ವಿದ್ಯಾವಂತರಲ್ಲೇ ಜಾತಿಪ್ರಜ್ಞೆ ಹೆಚ್ಚಾಗುತ್ತಿದ್ದು, ಮಕ್ಕಳು ಮೌಢ್ಯದಿಂದ ಹೊರ ಬರಬೇಕು : ಸಿಎಂ ಸಿದ್ದರಾಮಯ್ಯ

Update: 2024-06-19 12:32 GMT

 ಬೆಂಗಳೂರು : ವಿದ್ಯಾವಂತರಲ್ಲೇ ಜಾತಿಪ್ರಜ್ಞೆ ಹೆಚ್ಚಾಗುತ್ತಿದೆ. ಡಾಕ್ಟರ್ ಓದಿದವರು ಇನ್ನೂ ಮೌಢ್ಯ ಬಿಟ್ಟಿಲ್ಲ. ಓದಿದವರೇ ಇನ್ನೂ ಹಣೆ ಬರಹದಲ್ಲಿ, ಕರ್ಮ ಸಿದ್ಧಾಂತದಲ್ಲಿ ನಂಬಿಕೆ ಇಟ್ಟುಕೊಂಡಿದ್ದಾರೆ. ಹೀಗಾಗಿ ವಿದ್ಯಾರ್ಥಿಗಳು ಇಂಥಾ ಮೌಡ್ಯದಲ್ಲಿ ನಂಬಿಕೆ ಇಡಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.

ಸಮಾಜ ಕಲ್ಯಾಣ ಇಲಾಖೆ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಸಂಯುಕ್ತಾಶ್ರಯದಲ್ಲಿ ಎಸೆಸೆಲ್ಸಿ ಮತ್ತು ಪಿಯುಸಿಯಲ್ಲಿ ಉತ್ತಮ ಸಾಧನೆಗೈದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಉತ್ತೇಜಿಸಿ ಮಾತನಾಡಿದರು.

ದಲಿತ ಸಂಘರ್ಷ ಸಮಿತಿ ರಾಜ್ಯದಲ್ಲಿ ನಡೆಸಿದ, "ನಮಗೆ ಸರಾಯಿ ಅಂಗಡಿ ಬೇಡ. ವಸತಿ ಶಾಲೆ ಬೇಕು" ಎನ್ನುವ ಹೋರಾಟದಿಂದ ಪ್ರೇರಿತನಾಗಿ ಮೊದಲ ಬಜೆಟ್ ಮಂಡಿಸುವ ವೇಳೆ ಗ್ರಾಮೀಣ ಭಾಗದಲ್ಲಿ ಮೊರಾರ್ಜಿ ಶಾಲೆಗಳನ್ನು ಆರಂಭಿಸಿದೆ. ಅವತ್ತಿನಿಂದ ನಿರಂತರವಾಗಿ ಮೊರಾರ್ಜಿ ವಸತಿ ಶಾಲೆಗಳನ್ನು ತೆರೆಯುತ್ತಲೇ ಇದ್ದೇನೆ. ಸದ್ಯ ಸಮಾಜ ಕಲ್ಯಾಣ ಇಲಾಖೆ ಅಡಿಯಲ್ಲಿ 833 ವಸತಿ ಶಾಲೆಗಳಿವೆ. ಅಲ್ಪ ಸಂಖ್ಯಾತ ಇಲಾಖೆಯಡಿಯಲ್ಲಿರುವುದೂ ಸೇರಿ ಒಟ್ಟು 946 ವಸತಿ ಶಾಲೆಗಳಿವೆ ಎಂದು ವಿವರಿಸಿದರು.

ಕೆಲವು ಹೋಬಳಿಯಲ್ಲಿ ಒಂದಕ್ಕಿಂತ ಹೆಚ್ಚು ವಸತಿ ಶಾಲೆಗಳಿವೆ. ಆದ್ದರಿಂದ ಕೆಲವು ಹೋಬಳಿಗಳಲ್ಲಿ ಇಲ್ಲವಾಗಿತ್ತು. ಹೀಗಾಗಿ ಈ ವರ್ಷ 20 ವಸತಿ ಶಾಲೆಗಳನ್ನು ಆರಂಭಿಸಲು ಅನುಮತಿ ನೀಡಿದ್ದೇನೆ. ಹೋಬಳಿಗೊಂದು ವಸತಿ ಶಾಲೆ ನನ್ನ ಗುರಿ ಮತ್ತು ಉದ್ದೇಶವಾಗಿದೆ ಎಂದರು.

ಗ್ರಾಮೀಣ ಭಾಗದಲ್ಲಿ ಸರ್ವರಿಗೂ ಗುಣಮಟ್ಟದ ವೈಚಾರಿಕತೆ, ವೈಜ್ಞಾನಿಕತೆಯಿಂದ ಕೂಡಿದ ಶಿಕ್ಷಣ ದೊರೆಯಬೇಕು. ಜಾತಿ ವ್ಯವಸ್ಥೆ ಕಾರಣದಿಂದ ಸಮಾಜದಲ್ಲಿ ಅಸಮಾನತೆ ಸೃಷ್ಠಿಯಾಗಿದೆ. ಎಲ್ಲಾ ಜಾತಿ, ಜನವರ್ಗದ ಮಕ್ಕಳಿಗೆ ಓದುವ ಅವಕಾಶ ಕಲ್ಪಿಸಿದ್ದು ನಮ್ಮ ಸಂವಿಧಾನ ಎಂದರು.

ಜಾತಿ ವ್ಯವಸ್ಥೆ ಕಾರಣದಿಂದ ಸಮಾಜದಲ್ಲಿ ಅಸಮಾನತೆ ಸೃಷ್ಟಿಯಾಗಿದೆ.‌ ಇದನ್ನು ಹೋಗಲಾಡಿಸಬೇಕಾಗಿದೆ. ನನಗೆ ಶಿಕ್ಷಣ ಸಿಕ್ಕಿದ್ದರಿಂದಲೇ ಮುಖ್ಯಮಂತ್ರಿ ಆಗುವ ಅವಕಾಶ ದೊರೆಯಿತು. ಇಲ್ಲದಿದ್ದರೆ ನಾನೂ ಎಮ್ಮೆ, ಹಸು ಮೇಯಿಸುತ್ತಾ ಅಷ್ಟಕ್ಕೇ ಸೀಮಿತ ಆಗಬೇಕಾಗಿತ್ತು ಎಂದರು.

ಬುದ್ದ, ಬಸವಣ್ಣ ಎಷ್ಟು ಶತಮಾನಗಳ ಹಿಂದೆ ಜಾತಿ ವ್ಯವಸ್ಥೆ ಅಳಿಸಲು ಶ್ರಮಿಸಿದರು. ಆದರೆ ವಿದ್ಯಾವಂತರಲ್ಲೇ ಜಾತಿಪ್ರಜ್ಞೆ ಹೆಚ್ಚಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಮಕ್ಕಳಿಗೆ ಜಾತಿ, ಧರ್ಮದ ತಾರತಮ್ಯ ಕಲಿಸುವವರೇ ನಾವು. ಆದ್ದರಿಂದ ಪೋಷಕರು, ಶಿಕ್ಷಕರು ಮೊದಲು ಕಂದಾಚಾರ,‌ಮೌಡ್ಯದಿಂದ ಹೊರಗೆ ಬರಬೇಕು. ಆಗ ಮಕ್ಕಳೂ ವೈಜ್ಞಾನಿಕವಾಗಿ ಬೆಳೆದು ಉತ್ತಮ ಭವಿಷ್ಯ ರೂಪಿಸಿಕೊಳ್ಳುತ್ತಾರೆ ಎಂದರು.

ಹುಟ್ಟುವಾಗ ಎಲ್ಲಾ ಮಕ್ಕಳೂ ವಿಶ್ವ ಮಾನವರಾಗಿ ಹುಟ್ಟಿ ಬೆಳೆಯುತ್ತಾ ಅಲ್ಪ ಮಾನವರಾಗುತ್ತಾರೆ ಎನ್ನುವ ಕುವೆಂಪು ಅವರ ಮಾತು ಪ್ರಸ್ತಾಪಿಸಿದ ಮುಖ್ಯಮಂತ್ರಿಗಳು ಮಕ್ಕಳು ಅಲ್ಪ ಮಾನವರಾಗದಂತೆ ಕಾಪಾಡುವ ಜವಾಬ್ದಾರಿ ಶಿಕ್ಷಕರು, ಪೋಷಕರ ಮೇಲಿದೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News