ಯಾದಗಿರಿಯ ಸರಕಾರಿ ಶಾಲೆಗೆ ಮೂಲಸೌಲಭ್ಯ ಮನವಿಗೆ ಸ್ಪಂದಿಸಿದ ಸಿಎಂ ಸಿದ್ದರಾಮಯ್ಯ

Update: 2024-02-12 15:18 GMT

Photo: X/@CMofKarnatakaa

ಬೆಂಗಳೂರು: ಸರಕಾರಿ ಪ್ರೌಢಶಾಲೆಯೊಂದರಲ್ಲಿನ ಅವ್ಯವಸ್ಥೆಗಳ ಬಗ್ಗೆ ಮುಖ್ಯಮಂತ್ರಿಗೆ ಎಕ್ಸ್ ಖಾತೆಗೆ ಟ್ಯಾಗ್ ಮಾಡಿ ಮುಖ್ಯಮಂತ್ರಿ ಕಚೇರಿಯ ಗಮನ ಸೆಳೆದ ಪರಿಣಾಮ ತುರ್ತು ಕಾಮಗಾರಿ ಕೈಗೊಂಡು ಶಾಲೆಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿಕೊಡಲಾಗಿದೆ.

ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಗಂಗನಾಳ ಗ್ರಾಮದಲ್ಲಿ ಸರಕಾರಿ ಪ್ರೌಢಶಾಲೆಯಲ್ಲಿ ಒಳಚರಂಡಿ ವ್ಯವಸ್ಥೆ, ಮಧ್ಯಾಹ್ನದ ಬಿಸಿಯೂಟ ಮತ್ತು ನೀರು ಸರಬರಾಜಿಲ್ಲದೆ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗಿದ್ದು ಮಾತ್ರವಲ್ಲದೆ ಶಾಲೆಯ ದುರವಸ್ಥೆಯನ್ನು ಕಂಡು ಬೇಸತ್ತಿದ್ದ ಗ್ರಾಮಸ್ಥರು ಹಾಗೂ ಪೋಷಕರು ಶಾಲೆಗೆ ಬೀಗ ಜಡಿದಿದ್ದಾರೆ. ಹೆಣ್ಣುಮಕ್ಕಳಿಗೆ ಶೌಚಾಯವಿಲ್ಲದೇ ಇದ್ದರೇ ಹೇಗೆ? ಎಂದು ಪ್ರಶ್ನಿಸಿ ಸಿಎಂಗೆ ಶಾಲಾ ಮುಖ್ಯಸ್ಥರು ಸಿಎಂ ಎಕ್ಸ್ ಖಾತೆಗೆ ಟ್ಯಾಗ್ ಮಾಡಿದ್ದರು.

ಇದು ಮುಖ್ಯಮಂತ್ರಿಗಳ ಕಚೇರಿಯ ಗಮನಕ್ಕೆ ಬಂದು ತಕ್ಷಣವೇ ಯಾದಗಿರಿ ಜಿಲ್ಲಾಧಿಕಾರಿಗೆ ಶಾಲೆಯ ದುರವಸ್ಥೆಯನ್ನು ಸರಿಪಡಿಸುವಂತೆ ದೂರವಾಣಿ ಮುಖಾಂತರ ಸೂಚಿಸಿ, ಕುಡಿಯುವ ನೀರು, ಬಿಸಿಯೂಟ ಮತ್ತು ಶೌಚಾಲಯಕ್ಕಾಗಿ ಒಳಚರಂಡಿ ವ್ಯವಸ್ಥೆ ಕಲ್ಪಿಸುವ ಕಾಮಗಾರಿಯನ್ನು ಕೈಗೊಳ್ಳಬೇಕು ಎಂದು ಸೂಚಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ತುರ್ತು ಕಾಮಗಾರಿಯನ್ನು ಕೈಗೊಂಡು ಶಾಲೆಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲು ಕ್ರಮ ವಹಿಸಲಾಗಿದೆ. ಶಾಲೆಯ ಹೊರಗೆ ಕಲಿಯುತ್ತಿದ್ದ ಶಾಲಾ ಮಕ್ಕಳು ಈಗ ಶಾಲಾ ಕೊಠಡಿಗಳಲ್ಲಿ ಕುಳಿತು ಪಾಠ ಕೇಳುತ್ತಿದ್ದಾರೆ. ಗ್ರಾಮಸ್ಥರು ಹಾಗೂ ಪೋಷಕರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ರಾಜ್ಯದ ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಆದ್ಯತೆ ಮೇರೆಗೆ ಕಲ್ಪಿಸುವಂತೆ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಜನಸ್ಪಂದನ ಕಾರ್ಯಕ್ರಮ ಕೇವಲ ಜನಜಾತ್ರೆ ಅಲ್ಲ. ಜನರ ಅಹವಾಲುಗಳಿಗೆ ಸಕಾರಾತ್ಮಕ ಪರಿಹಾರ ದೊರಕಿಸುವ ಪ್ರಯತ್ನ. ಇದು ನಿರಂತರ ಪ್ರಕ್ರಿಯೆಯಾಗಿದ್ದು, ವಿವಿಧ ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟವಾಗುವ ಸಾರ್ವಜನಿಕ ಕುಂದು-ಕೊರತೆಗಳನ್ನು ಪರಿಗಣಿಸಿ ಬಗೆಹರಿಸಲು ಮುಖ್ಯಮಂತ್ರಿಗಳ ಸಚಿವಾಲಯದಲ್ಲಿ ಪ್ರತ್ಯೇಕ ತಂಡವನ್ನು ನಿಯೋಜಿಸಲಾಗಿದ್ದು ಸಿಎಂ ಕಾರ್ಯದರ್ಶಿ ಡಾ.ಕೆ.ವಿ.ತ್ರಿಲೋಕಚಂದ್ರ ನೇತೃತ್ವದಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News