ಕಾಂಗ್ರೆಸ್ ಸರ್ಕಾರ ಗೊಂದಲದ ಗೂಡಾಗಿದೆ: ಬಸವರಾಜ ಬೊಮ್ಮಾಯಿ
ಹಾವೇರಿ: ಈ ಸರ್ಕಾರದಲ್ಲಿ ಯಾವುದೂ ಸರಿಯಿಲ್ಲ. ಸಚಿವರ ನಡುವೆ ಹೊಂದಾಣಿಕೆಯಿಲ್ಲ. ಸರ್ಕಾರ ಗೊಂದಲದ ಗೂಡಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರತಿದಿನ ಈ ಸರ್ಕಾರದ ಮಂತ್ರಿಗಳು ಒಂದಿಲ್ಲೊಂದು ಗೊಂದಲದ ಹೇಳಿಕೆ ಕೊಡುತ್ತಿದ್ದಾರೆ. ಈ ಸರ್ಕಾರದ ಒಳಗಡೆ ಯಾವುದೂ ಸರಿ ಇಲ್ಲ. ಸರ್ಕಾರ ಗೊಂದಲದ ಗೂಡಾಗಿದೆ. ಸಚಿವರ ನಡುವೆ ಒಬ್ಬರಿಗೊಬ್ಬರ ಸಹಕಾರ ಇಲ್ಲ. ಕ್ಯಾಬಿನೆಟ್ ನಲ್ಲಿ ಒಕ್ಕಟ್ಟಿಲ್ಲ. ಈ ಬಗ್ಗೆ ಕಾಂಗ್ರೆಸ್ ಶಾಸಕರಲ್ಲಿ ಆಕ್ರೋಶ ಇದೆ. ಕರ್ನಾಟಕದ ಜನರಿಗೆ ಈ ಸರ್ಕಾರ ಇದೆ ಎಂಬ ಭಾವನೆ ಇಲ್ಲ ಎಂದು ಹೇಳಿದರು.
ರಾಜ್ಯದಲ್ಲಿ ಬರ ಬಂದರೆ ನೆರವಿಲ್ಲ, ಕಾವೇರಿ ವಿಚಾರದಲ್ಲಿ ನೆರವಾಗುತ್ತಿಲ್ಲ. ನಾಲ್ಕು ತಿಂಗಳಲ್ಲಿ ಈ ಸರ್ಕಾರ ಜನರ ಪ್ರೀತಿಯನ್ನು ಕಳೆದಕೊಂಡಿದೆ. ಸಚಿವರ ಮೇಲೆ ಮುಖ್ಯಮಂತ್ರಿಗಳ ನಿಯಂತ್ರಣ ಇಲ್ಲ ಎಂದರು.
ಕಾವೇರಿ ವಿಚಾರದಲ್ಲಿ ಗೊಂದಲ
ಕಾವೇರಿ ನೀರಿನ ವಿಚಾರದಲ್ಲಿ ಮುಖ್ಯಮಂತ್ರಿಗಳು ನ್ಯಾಯಮೂರ್ತಿಗಳ ಸಭೆಯಲ್ಲಿ ಒಂದು ಹೇಳುತ್ತಾರೆ, ಹೊರಗೊಂದು ಹೇಳುತ್ತಾರೆ. ನಿನ್ನೆ ನ್ಯಾಯಮೂರ್ತಿಗಳ ಮೀಟಿಂಗ್ ನಲ್ಲಿ ನಾವು ಅಪೀಲ್ ಹೊಗುತ್ತೇವೆ. ನೀರು ನಿಲ್ಲಿಸುತ್ತೇವೆ ಅಂತ ಸಭೆಯಲ್ಲಿ ಹೇಳಿದ್ದರು. ಆದರೆ, ಹೊರಗಡೆ ಬಂದು ಅಪೀಲ್ ಹೊಗುತ್ತೇವೆ ಆದರೆ, ನೀರು ನಿಲ್ಲಿಸಲು ಆಗುವುದಿಲ್ಲ ಅಂತ ಹೇಳಿದ್ದಾರೆ. ಯಾಕೆ ನಿಲ್ಲಿಸಲು ಆಗಲ್ಲ ಎಂದು ಪ್ರಶ್ನಿಸಿದರು.
ನೀರು ನಿಲ್ಲಿಸಿದರೆ ನ್ಯಾಯಾಂಗ ನಿಂದನೆ ಆಗುತ್ತದೆ. ಸರ್ಕಾರ ವಜಾ ಆಗುತ್ತೆ. ಡ್ಯಾಂ ವಶಪಡಿಸಿಕೊಳ್ಳುತ್ತಾರೆ ಅಂತ ಮುಖ್ಯಮಂತ್ರಿಗಳು ಹೇಳುತ್ತಾರೆ. ನೀವು ಇನ್ನೂ ಸುಪ್ರಿಂ ಕೊರ್ಟ್ ಗೆ ಹೋಗುವುದಿದೆ. ಅಲ್ಲಿಗೆ ಹೋಗುವ ಮುನ್ನ ಹೆದರಿಕೊಂಡು ಈ ತರಹ ಹೇಳಿಕೆ ಕೊಟ್ಟರೆ, ನೀರು ಬಿಡುವಂತೆ ಕೊರ್ಟ್ ಹೇಳುತ್ತದೆ. ಮುಖ್ಯಮಂತ್ರಿಗಳಿಗೆ ಅಷ್ಟಾದರೂ ವ್ಯವಧಾನ ಬೇಡವೇ ? ಈ ಸರ್ಕಾರ ಈ ತರಹ ದ್ವಂದ್ವ ನೀತಿಯಿಂದ ನಡೆದುಕೊಂಡು ಬಂದಿದೆ. ರಾಜ್ಯದ ನೆಲ ಜಲ ಉಳಿಸಲು ಈ ಸರ್ಕಾರದಿಂದ ಸಾಧ್ಯ ಇಲ್ಲ ಅನ್ನುವುದು ಜನರಿಗೆ ಗೊತ್ತಾಗಿದೆ ಎಂದರು.
ಶಾಮನೂರು ಹೇಳಿಕೆ ಗಂಭೀರ
ಈ ಸರ್ಕಾರದಲ್ಲಿ ಲಿಂಗಾಯತ ಅಧಿಕಾರಿಗಳಿಗೆ ರಕ್ಷಣೆ ಇಲ್ಲ ಎಂಬ ಶಾಮನೂರು ಶಿವಶಂಕರಪ್ಪ ಅವರ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಶಾಮನೂರು ಶಿವಶಂಕರಪ್ಪ ಕಾಂಗ್ರೆಸ್ ಪಕ್ಷದ ಹಿರಿಯ ಶಾಸಕರು. ಅಖಿಲ ಭಾರತ ವಿರಶೈವ ಮಹಾಸಭಾದ ಅಧ್ಯಕ್ಷರು ಅವರ ಹೇಳಿಕೆಯನ್ನು ಜನ ಗಂಭೀರವಾಗಿ ಪರಿಗಣನೆ ಮಾಡುತ್ತಾರೆ. ಮುಖ್ಯಮಂತ್ರಿಗಳು ಅವರಿಗೆ ಸ್ಪಷ್ಟವಾದ ಉತ್ತರ ಕೊಡಬೇಕು. ಮುಖ್ಯಮಂತ್ರಿಗಳ ಹೇಳಿಕೆ ಬಳಿಕವೂ ತಮ್ಮ ಹೇಳಿಕೆಗೆ ಬದ್ದ ಅನ್ನುವುದನ್ನು ನೋಡಿದರೆ ಶಾಮನೂರು ಶಿವಶಂಕರಪ್ಪ ಹೇಳಿಕೆ ಬಹಳ ಗಂಭಿರವಾಗಿದೆ ಎಂದು ಹೇಳಿದರು.