ಜು.27ಕ್ಕೆ ಸಿಎಂ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ

Update: 2023-07-24 12:32 GMT

ಬೆಂಗಳೂರು, ಜು. 24: ಸರಕಾರದ ಐದು ಗ್ಯಾರಂಟಿ ಯೋಜನೆಗಳ ಅನುಷ್ಟಾನಕ್ಕೆ ಸಂಬಂಧಿಸಿದಂತೆ ಪರಾಮರ್ಶೆ, ನಿಗಮ ಮಂಡಳಿ ಅಧ್ಯಕ್ಷ-ಉಪಾಧ್ಯಕ್ಷರ ನೇಮಕವೂ ಸೇರಿದಂತೆ ಇನ್ನಿತರ ರಾಜಕೀಯ ವಿಚಾರಗಳಿಗೆ ಸಂಬಂಧಿಸಿದಂತೆ ಸಮಾಲೋಚನೆ ನಡೆಸಲು ಜು.27ರಂದು ಕಾಂಗ್ರೆಸ್ ಶಾಸಕಾಂಗ ಪಕ್ಷ ಸಭೆ ಕರೆಯಲಾಗಿದೆ.

ಶಾಸಕಾಂಗ ಪಕ್ಷದ ನಾಯಕರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಇನ್ನಿತರರು ಪಾಲ್ಗೊಳ್ಳಲಿದ್ದು, ನಗರದ ಏಟ್ರಿಯಾ ಹೋಟೆಲ್ ಅಂದು ಸಂಜೆ 6.30ಕ್ಕೆ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ.

ಬಜೆಟ್ ಅಧಿವೇಶನದಲ್ಲಿ ನಡೆದ ಚರ್ಚೆ, ಆಡಳಿತ ಪಕ್ಷದ ವಿರುದ್ಧದ ಬಿಜೆಪಿ-ಜೆಡಿಎಸ್ ಜಂಟಿ ಹೋರಾಟದ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ರೂಪಿಸಬೇಕಾದ ಕಾರ್ಯತಂತ್ರ, ಲೋಕಸಭಾ ಚುನಾವಣೆ ದೃಷ್ಟಿಯಿಂದ ಪಕ್ಷ ಸಂಘಟನೆ ಸೇರಿದಂತೆ ಇನ್ನಿತರ ವಿಷಯಗಳು ಸಭೆಯಲ್ಲಿ ಚರ್ಚೆ ನಡೆಸುವ ಸಾಧ್ಯತೆಗಳಿವೆ.

ಜು. 19ರ ಸಂಜೆ 6.30ಕ್ಕೆ ಶಾಸಕಾಂಗ ಪಕ್ಷದ ಸಭೆ ನಡೆಯಬೇಕಿತ್ತು. ಆದರೆ, ಅದೇ ದಿನ ಸಚಿವರ ಜೊತೆ ಎಐಸಿಸಿ ಮುಖಂಡ ರಾಹುಲ್ ಸಭೆ ನಡೆಸಲಿದ್ದಾರೆಂಬ ಕಾರಣಕ್ಕೆ ಸಿಎಲ್‍ಪಿ ಸಭೆ ಮುಂದೂಡಲಾಗಿತ್ತು. ಈ ಮಧ್ಯೆ ಜು.17 ಮತ್ತು 18ರಂದು ನಗರದಲ್ಲಿ ನಡೆದ 26 ವಿಪಕ್ಷಗಳ ಸಭೆಗೆ ಸೋನಿಯಾ ಗಾಂಧಿ ಜೊತೆ ಬಂದಿದ್ದ ರಾಹುಲ್, ಜು.18ರ ರಾತ್ರಿಯೇ ದಿಲ್ಲಿಗೆ ಹಿಂದಿರುಗಿದ್ದರು. ಹೀಗಾಗಿ, ಸಚಿವರೊಂದಿಗಿನ ಸಭೆ ರದ್ದುಪಡಿಸಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News