ನಬಾರ್ಡ್ ಸಾಲ ಕಡಿತ : ಕೇಂದ್ರ ವಿತ್ತ ಸಚಿವೆ‌ ನಿರ್ಮಲಾ ಸೀತಾರಾಮನ್‌ರನ್ನು ಭೇಟಿಯಾಗಿ ಮನವಿ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ

Update: 2024-11-21 12:25 IST
ನಬಾರ್ಡ್ ಸಾಲ ಕಡಿತ : ಕೇಂದ್ರ ವಿತ್ತ ಸಚಿವೆ‌ ನಿರ್ಮಲಾ ಸೀತಾರಾಮನ್‌ರನ್ನು ಭೇಟಿಯಾಗಿ ಮನವಿ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ

ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾದ ಸಿಎಂ ಸಿದ್ದರಾಮಯ್ಯ

  • whatsapp icon

ಹೊಸದಿಲ್ಲಿ: ನಬಾರ್ಡ್ ಕರ್ನಾಟಕಕ್ಕೆ 2024-25ನೇ ಸಾಲಿಗೆ ರಿಯಾಯಿತಿ ದರದ ಸಾಲದ ಮಿತಿಯನ್ನು ಕಡಿತಗೊಳಿಸಿರುವುದರಿಂದ ರೈತರಿಗೆ ಉತ್ತಮ ಬೆಳೆಯನ್ನು ಬೆಳೆಯಲು ಅನಾನುಕೂಲವಾಗುತ್ತದೆ. ಆದುರಿಂದ, ಅಲ್ಪಾವಧಿ ಕೃಷಿ ಸಾಲದ ಮಿತಿಯನ್ನು ಹೆಚ್ಚಿಸುವಂತೆ ನಬಾರ್ಡ್ ಹಾಗೂ ಆರ್‌ಬಿಐಗೆ ನಿರ್ದೇಶನ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.

ಗುರುವಾರ ಹೊಸದಿಲ್ಲಿಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದ ಅವರು, 2024-25ನೇ ಸಾಲಿನಲ್ಲಿ ರಾಜ್ಯ ಸರಕಾರ 35 ಲಕ್ಷ ರೈತರಿಗೆ 25 ಸಾವಿರ ಕೋಟಿ ರೂ. ಅಲ್ಪಾವಧಿ ಕೃಷಿ ಸಾಲ ವಿತರಿಸುವ ಗುರಿಯನ್ನು ಹೊಂದಿದೆ. 2023-24ನೇ ಹಣಕಾಸು ವರ್ಷದಲ್ಲಿ ಅಲ್ಪಾವಧಿ ಸಹಕಾರಿ ಸಾಲ ವ್ಯವಸ್ಥೆಯಡಿ ಕರ್ನಾಟಕದಲ್ಲಿ 22,902 ಕೋಟಿ ರೂ.ಅಲ್ಪಾವಧಿ ಕೃಷಿ ಸಾಲವನ್ನು ವಿತರಿಸಲಾಗಿದೆ ಎಂದು ತಿಳಿಸಿದರು.

2024-25ನೇ ಸಾಲಿನಲ್ಲಿ ಹಂಗಾಮಿನ ಕೃಷಿ ಚಟುವಟಿಕೆಗಳಿಗೆ ಅಲ್ಪಾವಧಿ ಸಹಕಾರಿ ಸಾಲ ವ್ಯವಸ್ಥೆಯಡಿ 9,162 ಕೋಟಿ ರೂ. ಕೃಷಿ ಸಾಲ ಮಿತಿಗೆ ಅನುಮೋದನೆ ನೀಡುವಂತೆ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ಲಿಮಿಟೆಡ್ ನಬಾರ್ಡ್‍ಗೆ ಪ್ರಸ್ತಾವನೆಯನ್ನು ಸಲ್ಲಿಸಿತ್ತು ಎಂದು ಅವರು ಹೇಳಿದರು.

ನಬಾರ್ಡ್ ರಾಜ್ಯಕ್ಕೆ ಅನುಮೋದಿಸಿರುವ ಕೃಷಿ ಸಾಲದ ಮಿತಿ: 2019-20ರಲ್ಲಿ 4200 ಕೋಟಿ ರೂ., 2020-21ರಲ್ಲಿ 5500 ಕೋಟಿ ರೂ., 2021-22ರಲ್ಲಿ 5483 ಕೋಟಿ ರೂ., 2022-23ರಲ್ಲಿ 5550 ಕೋಟಿ ರೂ., 2023-24ರಲ್ಲಿ 5600 ಕೋಟಿ ರೂ. ಹಾಗೂ 2024-25ರಲ್ಲಿ 2340 ಕೋಟಿ ರೂ. ಸಾಲ ಮಿತಿ ನಿಗದಿ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಗಮನ ಸೆಳೆದರು.

2023-24ನೇ ಸಾಲಿನಲ್ಲಿ ನಬಾರ್ಡ್ ಕೃಷಿ ಚಟುವಟಿಕೆಗಳಿಗೆ 5600 ಕೋಟಿ ರೂ. ಮೊತ್ತದ ರಿಯಾಯಿತಿ ದರದ ಸಾಲದ ಮಿತಿಗೆ ಅನುಮೋದನೆ ನೀಡಿತ್ತು. 2024-25ನೇ ಸಾಲಿನಲ್ಲಿ 9,162 ಕೋಟಿ ರೂ.ಗಳಿಗೆ ಪ್ರಸ್ತಾವನೆಯನ್ನು ಸಲ್ಲಿಸಿದ್ದರೂ, ನಬಾರ್ಡ್ ಕೃಷಿ ಚಟುವಟಿಕೆಗಳಿಗೆ ಕೇವಲ 2340 ಕೋಟಿ ರೂ. ರಿಯಾಯಿತಿ ದರದ ಸಾಲವನ್ನು ಅನುಮೋದಿಸಿದೆ. ಇದು ಕಳೆದ ವರ್ಷಕ್ಕಿಂತ ಶೇ.58ರಷ್ಟು ಕಡಿಮೆಯಾಗಿದೆ ಎಂದು ಅವರು ತಿಳಿಸಿದರು.

ಆರ್‌ಬಿಐ ಸಾಮಾನ್ಯ ಸಾಲದ ಮಿತಿಯನ್ನು ಕಡಿಮೆ ಗೊಳಿಸಿರುವುದೇ ಪ್ರಸಕ್ತ ವರ್ಷ ರಿಯಾಯಿತಿ ದರದ ಸಾಲದ ಮಿತಿಯನ್ನು ಕಡಿಮೆಗೊಳಿಸಲು ಕಾರಣ ಎಂದು ನಬಾರ್ಡ್ ಮಾಹಿತಿ ನೀಡಿದೆ. ಕರ್ನಾಟಕದಲ್ಲಿ ಈ ಬಾರಿ ಉತ್ತಮ ಮಾನ್ಸೂನ್ ಮಳೆಯಾಗಿದ್ದು, ರೈತರು, ಕೃಷಿ, ಸಹಕಾರಿ ಚಟುವಟಿಕೆಗಳಿಗೆ ರಿಯಾಯಿತಿ ದರದ ಸಾಲದ ಮಿತಿಯನ್ನು ಹೆಚ್ಚಿಸುವಂತೆ ಬೇಡಿಕೆ ಇರಿಸಿದ್ದಾರೆ ಎಂದು ಮುಖ್ಯಮಂತ್ರಿ ಗಮನ ಸೆಳೆದರು.

ಆದರೆ, ಕರ್ನಾಟಕಕ್ಕೆ 2024-25ನೇ ಸಾಲಿಗೆ ರಿಯಾಯಿತಿ ದರದ ಸಾಲದ ಮಿತಿಯನ್ನು ಕಡಿತಗೊಳಿಸಿರುವುದು ಅಲ್ಪಾವಧಿ ಕೃಷಿ ಸಹಕಾರಿ ಸಾಲದ ವಿತರಣೆ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಆದುದರಿಂದ, ರಾಜ್ಯದ ರೈತರ ಹಿತದೃಷ್ಟಿಯಿಂದ 2024-25ನೇ ಸಾಲಿನಲ್ಲಿ ಅಲ್ಪಾವಧಿ ಕೃಷಿ ಸಾಲದ ಮಿತಿಯನ್ನು ಹೆಚ್ಚಿಸುವಂತೆ ನಬಾರ್ಡ್ ಹಾಗೂ ಆರ್‌ಬಿಐಗೆ ದಯವಿಟ್ಟು ನಿರ್ದೇಶನ ನೀಡಬೇಕು ಎಂದು ಸಿದ್ದರಾಮಯ್ಯ ಕೋರಿದರು.

ಈ ಸಂದರ್ಭದಲ್ಲಿ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ, ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್, ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ಕೆ.ಗೋವಿಂದರಾಜು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News