ಸರ್ವರಿಗೂ ಸೂರು ಯೋಜನೆ | 1.29 ಲಕ್ಷ ಮನೆ ಪೂರ್ಣಗೊಳಿಸಲು ಸಿಎಂ ಸಿದ್ದರಾಮಯ್ಯ ಒಪ್ಪಿಗೆ

Update: 2024-07-03 15:26 GMT

Photo :x/@CMofKarnataka

ಬೆಂಗಳೂರು : ಸರ್ವರಿಗೂ ಸೂರು ಯೋಜನೆದಡಿ ಸ್ಲಂಬೋರ್ಡ್ ಹಾಗೂ ರಾಜೀವ್ ಗಾಂಧಿ ವಸತಿ ನಿಗಮದ ವತಿಯಿಂದ ಬಡ ಕುಟುಂಬಗಳಿಗೆ ನಿರ್ಮಿಸಿ ಕೊಡುತ್ತಿರುವ 1,29,457 ಮನೆಗಳಿಗೆ ಫಲಾನುಭವಿಗಳ ವಂತಿಗೆ ಸರಕಾರವೇ ಭರಿಸಿ ಹಂತ ಹಂತವಾಗಿ ಪೂರ್ಣಗೊಳಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಒಪ್ಪಿಗೆ ನೀಡಿದ್ದಾರೆ.

ಬುಧವಾರ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ವಸತಿ ಇಲಾಖೆ ಪ್ರಗತಿ ಪರಿಶೀಲನೆ ಸಭೆಯಲ್ಲಿ ನಿರ್ಮಾಣದ ವಿವಿಧ ಹಂತದಲ್ಲಿ ಇರುವ 1,29,457 ಮನೆಗಳಿಗೆ ಎಷ್ಟು ಹಣಕಾಸು ಬೇಕಾಗುತ್ತದೆ. ಈ ವರ್ಷ ಗರಿಷ್ಠ ಎಷ್ಟು ಕೊಡಬಹುದು. ಮುಂದಿನ ವರ್ಷ ಎಷ್ಟು ಕೊಡಬಹುದು ಪರಿಶೀಲನೆ ಮಾಡುವಂತೆ ಹಣಕಾಸು ಇಲಾಖೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸೂಚಿಸಿದರು.

ಇದೇ ವೇಳೆ ಫಲಾನುಭವಿಗಳಿಂದ ಒಂದು ಲಕ್ಷ ರೂ. ಕಡ್ಡಾಯವಾಗಿ ಪಡೆಯಬೇಕು ಎಂದು ನಿರ್ದೇಶನ ನೀಡಿದಾಗ, ಅಗತ್ಯ ಕ್ರಮ ಕೈಗೊಳ್ಳುವುದಾಗಿ ವಸತಿ ಸಚಿವ ಬಿ.ಝೆಡ್.ಝಮೀರ್ ಅಹ್ಮದ್ ಖಾನ್ ಉಲ್ಲೇಖಿಸಿದರು.

ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ಎರಡನೇ ಹಂತದಲ್ಲಿ 39,966 ಮನೆ ಹಂಚಿಕೆಗೆ ಸಿದ್ದಗೊಂಡಿದ್ದು, 862 ಕೋಟಿ ರೂ. ಅಗತ್ಯವಿದೆ. ಅದೇ ರೀತಿ ರಾಜೀವ್ ಗಾಂಧಿ ವಸತಿ ನಿಗಮ ವತಿಯಿಂದ ಮೊದಲ ಹಂತದಲ್ಲಿ ಹಂಚಿಕೆಗೆ 11,406 ಮನೆ ಸಿದ್ದವಿದ್ದು 1,879 ಕೋಟಿ ರೂ. ಅಗತ್ಯವಿದೆ ಎಂದು ಸಚಿವರು ಸಿಎಂ ಗಮನಕ್ಕೆ ತಂದರು.

ಸರ್ವರಿಗೂ ಸೂರು ಯೋಜನೆಯಡಿಯಲ್ಲಿ 2013 ರಿಂದ 2023ರವರೆಗೆ ಮಂಜೂರು ಮಾಡಿದ್ದ ವಸತಿ ಯೋಜನೆ ಯಡಿ ಫಲಾನುಭವಿಗಳು ತಮ್ಮ ಪಾಲಿನ ವಂತಿಗೆ ಪಾವತಿ ಮಾಡಲು ಸಾಧ್ಯವಾಗದೆ, 2.32 ಲಕ್ಷ ಮನೆಗಳ ನಿರ್ಮಾಣ ನೆನೆಗುದಿಗೆ ಬಿದ್ದಿತು. ಬಡ ಕುಟುಂಬಗಳ ಸಮಸ್ಯೆಯನ್ನು ಮುಖ್ಯಮಂತ್ರಿ ಅವರಿಗೆ ಮನವರಿಕೆ ಮಾಡಿಕೊಟ್ಟರು.

ಸಭೆಯಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಗೃಹ ಮಂಡಳಿ ಅಧ್ಯಕ್ಷ ಶಿವಲಿಂಗೇಗೌಡ, ಸ್ಲಂ ಬೋರ್ಡ್ ಅಧ್ಯಕ್ಷ ಪ್ರಸಾದ್ ಅಬ್ಬಯ್ಯ, ಹಣಕಾಸು ಇಲಾಖೆ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಎಲ್.ಕೆ.ಅತೀಕ್, ಇಲಾಖೆ ಕಾರ್ಯದರ್ಶಿ ನವೀನ್ ರಾಜ್ ಸಿಂಗ್ ಸೇರಿದಂತೆ ಪ್ರಮುಖರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News