ದೇಶ ವಿಭಜನೆಗೆ ಕಾಂಗ್ರೆಸ್ ಕಾರಣ: ಆರ್.ಅಶೋಕ್

Update: 2023-08-14 13:15 GMT

ಬೆಂಗಳೂರು, ಆ.14: ಸ್ವಾತಂತ್ರ್ಯ ಹೋರಾಟದಲ್ಲಿ ಲಕ್ಷಾಂತರ ಜನರು ಹೋರಾಡಿದ್ದರು. ಭಾರತ ಭಾರತವಾಗಿ ಉಳಿಯಬೇಕೆಂಬ ಪಣ ತೊಟ್ಟಿದ್ದರು. ಆದರೆ, ಆ.14ರಂದು ದೇಶ ವಿಭಜನೆ ಆಗಿದ್ದು, ಅದೊಂದು ಕರಾಳ ದಿನ. ದೇಶ ವಿಭಜನೆಗೆ ಅಂದಿನ ಕಾಂಗ್ರೆಸ್ ಪಕ್ಷ ನೇರ ಕಾರಣ ಎಂದು ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್ ಟೀಕಿಸಿದರು.

ಸೋಮವಾರ ನಗರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ‘ಭಾರತ ವಿಭಜನೆಯ ದುರಂತ ಕಥೆಗೆ ಸಂಬಂಧಿಸಿದ ಪ್ರದರ್ಶಿನಿ’ಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನೆಹರು ನೇತೃತ್ವದ ಕಾಂಗ್ರೆಸ್ ಹುನ್ನಾರದ ಪರಿಣಾಮವಾಗಿ ಜಿನ್ನಾ ಅವರ ಮೂಲಕ ಈ ಆಟ ಮಾಡಲಾಯಿತು ಎಂದರು.

ಕಾಂಗ್ರೆಸ್ ಸಂಸ್ಕøತಿಯೇ ಇದು. ಕಾಶ್ಮೀರವು ನಮ್ಮದೇ ಎನ್ನುವ ಎದೆಗಾರಿಕೆ ಅವರಿಗೆ ಇರಲಿಲ್ಲ. 370ನೆ ವಿಧಿಯನ್ನು ರದ್ದು ಮಾಡಿದ ಬಳಿಕ ಲೂಟಿ, ದಂಗೆ ಕಡಿಮೆ ಆಗಿದೆ. ಕಾಂಗ್ರೆಸ್ ದೇಶವನ್ನು ತುಂಡರಿಸಿದೆ ಎಂದು ಎಐಸಿಸಿ ಅಧ್ಯಕ್ಷ ಖರ್ಗೆಯವರಿಗೆ ತಿಳಿಸಬಯಸುತ್ತೇನೆ. ಮೋದಿ ದೇಶವನ್ನು ಒಟ್ಟಾಗಿ ಒಯ್ಯುತ್ತಿದ್ದಾರೆ. ಕಾಶ್ಮೀರ, ಮಣಿಪುರ ಮತ್ತಿತರ ಕಡೆಗಣಿತ ಪ್ರದೇಶಗಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ ಎಂದರು.

ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಮಾತನಾಡಿ, ದೇಶ ವಿಭಜನೆ ಸಂದರ್ಭದಲ್ಲಿ ಅದನ್ನು ಅತ್ಯಂತ ಕಠೋರವಾಗಿ ವಿರೋಧಿಸಿದವರು ‘ಗಡಿನಾಡ ಗಾಂಧಿ’ ಖಾನ್ ಅಬ್ದುಲ್ ಗಫಾರ್ ಖಾನ್. ಸ್ವಾರ್ಥಕ್ಕಾಗಿ ದೇಶ ವಿಭಜನೆ ಮಾಡದಿರಿ, ದೇಶ ವಿಭಜನೆ ಮಾಡಿದರೆ, ನಮ್ಮನ್ನು ನೀವು ಲಾಹೋರ್ ನ ಪಠಾಣರ ಕೈಗೆ ಕೊಡುತ್ತೀರಿ. ಅದಕ್ಕಾಗಿ ದೇಶ ವಿಭಜಿಸದಿರಿ ಎಂದು ಹೇಳಿದ್ದರು. ಇವತ್ತೂ ಆ ಮಾತು ಪ್ರಸ್ತುತವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಮಾಜಿ ಡಿಸಿಎಂ ಡಾ.ಅಶ್ವತ್ಥನಾರಾಯಣ್, ಪ್ರಧಾನ ಕಾರ್ಯದರ್ಶಿಗಳಾದ ಎನ್.ರವಿಕುಮಾರ್, ಸಿದ್ದರಾಜು, ಮಾಜಿ ಶಾಸಕ ಪ್ರೀತಂಗೌಡ, ಜಿಲ್ಲಾಧ್ಯಕ್ಷ ಜಿ.ಮಂಜುನಾಥ್ ಉಪಸ್ಥಿತರಿದ್ದರು.

 

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News