‘ಒಂದು ಲಕ್ಷ ಮನೆ ಯೋಜನೆ’ | ಫಲಾನುಭವಿಗಳಿಗೆ ಆರ್ಥಿಕ ಹೊರೆ ತಗ್ಗಿಸಲು ಸಿಎಂ ತೀರ್ಮಾನ

Update: 2024-07-25 15:09 GMT

ಬೆಂಗಳೂರು : ಮುಖ್ಯಮಂತ್ರಿಯವರ ಒಂದು ಲಕ್ಷ ಮನೆ ಯೋಜನೆಯಡಿಯಲ್ಲಿ ಫಲಾನುಭವಿಗಳಿಗೆ ಆರ್ಥಿಕ ಹೊರೆ ತಗ್ಗಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಹತ್ವದ ತೀರ್ಮಾನ ಕೈಗೊಂಡಿದ್ದಾರೆ.

ಗುರುವಾರ ವಿಧಾನಸೌಧದಲ್ಲಿ ವಸತಿ ಸಚಿವ ಝಮೀರ್ ಅಹ್ಮದ್ ಖಾನ್ ನೇತೃತ್ವದಲ್ಲಿ ಬೆಂಗಳೂರು ನಗರದ ಕಾಂಗ್ರೆಸ್ ಹಾಗೂ ಬಿಜೆಪಿ ಶಾಸಕರು ಮುಖ್ಯಮಂತ್ರಿಯನ್ನು ಭೇಟಿ ಮಾಡಿದ್ದರು.

ಬಿಜೆಪಿ ಸರಕಾರದಲ್ಲಿ ಯೂನಿಟ್(ಒಂದು ಮನೆ) ವೆಚ್ಚ ಹೆಚ್ಚಳ ನಿರ್ಧಾರದಿಂದ ಆತಂಕ ಗೊಂಡಿದ್ದ 12,153 ಕುಟುಂಬಗಳಿಗೆ ಸಿಹಿ ಸುದ್ದಿ ನೀಡಿರುವ ಮುಖ್ಯಮಂತ್ರಿ, ಪ್ರತಿ ಮನೆಗೆ ಒಂದು ಲಕ್ಷ ರೂ.ನಂತೆ 121.53 ಕೋಟಿ ರೂ.ಗಳನ್ನು ಸರಕಾರವೇ ಭರಿಸಲು ಒಪ್ಪಿಗೆ ನೀಡಿದ್ದಾರೆ.

ಮುಖ್ಯಮಂತ್ರಿಯವರ ಒಂದು ಲಕ್ಷ ಮನೆ ಯೋಜನೆಗೆ 2017ರ ಸೆ.23ರಂದು ಅಧಿಸೂಚನೆ ಹೊರಡಿಸಿ ಘಟಕ ವೆಚ್ಚ 6 ಲಕ್ಷ ರೂ.ನಿಗದಿ ಮಾಡಲಾಗಿತ್ತು. ಕೇಂದ್ರ ಸರಕಾರ 1.50 ಲಕ್ಷ ರೂ., ರಾಜ್ಯ ಸರಕಾರ ಸಾಮಾನ್ಯ ವರ್ಗಕ್ಕೆ 1.20 ಲಕ್ಷ ರೂ., ಎಸ್‍ಸಿ-ಎಸ್‍ಟಿ ವರ್ಗಕ್ಕೆ 2 ಲಕ್ಷ ರೂ. ನಿಗದಿಯಾಗಿತ್ತು.

ನಂತರ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರದಲ್ಲಿ ಘಟಕ ವೆಚ್ಚ 10.60 ಲಕ್ಷ ರೂ. ನಿಗದಿ ಮಾಡಲಾಗಿತ್ತು. ಇದಕ್ಕೆ 60 ಸಾವಿರ ರೂ. ಜಿಎಸ್ ಟಿ ಸೇರಿ 11.20 ಲಕ್ಷ ರೂ.ಆಗಿತ್ತು. ಇಷ್ಟು ಮೊತ್ತ ಭರಿಸಲು ಕಷ್ಟ ಎಂದು ಫಲಾನುಭವಿಗಳು ವಸತಿ ಸಚಿವ ಝಮೀರ್ ಅಹ್ಮದ್ ಬಳಿ ಮನವಿ ಮಾಡಿಕೊಂಡಿದ್ದರು.

ಇದೀಗ ರಾಜ್ಯ ಸರಕಾರದ ಮಹತ್ವದ ತೀರ್ಮಾನದಿಂದ ಸಬ್ಸಿಡಿ ಹೊರತು ಪಡಿಸಿ ಸಾಮಾನ್ಯ ವರ್ಗ 7.50 ಲಕ್ಷ ರೂ., ಎಸ್‍ಸಿ-ಎಸ್‍ಟಿ ವರ್ಗ 6.70 ಲಕ್ಷ ರೂ. ಕಟ್ಟಬೇಕಾಗುತ್ತದೆ. ಈ ಹಿಂದೆ ಕ್ರಮವಾಗಿ 8.50 ಲಕ್ಷ ರೂ. ಹಾಗೂ 7.70 ಲಕ್ಷ ರೂ. ಕಟ್ಟಬೇಕಿತ್ತು.

ಈ ತೀರ್ಮಾನ 2020 ರಲ್ಲಿ ಘಟಕ ವೆಚ್ಚ ಹೆಚ್ಚಳ ತೀರ್ಮಾನದ ಅಧಿಸೂಚನೆ ಹೊರಡಿಸಿದ ಸಂದರ್ಭದಲ್ಲಿ ಪ್ರಾರಂಭಿಕ ಠೇವಣಿ ಮೊತ್ತ ಪಾವತಿ ಮಾಡಿರುವ 12,153 ಮಂದಿಗೆ ಮಾತ್ರ ಅನ್ವಯವಾಗಲಿದೆ. ಪ್ರಾರಂಭಿಕ ಠೇವಣಿ ಮೊತ್ತ ಪಾವತಿ ಮಾಡದ ಆನ್ ಲೈನ್ ಅರ್ಜಿ ಗಳಿಗೆ ಅನ್ವಯ ಆಗುವುದಿಲ್ಲ ಎಂದು ಝಮೀರ್ ಅಹ್ಮದ್ ಖಾನ್ ಸ್ಪಷ್ಟಪಡಿಸಿದ್ದಾರೆ.

ಸಭೆಯಲ್ಲಿ ಕೃಷ್ಣ ಬೈರೇಗೌಡ, ಶಾಸಕರಾದ ಎಸ್.ಟಿ.ಸೋಮಶೇಖರ್, ಎಸ್.ಆರ್. ವಿಶ್ವನಾಥ್, ಮಂಜುಳಾ ಲಿಂಬಾವಳಿ, ಎಂ.ಕೃಷ್ಣಪ್ಪ, ಮುನಿರಾಜು, ಶಿವಣ್ಣ ಪಾಲ್ಗೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News