5 ವರ್ಷದೊಳಗಿನ ಮಗು ತಾಯಿಯೊಂದಿಗೆ ನೆಲೆಸಿರುವುದು ಕಾನೂನು ಬಾಹಿರವಲ್ಲ: ಹೈಕೋರ್ಟ್

Update: 2024-01-06 14:34 GMT

ಬೆಂಗಳೂರು: ತನ್ನ ತಾಯಿಯೊಂದಿಗೆ ಭಾರತದಲ್ಲಿ ನೆಲೆಸಿರುವ ನಾಲ್ಕು ವರ್ಷದ ಮಗಳನ್ನು ತನ್ನ ವಶಕ್ಕೆ ನೀಡಲು ನಿರ್ದೇಶಿಸುವಂತೆ ಕೋರಿ ಅಮೆರಿಕದಲ್ಲಿ ನೆಲೆಸಿರುವ ತಂದೆಯೊಬ್ಬರು ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿ ಆದೇಶಿಸಿದೆ. ಅಲ್ಲದೆ, ಐದು ವರ್ಷದೊಳಗಿನ ಮಗು ತಾಯಿಯೊಂದಿಗೆ ನೆಲೆಸಿರುವುದು ಕಾನೂನು ಬಾಹಿರವಲ್ಲ ಎಂದು ಹೈಕೋರ್ಟ್ ಆದೇಶಿಸಿದೆ.

ಅಮೆರಿಕ ನ್ಯಾಯಾಲಯದಲ್ಲಿ ವಿಚ್ಛೇದನ ಪಡೆಯುವ ಸಂದರ್ಭದಲ್ಲಿ ವಿಧಿಸಿರುವ ಷರತ್ತುಗಳನ್ನು ಉಲ್ಲಂಘಿಸಿ ಭಾರತಕ್ಕೆ ತನ್ನ ಮಗಳನ್ನು ಕರೆದೊಯ್ದಿದ್ದಾರೆ ಎಂದು ಆರೋಪಿಸಿ ಅಮೆರಿಕ ನಿವಾಸಿ ಭಾರತ ಮೂಲದ ವ್ಯಕ್ತಿ(ತಂದೆ) ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ನ್ಯಾಯಪೀಠವು ವಿಚಾರಣೆ ನಡೆಸಿತು.

ಅಲ್ಲದೆ, ನಾಲ್ಕು ವರ್ಷದ ಹೆಣ್ಣು ಮಗಳಿಗೆ ತನ್ನ ತಾಯಿ ಜೊತೆಗೆ ಮಾತ್ರ ನೆಮ್ಮದಿಯಿಂದ ಇರಬಹುದು ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ. ಪತಿ(ಅರ್ಜಿದಾರರು) ಆರ್ಥಿಕವಾಗಿ ಸದೃಢವಾಗಿದ್ದರೂ, ಪ್ರಸ್ತುತ ಪ್ರಕರಣದಲ್ಲಿ ದಂಪತಿ ಕಟುವಾದ ಹಗೆತನ ಹೊಂದಿದ್ದಾರೆ. ಈ ರೀತಿಯ ಸಂದರ್ಭದಲ್ಲಿ ಪತ್ನಿಯನ್ನು ಅಮೆರಿಕಗೆ ತೆರಳುವಂತೆ ಒತ್ತಾಯಿಸುವುದು ಸೂಕ್ತವಲ್ಲ ಎಂದು ಪೀಠ ತಿಳಿಸಿದೆ.

2022ರ ಸೆಪ್ಟಂಬರ್ ತಿಂಗಳಲ್ಲಿ ತಾಯಿ ಮಗಳೊಂದಿಗೆ ಭಾರತಕ್ಕೆ ತೆರಳಿದ್ದು ಜಮ್‍ಶೆಡ್‍ಪುರದಲ್ಲಿ ವಾಸಿಸುತ್ತಿದ್ದು, ಮಗುವನ್ನು ಶಾಲೆಗೆ ಕಳುಹಿಸುತ್ತಿದ್ದಾರೆ. ಆದರೆ, ಎಂಟು ತಿಂಗಳ ಬಳಿಕ ಅಂದರೆ 2023ರ ಮೇ 25ರಂದು ಅರ್ಜಿ ಸಲ್ಲಿಸಲಾಗಿದೆ. ಭಾರತಕ್ಕೆ ತೆರಳಿದ ಎಂಟು ತಿಂಗಳು ಕಳೆದಿದೆ. ಈ ಸಂದರ್ಭದಲ್ಲಿ ಮಗು ತನ್ನೊಟ್ಟಿಗೆ ಇರಲಿಲ್ಲ. ಇದು ಭಾವನಾತ್ಮಕವಾಗಿ ಕಾಡಿದೆ ಎಂದು ಅರ್ಜಿದಾರರು ತಿಳಿಸಿದ್ದಾರೆ. ಆದರೂ 8 ತಿಂಗಳ ಕಾಲ ಅರ್ಜಿದಾರರ ನ್ಯಾಯಾಲಯದ ಮೆಟ್ಟಿಲೇರಿಲ್ಲ ಎಂಬುದು ಮುಖ್ಯವಾಗಿ ಪರಿಗಣಿಸಬಹುದಾಗಿದೆ.

ಪ್ರಕರಣವನ್ನು ತಮ್ಮ ಕಚೇರಿಯಲ್ಲಿ ಮಾತ್ರ ವಿಚಾರಣೆಗೊಳಪಡಿಸಿದ ನ್ಯಾಯಪೀಠ, ಈ ಸಂದರ್ಭದಲ್ಲಿ ಮಗು ತಾಯಿಯೊಂದಿಗೆ ಮಾತ್ರ ನೆಮ್ಮದಿಯಾಗಿರುವುದಕ್ಕೆ ಅವಕಾಶವಿರಲಿದೆ ಎಂಬ ಅಂಶ ಗೊತ್ತಾಗಿದೆ. ಜತೆಗೆ ಅರ್ಜಿದಾರರು ಜೇಮ್‍ಶೆಡ್‍ಪುರದಲ್ಲಿ ನೆಲೆಸಿದ್ದ ಮಗಳನ್ನು ಭೇಟಿ ಮಾಡಬಹುದಾಗಿದೆ. ಫೋನ್ ಕರೆ ಮಾಡಿ ಮಾತನಾಡಬಹುದಾಗಿದೆ ಎಂದು ಪತ್ನಿ ಭರವಸೆ ನೀಡಿದ್ದಾರೆ ಎಂದು ತಿಳಿಸಿದ ನ್ಯಾಯಪೀಠ ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News