ರಾಜ್ಯದ ಹಿತಕ್ಕಾಗಿ ಕೇಂದ್ರದ ಬಳಿ ಧ್ವನಿಗೂಡಿಸಿ : ನೂತನ ಸಂಸದರಿಗೆ ಸಿಎಂ ಸಿದ್ದರಾಮಯ್ಯ ಕರೆ
ಹೊಸದಿಲ್ಲಿ : ರಾಜ್ಯದ ಹಿತದೃಷ್ಟಿ ಹಾಗೂ ನೆಲ, ಜಲ, ಸಂಪನ್ಮೂಲದ ಅಭಿವೃದ್ಧಿಗಾಗಿ ನೂತನವಾಗಿ ಚುನಾಯಿತರಾಗಿರುವ ಎಲ್ಲ ಸಂಸದರು ಒಕ್ಕೊರಲಿನಿಂದ ಕೇಂದ್ರ ಸರಕಾರದ ಬಳಿ ಧ್ವನಿಗೊಡಿಸುವ ಅಗತ್ಯವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದ್ದಾರೆ.
ಗುರುವಾರ ಹೊಸದಿಲ್ಲಿಯ ಖಾಸಗಿ ಹೋಟೆಲ್‍ನಲ್ಲಿ ನಡೆದ ರಾಜ್ಯದಿಂದ ಆಯ್ಕೆಯಾದ ಸಂಸದರ ಸಭೆಯಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು, "ರಾಜ್ಯದ ಅಭಿವೃದ್ಧಿ ಒಂದೇ ನಮ್ಮ ಗುರಿ. ಇದರಲ್ಲಿ ರಾಜಕೀಯ, ಟೀಕೆ, ಭಾವನಾತ್ಮಕ ಆರೋಪಗಳ ಅಗತ್ಯವಿಲ್ಲ. ರಾಜ್ಯದ ಅಭಿವೃದ್ಧಿಗೆ ಸೌಹಾರ್ದಯುತವಾಗಿ ಪ್ರಯತ್ನಿಸೋಣ ಎನ್ನುವುದಷ್ಟೇ ನನ್ನ ಮನವಿ" ಎಂದು ನುಡಿದರು.
ಮೇಕೆದಾಟು ಯೋಜನೆಗೆ ಕೇಂದ್ರದ ಅನುಮತಿ ಅಗತ್ಯವಿದೆ. ಭದ್ರಾ ಯೋಜನೆ ಬಗ್ಗೆಯೂ ಪ್ರಯತ್ನ ಮುಂದುವರೆಸಬೇಕಾಗಿದೆ. ಕೇಂದ್ರದ ಹಣಕಾಸು ಮಂತ್ರಿ ತಮ್ಮ ಬಜೆಟ್‍ನಲ್ಲೇ ಘೋಷಣೆ ಮಾಡಿ ಒಂದು ವರ್ಷ ಕಳೆದಿದೆ. ಆ ಹಣ ಕೊಡಿಸಿಲು ಸಭೆಯಲ್ಲಿದ್ದ ಕೇಂದ್ರ ಸಚಿವರಿಗೆ ಮನವಿ ಮಾಡಿದರು.
ಕಲ್ಯಾಣ ಕರ್ನಾಟಕದ ರಾಯಚೂರಿಗೆ ಏಮ್ಸ್ ನೀಡಲು ಮನವಿ ಸಲ್ಲಿಸಿದ್ದೇವೆ. ಅದೇ ರೀತಿ, 18172 ಕೋಟಿ ಬರ ಪರಿಹಾರ ಕೇಳಿದ್ದೆವು. ಪೂರ್ತಿ ಬಂದಿಲ್ಲ. ಇದಕ್ಕಾಗಿ ಪ್ರಯತ್ನಿಸುವ ಅಗತ್ಯವಿದೆ. ರಾಜ್ಯದ ಕರಾವಳಿ ಭಾಗಗಳ ಅಭಿವೃದ್ಧಿಗಾಗಿ ಉಡಾನ್ ಯೋಜನೆಯಲ್ಲಿ ಸಲ್ಲಿಸಿರುವ ಪ್ರಸ್ತಾವನೆ ನಾಗರೀಕ ವಿಮಾನಯಾನ ಇಲಾಖೆಯಲ್ಲಿ ಇದೆ. ಇದರ ಈಡೇರಿಕೆಗೆ ಪ್ರಯತ್ನಿಸಬೇಕಾಗಿದೆ ಎಂದು ಅವರು ಉಲ್ಲೇಖಿಸಿದರು.
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಏರ್ ಕಾರ್ಗೋ ಕಾಂಪೆಕ್ಸ್ ಆಗಿ ಪರಿಗಣಿಸಲು ಪ್ರಸ್ತಾವನೆ ಸಲ್ಲಿಸಿದ್ದೇವೆ. ಇದರಿಂದ ರಫ್ತು ಹೆಚ್ಚಾಗಿ ಆರ್ಥಿಕ ಚಟುವಟಿಕೆ ವೇಗವಾಗುತ್ತದೆ ಎಂದ ಅವರು, ಮೈಸೂರು ಅಥವಾ ಹಾಸನಕ್ಕೆ ಮತ್ತೊಂದು ಐಐಟಿ ಬೇಕು ಎನ್ನುವ ಪ್ರಸ್ತಾವನೆ ಸಲ್ಲಿಕೆ ಮಾಡಿದ್ದೇವೆ ಎಂದು ಹೇಳಿದರು.
ಕಸ್ತೂರಿ ರಂಗನ್ ವರದಿ ಸಂಪೂರ್ಣವಾಗಿ ತಿರಸ್ಕರಿಸಲು ಮನವಿ ಮಾಡಿದ್ದೇವೆ. ಇದನ್ನು ಕೂಡಲೇ ಅಂಗೀಕರಿಸಿ ಪಶ್ಚಿಮಘಟ್ಟದ ಜನರಿಗೆ ನೆಮ್ಮದಿ ಒದಗಿಸಬೇಕು. ರಾಜ್ಯ ರೈಲ್ವೇ ಸಂಪರ್ಕದಲ್ಲಿ ಹಿಂದುಳಿದಿದೆ. ಆದ್ದರಿಂದ ರಾಜ್ಯಕ್ಕೆ ಹೆಚ್ಚು ಅನುದಾನ ಒದಗಿಸಿ ರೈಲ್ವೇ ಸಂಪರ್ಕ ಹೆಚ್ಚಿಸಲು ಆದ್ಯತೆ ಮೇಲೆ ಹೆಚ್ಚಿನ ಅನುದಾನ ನೀಡಬೇಕು ಎಂದು ರೈಲ್ವೇ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ಅವರಿಗೆ ಸಭೆಯಲ್ಲಿಯೇ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕೇಂದ್ರ ಸಚಿವರಾದ ಎಚ್.ಡಿ.ಕುಮಾರಸ್ವಾಮಿ, ಪ್ರಹ್ಲಾದ್ ಜೋಶಿ, ವಿ.ಸೋಮಣ್ಣ, ಶೋಭಾ ಕರಂದ್ಲಾಜೆ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಎಲ್ಲ ಸಚಿವರು, ಸಂಸದರು, ರಾಜ್ಯಸಭಾ ಸದಸ್ಯರು ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದರು.
ಎಚ್‍ಡಿಕೆ ಬೆನ್ನುತಟ್ಟಿದ ಸಿಎಂ: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಸಭೆಗೆ ಆಗಮಿಸಿದ್ದು, ಅವರನ್ನು ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೈ ಕುಲುಕಿ ಬೆನ್ನು ತಟ್ಟಿ ಸ್ವಾಗತ ಕೋರಿದ್ದಾರೆ.