ʼಗ್ಯಾರಂಟಿʼ ಕುರಿತು ಅಪಪ್ರಚಾರ : ಬಿಜೆಪಿ, ಜೆಡಿಎಸ್ ವಿರುದ್ಧ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ದೂರು
ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರಕಾರ ಜಾರಿಗೊಳಿಸಿರು ಗ್ಯಾರಂಟಿ ಯೋಜನೆಗಳ ಕುರಿತು ಅಪಪ್ರಚಾರ ಮಾಡುತ್ತಿರುವ ಬಿಜೆಪಿ ಹಾಗೂ ಜೆಡಿಎಸ್ ನಾಯಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ರಾಜ್ಯ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಕೆ ಮಾಡಿದೆ.
ಗುರುವಾರ ಕಾಂಗ್ರೆಸ್ ಸಂವಹನ ವಿಭಾಗದ ಅಧ್ಯಕ್ಷ ರಮೇಶ್ ಬಾಬು ದೂರು ಸಲ್ಲಿಕೆ ಮಾಡಿದ್ದರು, ಚುನಾವಣೆ ಬಳಿಕ ಕಾಂಗ್ರೆಸ್‍ನ ಗ್ಯಾರಂಟಿಗಳು ನಿಲ್ಲುತ್ತದೆ ಎಂದು ವಿಪಕ್ಷಗಳು ಅಪಪ್ರಚಾರ ಮಾಡುತ್ತಿವೆ. ಈ ಹಿನ್ನಲೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಇನ್ನೂ, ಬೆಂಗಳೂರು ಉತ್ತರ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ವಿರುದ್ಧ ಕಾಂಗ್ರೆಸ್ ಸುಳ್ಳು ಕರ ಪತ್ರ ಹಂಚುತ್ತಿರುವ ಬಗ್ಗೆ ಬೆಂಗಳೂರಿನಲ್ಲಿ ಚುನಾವಣಾ ಆಯೋಗಕ್ಕೆ ಬಿಜೆಪಿ ಶಾಸಕ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ್ ನೇತೃತ್ವದ ಬಿಜೆಪಿ ನಿಯೋಗ ದೂರು ನೀಡಿದೆ.
ಈ ವೇಳೆ ಮಾತನಾಡಿದ ಅವರು, ಅನುಮತಿ ಇಲ್ಲದೆ ಕರಪತ್ರ ಮುದ್ರಣ ಮಾಡಿ ಹಂಚುತ್ತಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಮೇಲೆ ನಮಗೆ ಅನುಮಾನ ಇದೆ. ಅದರಲ್ಲಿ ಉತ್ತರ ಕ್ಷೇತ್ರದಲ್ಲಿ ಯಾರಿಗೆ ನಿಮ್ಮ ಮತ ಎಂದು ಇದೆ. ಬಿಜೆಪಿ ಅಭ್ಯರ್ಥಿ ಬಗ್ಗೆ ಆಧಾರ ರಹಿತ ಆರೋಪ ಮಾಡಲಾಗಿದೆ. ತಕ್ಷಣವೇ ಇವರ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದೇವೆ ಎಂದರು.