ಜನರ ಸಮಸ್ಯೆಗಳಿಗೆ ಮರುಗಿದ ಸಿಎಂ ಸಿದ್ದರಾಮಯ್ಯ; ಹಲವರಿಗೆ ಸ್ಥಳದಲ್ಲಿಯೇ ಪರಿಹಾರ ಘೋಷಣೆ

Update: 2024-02-08 14:36 GMT

ಬೆಂಗಳೂರು: ‘ಕಿಡ್ನಿ ಸಮಸ್ಯೆ, ವಿಕಲಚೇತನ, ಜಮೀನು ಸ್ವಾಧೀನ ಪಡಿಸಿಕೊಂಡಿದ್ದರೂ ಕೈಸೇರದ ಪರಿಹಾರ ಮೊತ್ತ, ಬಹುಅಂಗಾಂಗ ವೈಫಲ್ಯ ಕಾರಣ ಮಗನನ್ನು ಎತ್ತಿಕೊಂಡ ಬಂದು ಕಣ್ಣೀರಿಟ್ಟ ತಾಯಿ, ಗೃಹಲಕ್ಷ್ಮಿ ಯೋಜನೆ ಸೌಲಭ್ಯ ಸಿಗುತ್ತಿಲ್ಲ’ ಎಂಬ ದೂರು ಹೀಗೆ, ಹತ್ತು ಹಲವು ಸಮಸ್ಯೆಗಳನ್ನು ತೆಗೆದುಕೊಂಡು ಬಂದ ಜನರ ಗುಂಪನ್ನು ನೋಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾವುಕರಾಗಿದ್ದು ಮಾತ್ರವಲ್ಲದೆ, ಹಲವು ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಘೋಷಣೆ ಮಾಡಿದರು.

ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ವಿಧಾನಸೌಧ ಆವರಣದಲ್ಲಿ ಏರ್ಪಡಿಸಿದ್ದ ರಾಜ್ಯ ಮಟ್ಟದ ಎರಡನೇ ‘ಜನ ಸ್ಪಂದನ’ ಕಾರ್ಯಕ್ರಮದಲ್ಲಿ ಅಹವಾಲುಗಳ ಮಹಾಪೂರವೇ ಹರಿದುಬಂದಿತು. ಅವುಗಳನ್ನು ಬಗೆಹರಿಸಲು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯಯವರು ಬೆಳಗ್ಗೆಯಿಂದ ಸತತ ಸಂಜೆಯ ವರೆಗೆ ಠಿಕಾಣಿ ಹೂಡಿದರು.

ಈ ವೇಳೆ, ರಾಮನಗರ ಜಿಲ್ಲೆಯ ವಿಜಯಕುಮಾರ್ ಎಂಬುವವರಿಗೆ ಕಿಡ್ನಿ ಕಸಿ ಚಿಕಿತ್ಸೆಗಾಗಿ 4ಲಕ್ಷ ರೂ., ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ಬಸನಗೌಡ ಅವರಿಗೆ ಮ್ಯಾರೋ ಕಸಿಗಾಗಿ 4 ಲಕ್ಷ ರೂ., ತುಮಕೂರು ಜಿಲ್ಲೆಯ 8 ವರ್ಷದ ಶಾಂಭವಿ ಎಂಬ ಮಗುವಿಗೆ ಶ್ರವಣ ಸಾಧನಕ್ಕಾಗಿ 50 ಸಾವಿರ ರೂಪಾಯಿ ಸೇರಿದಂತೆ ಒಟ್ಟು 8.5 ಲಕ್ಷ ರೂ.,ಧನ ಸಹಾಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಥಳದಲ್ಲಿಯೇ ಮಂಜೂರು ಮಾಡಿದರು.

ತುಮಕೂರು ಜಿಲ್ಲೆ ಶಿರಾ ತಾಲೂಕಿನ ನಾಗರಾಜಯ್ಯ ಎಂಬುವರು ರೂಢಿದಾರಿಯನ್ನು ಕತ್ತರಿಸಿರುವುದರಿಂದ 5 ಕಿ.ಮೀ ಬಳಸಿಕೊಂಡು ಓಡಾಡಬೇಕಿದೆ. ಇದನ್ನು ಸರಿಪಡಿಸುವಂತೆ ಕೋರಿದರು.ಇದಕ್ಕೆ ಸ್ಪಂದಿಸಿದ ಸಿಎಂ, ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು. ನೆಲಮಂಗಲದ ಕ್ಯಾನ್ಸರ್ ರೋಗಿ ಯುವತಿಯೊಬ್ಬರು ಶಸ್ತ್ರಚಿಕಿತ್ಸೆಗೆ ಆರ್ಥಿಕ ನೆರವಿನ ಅಗತ್ಯವಿದ್ದು, ಆರ್ಥಿಕ ನೆರವು ಕೋರಿದಾಗ ಪರಿಹಾರ ನಿಧಿ ಶಾಖೆಯ ಅಧಿಕಾರಿಗಳಿಗೆ ಹಸ್ತಾಂತರಿಸಿ, ತಮ್ಮ ವ್ಯಾಪ್ತಿಯಲ್ಲಿ ನೆರವು ಒದಗಿಸುವಂತೆ ಸೂಚಿಸಿದರು.

ಶಿರಾ ಗ್ರಾಮದ ಶಾಂತಿಬಾಯಿ ಎಂಬುವರು ಬುದ್ಧಿಮಾಂದ್ಯ ಮಗುವಿಗೆ ಚಿಕಿತ್ಸೆ ಮಾಡಿಸಲು ನೆರವು ಕೋರಿದಾಗ ಮಗುವಿನ ಪರಿಸ್ಥಿತಿಯನ್ನು ಕಣ್ಣಾರೆ ಕಂಡು ಮರುಗಿದ ಮುಖ್ಯಮಂತ್ರಿ ಸಿದ್ದರಾಮಯ್ಯ ನೆರವು ನೀಡುವ ಅಭಯ ನೀಡಿದರು. ಮಾಲೂರು ತಾಲೂಕಿನ ಬಂತಹಳ್ಳಿ ಗ್ರಾಮದ 50 ವರ್ಷದ ನಾರಾಯಣಸ್ವಾಮಿ, ಖಾತೆ ಬದಲಾವಣೆ ಮಾಡಲಾಗಿದ್ದು ಸರಿಪಡಿಸಿಕೊಡಿ ಎಂದು ಕೋರಿದರು. ಮನವಿ ಸ್ವೀಕರಿಸಿ ಪ್ರಕರಣದ ಕುರಿತು ಪರಿಶೀಲಿಸಲು ಅಧಿಕಾರಿಗಳಿಗೆ ಸೂಚಿಸಿದರು. ರಾಯಚೂರಿನ ಮೂರು ವರ್ಷದ ಶುಶಾಂತ್ ಥಲೆಸ್ಸೆಮಿಯಾ ಕಾಯಿಲೆಗೆ ತುತ್ತಾಗಿದ್ದಾನೆ. ಈತನನ್ನು ಜನಸ್ಪಂದನ ಕಾರ್ಯಕ್ರಮಕ್ಕೆ ಕರೆತಂದ ತಾಯಿ ಲಲಿತಾ ಅವರು ಆರ್ಥಿಕ ಸಹಾಯ ಮಾಡುವಂತೆ ಮನವಿ ಮಾಡಿದರು. ಆಗ ಸಿದ್ದರಾಮಯ್ಯ, ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ನೆರವು ಒದಗಿಸಲಾಗುವುದು ಎಂದು ಅರ್ಜಿಯನ್ನು ಸ್ವೀಕರಿಸಿ ಭರವಸೆ ನೀಡಿದರು.

 

ಬೆಂಗಳೂರಿನ ಜೆ.ಜೆ ನಗರ ನಿವಾಸಿ ಎಂ.ಶ್ರೀಧರ್ ಅವರ ಎರಡೂ ಮೂತ್ರಪಿಂಡಗಳು ವಿಫಲವಾಗಿದ್ದು, ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಆರ್ಥಿಕ ನೆರವು ಕೋರಿದರು. ವಿಶಿಷ್ಟ ಚೇತನ ಸತ್ಯನಾರಾಯಣ ಅವರು ತಮ್ಮ ಡಯಾಲಿಸಿಸ್‍ಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ನೆರವು ಕೊಡಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದಾಗ, ಅರ್ಜಿ ಪರಿಶೀಲಿಸಿ ಚಿಕಿತ್ಸೆಗೆ ನೆರವು ನೀಡುವಂತೆ ಸೂಚಿಸಿದರು.

ಡಬ್ಬಲ್ ಡಿಗ್ರಿ ಮುಗಿಸಿರುವ ಬೆಂಗಳೂರಿನ ನಿವಾಸಿ ವಿಶಿಷ್ಠ ಚೇತನ ನವ್ಯಶ್ರೀ ಅವರು ತಾಯಿ ರಮಾಮಣಿ ಅವರ ಜತೆ ಬಂದು ಉದ್ಯೋಗಕ್ಕಾಗಿ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು. ಉದ್ಯೋಗ ಮೇಳದ ವೇಳೆ ಈ ಅರ್ಜಿಯನ್ನು ಪರಿಗಣಿಸುವಂತೆ ಮುಖ್ಯಮಂತ್ರಿಗಳು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಿದರು.

ಮೈಸೂರು ಸರಕಾರಿ ಆಯುರ್ವೇದ ಕಾಲೇಜಿನ ರಾಜೇಶ್ ಎನ್. ಎಂಬುವರು ಕೆಲಸ ಖಾಯಂಗೊಳಿಸುವಂತೆ ಮನವಿ ಮಾಡಿದರು. ಮುಖ್ಯಮಂತ್ರಿಗಳು ಈ ಕುರಿತು ಪರಿಶೀಲಿಸಿ ಕ್ರಮ ತೆಗೆದುಕೊಳ್ಳುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.

ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲ್ಲೂಕಿನ ಶರಣ ಬಸವ ಕುಮಾರ್ ಅವರಿಗೆ ಎರಡೂ ಕಣ್ಣುಗಳು ಕಾಣದಾಗಿದ್ದು ಸ್ವಂತ ಉದ್ಯೋಗ ಕೈಗೊಳ್ಳಲು ಆರ್ಥಿಕ ನೆರವು ಕೋರಿದರು. ಸಮಸ್ಯೆ ಆಲಿಸಿದ ಮುಖ್ಯ ಮಂತ್ರಿಗಳು ಪರಿಹಾರ ನಿಧಿಯಿಂದ ನೆರವು ನೀಡುವುದಾಗಿ ಅಭಯವನ್ನಿತ್ತರು. ಈ ವೇಳೆ ಸಂಡೂರು ಶಾಸಕ ಈ.ತುಕಾರಾಮ್ ಉಪಸ್ಥಿತರಿದ್ದರು.

ಸಂಜೆ 6 ಗಂಟೆ ವೇಳೆ ಒಟ್ಟು 12,372 ಅರ್ಜಿಗಳು ಸಲ್ಲಿಕೆ‌

ಗುರುವಾರ ಬೆಳಗ್ಗೆಯಿಂದಲೇ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಸಾವಿರಾರು ನಾಗರಿಕರು, ತಪಾಸಣೆಗೆ ಒಳಪಟ್ಟು 8:30ರ ಸುಮಾರಿಗೆ ವಿಧಾನಸೌಧ ಪ್ರವೇಶಿಸಿದರು. ಆನಂತರ, ತಮ್ಮ ದೂರು ಹಾಗೂ ಮನವಿಗಳನ್ನು ಇಲಾಖಾವಾರು ಕೌಂಟರ್ ಗಳ ಅಧಿಕಾರಿಗಳ ಬಳಿ ಜಮೆ ಮಾಡಿದರು. ಅದರಂತೆ ಸಂಜೆ 6 ಗಂಟೆ ವೇಳೆ ಒಟ್ಟು 12,372 ಅರ್ಜಿಗಳು ಸಲ್ಲಿಕೆಯಾಗಿ ದಾಖಲೆ ಪುಟಕ್ಕೆ ಸೇರಿವೆ.

ನಾನಾ ಕ್ಷೇತ್ರಗಳ ಜನರು, ವಿಕಲಚೇತನರು, ದುರ್ಬಲರು, ಈಗಾಗಲೇ ಅರ್ಜಿ ಸಲ್ಲಿಸಿಯೂ ಪರಿಹಾರ ಕಾಣದವರು ಬಂದು ಅರ್ಜಿ ಹಿಡಿದು ನಿಂತಿದ್ದರು. ಈ ವೇಳೆ ಎಲ್ಲ ಇಲಾಖೆಯ ಹಿರಿಯ ಮತ್ತು ಕಿರಿಯ ಅಧಿಕಾರಿಗಳು ಸ್ಥಳದಲ್ಲೇ ಲ್ಯಾಪ್‍ಟಾಪ್ ಹಿಡಿದು ಅವರ ಸಮಸ್ಯೆಗಳಿಗೆ ಕಿವಿಗೂಡಿದರು. ಇದರ ಜತೆಗೆ ಎಲ್ಲ ಜಿಲ್ಲಾಧಿಕಾರಿಗಳು ವೀಡಿಯೋ ಕಾನ್ಫರೆನ್ಸ್‍ನಲ್ಲಿ ಪ್ರತ್ಯಕ್ಷರಾದರು. ಒಟ್ಟಿನಲ್ಲಿ ಇಡೀ ದಿನ ವಿಧಾನಸೌಧ ಆವರಣದಲ್ಲಿ ಸರಕಾರ ಬೀಡುಬಿಟ್ಟಿತ್ತು.

 

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News