಂಚಕ್ಕೆ ಬೇಡಿಕೆ ಆರೋಪ: ಆರ್‍ಟಿಒ ಅಧಿಕಾರಿ ಸಹಿತ ಇಬ್ಬರು ಲೋಕಾಯುಕ್ತ ಬಲೆಗೆ

Update: 2023-09-04 14:22 GMT

ಮಧುರಾ | ಲತಾ

ಚಿಕ್ಕಮಗಳೂರು, ಸೆ.4: ನಗರದ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಮಹಿಳಾ ಆರ್‍ಟಿಒ ಹಾಗೂ ಅಟೆಂಡರ್ ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಅಧಿಕಾರಿ ಸೇರಿದಂತೆ ಅಟೆಂಡರ್ ನನ್ನು ವಶಕ್ಕೆ ಪಡೆದಿದ್ದಾರೆ.

ಪ್ರಾದೇಶಿಕ ಸಾರಿಗೆ ಅಧಿಕಾರಿ ಮಧುರಾ ಹಾಗೂ ಕಚೇರಿಯ ಅಟೆಂಡರ್ ಲತಾ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದವರಾಗಿದ್ದು, ನಗರದ ಕೆಂಪನಹಳ್ಳಿ ಬಡಾವಣೆ ನಿವಾಸಿ ಪ್ರಕಾಶ್ ಎಂಬವರು 8 ಬಾಡಿಗೆ ವಾಹನಗಳನ್ನು ಓಡಿಸಲು ಆರ್‍ಟಿಒ ಕಚೇರಿಯಿಂದ ಪರವಾನಿಗೆ ಪಡೆಯಲು ಅರ್ಜಿ ಸಲ್ಲಿಸಿದ್ದರು. ಅಧಿಕಾರಿಗಳು ಪ್ರಕಾಶ್ ಅವರ ಅರ್ಜಿಯನ್ನು ತಿರಸ್ಕರಿಸಿದ್ದರು. ಈ ಹಿನ್ನೆಲೆಯಲ್ಲಿ ಅವರು ಆರ್‍ಟಿಒ ಕಚೇರಿಗೆ ತೆರಳಿ ಅರ್ಜಿ ತಿರಸ್ಕಾರ ಸಂಬಂಧ ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿ ಮಧು ಅವರನ್ನು ಪ್ರಶ್ನಿಸಿದ್ದರು. ಈ ವೇಳೆ ಅವರು ಪ್ರತೀ ವಾಹನಕ್ಕೆ ತಲಾ 1 ಸಾವಿರದಂತೆ 8 ಸಾವಿರ ಹಣ ನೀಡಬೇಕೆಂದು ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ತಿಳಿದು ಬಂದಿದೆ.

ನಂತರ ಪ್ರಕಾಶ್ 5 ವಾಹನಗಳಿಗೆ ಪರವಾನಿಗೆ ನೀಡಬೇಕೆಂದು ಮತ್ತೆ ಅರ್ಜಿ ಸಲ್ಲಿಸಿ ಅದಕ್ಕೆ ಶುಲ್ಕವನ್ನೂ ಪಾವತಿಸಿದ್ದರು. ಅಲ್ಲದೇ ಮುಂಗಡವಾಗಿ 2 ಸಾವಿರ ರೂ. ಲಂಚವನ್ನು ಅಧಿಕಾರಿಗಳಿಗೆ ನೀಡಿದ್ದರೆಂದು ತಿಳಿದು ಬಂದಿದ್ದು, ಬಾಕಿ 3 ಸಾವಿರ ಹಣಕ್ಕೆ ಅಧಿಕಾರಿಗಳಿಬ್ಬರು ಪೀಡಿಸಿದ್ದರಿಂದ ಬೇಸತ್ತ ಪ್ರಕಾಶ್ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.

ದೂರಿನ ಮೇರೆಗೆ ಸೋಮವಾರ ಆರ್‍ಟಿಒ ಕಚೇರಿಯಲ್ಲಿ ಆರ್‍ಟಿಒ ಮಧುರಾ ಪರವಾಗಿ ಅಟೆಂಡರ್ ಲತಾ ಎಂಬವರು 3 ಸಾವಿರ ರೂ. ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಲಂಚದ ಹಣದೊಂದಿಗೆ ಅಟೆಂಡರ್ ಲತಾ ಪೊಲೀಸರ ಬಲೆಗೆ ಬಿದ್ದಿದ್ದು, ಅಟೆಂಡರ್ ಲತಾ ಆರ್‍ಟಿಒ ಅಧಿಕಾರಿ ಮಧುರಾ ಪರವಾಗಿ ಲಂಚ ಸ್ವೀಕರಿಸುತ್ತಿದ್ದರೆಂದು ತಿಳಿದು ಬಂದಿದೆ. ಲಂಚದ ಹಣದೊಂದಿಗೆ ಸಿಕ್ಕಿಬಿದ್ದ ಆರ್‍ಟಿಒ ಮಧುರಾ ಹಾಗೂ ಅಟೆಂಡರ್ ಲತಾರನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News