ಕೇಂದ್ರದಲ್ಲೂ ಎಸ್ಸಿಎಸ್ಪಿ-ಟಿಎಸ್ಪಿ ಕಾನೂನು ಜಾರಿಗೆ ತರಲು ಒತ್ತಡ ಹೇರಬೇಕು : ಸಿಎಂ ಸಿದ್ದರಾಮಯ್ಯ

Update: 2024-07-13 16:06 GMT

PC : x/@CMahadevappa


ಬೆಂಗಳೂರು : ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರ ಕಲ್ಯಾಣಕ್ಕಾಗಿ ನಮ್ಮ ಸರಕಾರ ಜಾರಿಗೆ ತಂದಿರುವ ಎಸ್ಸಿಎಸ್ಪಿ-ಟಿಎಸ್ಪಿ ಕಾನೂನು ಕೇಂದ್ರದಲ್ಲೂ ಜಾರಿಗೆ ತರುವಂತೆ ದಲಿತ ಸಂಘರ್ಷ ಸಮಿತಿ(ದಸಂಸ)ಯ ನಾಯಕರು ಒತ್ತಡ ಹೇರಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.

ಶನಿವಾರ ಸಮಾಜ ಕಲ್ಯಾಣ ಇಲಾಖೆ ಮತ್ತು ಡಾ.ಬಾಬು ಜಗಜೀವನ್‍ರಾಮ್ ಸಂಶೋಧನಾ ಸಂಸ್ಥೆ ವತಿಯಿಂದ ಮಾಗಡಿ ರಸ್ತೆಯಲ್ಲಿರುವ ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಸಿರು ಕ್ರಾಂತಿಯ ಹರಿಕಾರ ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನ್ ರಾಮ್ ಭವನದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಕಳೆದ ಅವಧಿಯ ನಮ್ಮ ಸರಕಾರದಲ್ಲಿ ಎಚ್.ಆಂಜನೇಯ ಸಮಾಜಕಲ್ಯಾಣ ಸಚಿವರಾಗಿದ್ದಾಗ ಪರಿಶಿಷ್ಟ ಜಾತಿ, ಪಂಗಡದವರಿಗೆ ಸಾಮಾಜಿಕವಾಗಿ ಶಕ್ತಿ ತುಂಬಲು ಅವರ ಜನಸಂಖ್ಯೆಗೆ ಅನುಗುಣವಾಗಿ ಬಜೆಟ್‍ನಲ್ಲಿ ಅನುದಾನ ನೀಡುವ ಕಾನೂನು ಜಾರಿಗೆ ತರಲಾಯಿತು. ನಮ್ಮ ರಾಜ್ಯದಲ್ಲಿ ಎಸ್ಸಿ-ಎಸ್ಟಿಗೆ ಸೇರಿದವರು ಒಟ್ಟು ಶೇ.24.1ರಷ್ಟಿದ್ದಾರೆ. ಈ ವರ್ಷ ಅವರ ಕಲ್ಯಾಣಕ್ಕಾಗಿ 39 ಸಾವಿರ ಕೋಟಿ ರೂ.ಗಳನ್ನು ಒದಗಿಸಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.

ಆಂಧ್ರಪ್ರದೇಶ, ತೆಲಂಗಾಣ ಹಾಗೂ ಕರ್ನಾಟಕದಲ್ಲಿ ಮಾತ್ರ ಇಂತಹ ಕಾನೂನು ಇದೆ. ಆದರೆ, ನಮ್ಮ ರಾಜ್ಯದಲ್ಲಿರುವಷ್ಟು ಪ್ರಗತಿದಾಯಕ ಕಾನೂನು ಬೇರೆ ಯಾವ ರಾಜ್ಯದಲ್ಲಿಯೂ ಇಲ್ಲ. ಕೇಂದ್ರದಲ್ಲಿಯೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರ ಜನಸಂಖ್ಯೆಗೆ ಅನುಗುಣವಾಗಿ ಬಜೆಟ್‍ನಲ್ಲಿ ಅನುದಾನ ನೀಡುವ ಕಾನೂನು ಜಾರಿಗೆ ಬಂದರೆ ಅವರನ್ನು ಆರ್ಥಿಕ, ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಮುನ್ನೆಲೆಗೆ ತರಲು ಸಾಧ್ಯವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಬಾಬು ಜಗಜೀವನ್‍ರಾಮ್ ಭವನವು ಇಡೀ ದೇಶದಲ್ಲಿ ಮಾದರಿಯಾಗಿದೆ. 2018ರ ಫೆಬ್ರವರಿಯಲ್ಲಿ ಈ ಭವನದ ನಿರ್ಮಾಣಕ್ಕಾಗಿ ಮುಖ್ಯಮಂತ್ರಿಯಾಗಿ ಅಡಿಗಲ್ಲು ಹಾಕಿದ್ದೆ. ಇವತ್ತು ನಾನೇ ಉದ್ಘಾಟನೆ ಮಾಡುತ್ತಿರುವುದು ನನ್ನ ಸಂತೋಷವನ್ನು ಇಮ್ಮಡಿಗೊಳಿಸಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಐದು ಎಕರೆ ಪ್ರದೇಶದಲ್ಲಿ ಸಂಶೋಧನಾ ಹಾಗೂ ತರಬೇತಿ ಸಂಸ್ಥೆಯ ಭವನ ನಿರ್ಮಾಣಕ್ಕೆ ಎಚ್.ಆಂಜನೇಯ ಕಾರಣ. ನಮ್ಮ ದೇಶದಲ್ಲಿ ಒಬ್ಬ ರಾಷ್ಟ್ರನಾಯಕನ ಹೆಸರಿನಲ್ಲಿ ಇಷ್ಟೊಂದು ದೊಡ್ಡ ಸಂಶೋಧನಾ ಭವನ ನಿರ್ಮಾಣ ಆಗಿರುವುದು ನಮ್ಮ ರಾಜ್ಯದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ಎಂಬುದು ಹೆಮ್ಮೆಯ ವಿಚಾರ ಎಂದು ಮುಖ್ಯಮಂತ್ರಿ ತಿಳಿಸಿದರು.

ಈ ಭವನದ ನಿರ್ವಹಣೆ ಹಾಗೂ ಸದುಪಯೋಗ ಆಗಬೇಕು. ಸಮಾಜಕಲ್ಯಾಣ ಇಲಾಖೆ ಎಲ್ಲ ರೀತಿಯ ಕ್ರಮ ಕೈಗೊಳ್ಳಬೇಕು. ಈ ಸಂಶೋಧನಾ ಸಂಸ್ಥೆಯ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹಾಸ್ಟೆಲ್ ಬೇಕೆಂದು ಕೇಳಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

ಬಾಬು ಜಗಜೀವನ್ ರಾಮ್ ಒಬ್ಬ ದಕ್ಷ ಆಡಳಿತಗಾರ, ಸಮಾನತೆ, ಜಾತಿ ವಿನಾಶದ ಕನಸು ಕಂಡಿದ್ದರು. ಅಸಮಾನತೆ ಇರೋವರೆಗೂ ಸಮ ಸಮಾಜ ನಿರ್ಮಾಣ ಸಾಧ್ಯವಿಲ್ಲ ಎಂಬುದನ್ನು ಪ್ರಬಲವಾಗಿ ನಂಬಿದ್ದರು. ಕೇಂದ್ರ ಕೃಷಿ, ಕಾರ್ಮಿಕ, ರಕ್ಷಣಾ ಸಚಿವರಾಗಿ ಅವರು ಹೆಜ್ಜೆ ಗುರುತು ಬಿಟ್ಟು ಹೋಗಿದ್ದಾರೆ ಎಂದು ಮುಖ್ಯಮಂತ್ರಿ ತಿಳಿಸಿದರು.

ದಲಿತ ಸಮುದಾಯದವರು ಐಎಎಸ್, ಐಪಿಎಸ್, ಐಎಫ್‍ಎಸ್ ತರಬೇತಿ ಪಡೆದು ಪರೀಕ್ಷೆಗಳಲ್ಲಿ ಉತ್ತೀರ್ಣರಾಗಬೇಕು. ವ್ಯವಸ್ಥೆಯ ಭಾಗವಾಗಬೇಕು. ನಾಗರಿಕ ಪರೀಕ್ಷೆಗಳಿಗೆ ತರಬೇತಿ ಪಡೆಯುವ ದಲಿತ ಸಮುದಾಯದ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ವಿದ್ಯಾರ್ಥಿವೇತನ 15 ಸಾವಿರ ರೂ.ಗಳಿಗೆ ಹೆಚ್ಚಿಸಲಾಗಿದೆ. ಅಲ್ಲದೇ, ದಿಲ್ಲಿಯಲ್ಲಿ ಇವರಿಗಾಗಿ ಹಾಸ್ಟೆಲ್ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಿದ್ದರಾಮಯ್ಯ ಹೇಳಿದರು.

ದಲಿತರಿಗೆ ಭಡ್ತಿಯಲ್ಲಿ ಮೀಸಲಾತಿ ನೀಡಲು ಕೆ.ರತ್ನಪ್ರಭಾ ಅಧ್ಯಕ್ಷತೆಯಲ್ಲಿ ಸಮಿತಿ ಮಾಡಿ ಅವರಿಂದ ವರದಿ ಪಡೆದು ಕಾಯ್ದೆ ಮಾಡಿದೆ. ಗುತ್ತಿಗೆದಾರರಿಗೆ ಗುತ್ತಿಗೆಯಲ್ಲೂ ಮೀಸಲಾತಿ ನೀಡಿದೆ. 10 ಕೋಟಿ ರೂ.ವರೆಗೆ ಅವರಿಗೆ ಶೇ.4ರಷ್ಟು ಬಡ್ಡಿಯಡಿ ಸಾಲ ಸಿಗುವಂತೆ ಮಾಡಿದ್ದೇವೆ. ಎಸ್ಸಿಎಸ್ಪಿ-ಟಿಎಸ್ಪಿ ಕಾನೂನಿನಲ್ಲಿದ್ದ ಸೆಕ್ಷನ್ 7ಡಿ ಕೈ ಬಿಡುವಂತೆ ಮನವಿ ಮಾಡಿದರು. ಕಾಯ್ದೆಗೆ ತಿದ್ದುಪಡಿ ತಂದು ಅದನ್ನು ಕೈ ಬಿಟ್ಟಿದ್ದೇವೆ ಎಂದು ಮುಖ್ಯಮಂತ್ರಿ ಹೇಳಿದರು.

ಹೋಬಳಿಗೆ ಒಂದರಂತೆ ವಸತಿ ಶಾಲೆಗಳನ್ನು ಮಾಡುತ್ತಿದ್ದೇವೆ. ಇವತ್ತು 900ಕ್ಕೂ ಅಧಿಕ ಶಾಲೆಗಳಲ್ಲಿ ಸುಮಾರು 2.11 ಲಕ್ಷ ಮಕ್ಕಳು ಓದುತ್ತಿದ್ದಾರೆ. ಎಸೆಸೆಲ್ಸಿಯಲ್ಲಿ ಈ ಬಾರಿ ರಾಜ್ಯಕ್ಕೆ ಅತೀ ಹೆಚ್ಚು ಅಂಕಗಳಿಸಿದ ಮಕ್ಕಳು ಈ ವಸತಿ ಶಾಲೆಯಲ್ಲಿ ಅಧ್ಯಯನ ಮಾಡಿದವರು ಎಂಬುದು ಹೆಮ್ಮೆಯ ವಿಷಯ ಎಂದು ಸಿದ್ದರಾಮಯ್ಯ ತಿಳಿಸಿದರು.

ಬಾಬು ಜಗಜೀವನ್‍ರಾಮ್ ಅವರ ಪುತ್ರಿ ಹಾಗೂ ಲೋಕಸಭೆಯ ಮಾಜಿ ಸ್ಪೀಕರ್ ಮೀರಾ ಕುಮಾರ್ ಮಾತನಾಡಿ, ಕರ್ನಾಟಕಕ್ಕೆ ಈ ಬಾರಿ ನನ್ನ ಭೇಟಿ ವಿಶೇಷ ಹಾಗೂ ಐತಿಹಾಸಿಕವಾಗಿದೆ. ನನ್ನ ತಂದೆಯ ಹೆಸರಿನಲ್ಲಿ ನಿರ್ಮಾಣ ಮಾಡಿರುವ ಈ ಭವನ ತುಂಬಾ ಸುಂದರವಾಗಿದೆ. ಇದಕ್ಕೆ ಕಾರಣಕರ್ತರಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಎಚ್.ಆಂಜನೇಯ ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದರು.

ದೇಶದಲ್ಲಿ ಜಾತಿ ವ್ಯವಸ್ಥೆಯಿಂದ ಅನೇಕರು ನೋವು, ಸಂಕಷ್ಟ, ತಾರತಮ್ಯ ಅನುಭವಿಸಿದ್ದಾರೆ. ಸುದೀರ್ಘ ಹೋರಾಟಗಳು ನಡೆದರೂ ಜಾತಿ ವ್ಯವಸ್ಥೆ ಜೀವಂತವಾಗಿದೆ. ಈ ಅನಿಷ್ಠವನ್ನು ಹೋಗಲಾಡಿಸಲು ಪಣತೋಡೋಣ, ಹೋರಾಟ ಮಾಡೋಣ, ಸಾಮಾಜಿಕ ನ್ಯಾಯ ಎಲ್ಲರಿಗೂ ಸಿಗುವಂತಾಗಿಲಿ ಎಂದು ಅವರು ಹಾರೈಸಿದರು.

ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಮಾತನಾಡಿ, ಬಾಬು ಜಗಜೀವನ್‍ರಾಮ್ ಭವನವನ್ನು ನಿರ್ದಿಷ್ಟ ಉದ್ದೇಶದೊಂದಿಗೆ ನಿರ್ಮಾಣ ಮಾಡಲಾಗಿದೆ. ಬಾಬು ಜಗಜೀವನ್‍ರಾಮ್ ಅವರು ಸ್ವಾತಂತ್ರ್ಯ ಹೋರಾಟಗಾರರಾಗಿ, ಕೇಂದ್ರದಲ್ಲಿ ಹಲವಾರು ಇಲಾಖೆಗಳ ಸಚಿವರಾಗಿ, ಉಪ ಪ್ರಧಾನಿಯಾಗಿ ಕರ್ತವ್ಯ ನಿರ್ವಹಿಸಿದರು ಎಂದರು.

1972ರಲ್ಲಿ ರಕ್ಷಣಾ ಸಚಿವರಾಗಿ ಪಾಕಿಸ್ತಾನದ ವಿರುದ್ಧದ ಯುದ್ಧದ ಪರಿಸ್ಥಿತಿಯನ್ನು ಯಶಸ್ವಿಯಾಗಿ ಎದುರಿಸಿ, ಬಾಂಗ್ಲಾದೇಶ ಉದಯಕ್ಕೆ ಕಾರಣರಾದರು. 1974ರಲ್ಲಿ ದೇಶದಲ್ಲಿ ಆಹಾರದ ಕೊರತೆ ಎದುರಾದಾಗ ಕೃಷಿ ಸಚಿವರಾಗಿ ಹಸಿರು ಕ್ರಾಂತಿಯನ್ನೆ ಮಾಡುವ ಮೂಲಕ ಭಾರತೀಯರ ಹೊಟ್ಟೆ ತುಂಬಿಸುವ ಕೆಲಸ ಮಾಡಿದರು ಎಂದು ಅವರು ಸ್ಮರಿಸಿದರು.

ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಸಚಿವರಾದ ಕೆ.ಎಚ್.ಮುನಿಯಪ್ಪ, ಆರ್.ಬಿ.ತಿಮ್ಮಾಪುರ್, ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಮಾಜಿ ಸಚಿವ ಎಚ್.ಆಂಜನೇಯ, ಶಾಸಕ ಮುನಿರತ್ನ, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ವಿಧಾನಪರಿಷತ್ ಸದಸ್ಯ ಪ್ರಕಾಶ್ ರಾಥೋಡ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News