ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ: ಕಾಂಗ್ರೆಸ್ ಕಾರ್ಯಕರ್ತರಿಂದ ಬಿಜೆಪಿ ಕಚೇರಿ ಮುತ್ತಿಗೆಗೆ ಯತ್ನ

Update: 2024-04-30 13:14 GMT

ಬೆಂಗಳೂರು: ಲೈಂಗಿಕ ಹಗರಣದ ವಿಡಿಯೋ ವಿಚಾರವಾಗಿ ಆರೋಪಿ ವಿದೇಶಕ್ಕೆ ಪರಾರಿಯಾಗಲು ಸಹಕರಿಸಲಾಗಿದೆ ಎಂದು ಆರೋಪಿಸಿ ನಗರದ ಮಲ್ಲೇಶ್ವರಂನಲ್ಲಿರುವ ಬಿಜೆಪಿ ರಾಜ್ಯ ಕಚೇರಿಗೆ ಯೂತ್ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ನೇತೃತ್ವದಲ್ಲಿ ಕಾರ್ಯಕರ್ತರು ಮಂಗಳವಾರ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ.

ಈ ವೇಳೆ ಪೊಲೀಸರು ಯೂತ್ ಕಾಂಗ್ರೆಸ್ ಕಾರ್ಯಕರ್ತರನ್ನು ತಡೆದಿದ್ದು, ಪೊಲೀಸರ-ಕಾರ್ಯಕರ್ತರ ನಡುವೆ ವಾಗ್ವಾದ ನಡೆಯಿತು. ನೂರಾರು ಕಾಂಗ್ರೆಸ್ ಕಾರ್ಯಕರ್ತರಿಂದ ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಲಾಯಿತು. ಬಿಜೆಪಿ, ಪ್ರಧಾನಿ ಮೋದಿ ವಿರುದ್ಧ ಧಿಕ್ಕಾರ ಕೂಗುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಆರೋಪಿ ವಿದೇಶಕ್ಕೆ ಹೋಗಲು ಕೇಂದ್ರ ಸರಕಾರ ಸಹಕಾರ ನೀಡಿದೆ ಎಂದು ಆರೋಪಿಸಿ ಧಿಕ್ಕಾರ ಕೂಗಿದರು. ಕೂಡಲೇ ಪೊಲೀಸರು ಕಾರ್ಯಕರ್ತರನ್ನು ವಶಕ್ಕೆ ಪಡೆದರು.

ಇತ್ತ ಹಾಸನ ಪೆನ್‍ಡ್ರೈವ್ ವಿಡಿಯೋ ಆರೋಪ ಹಿನ್ನೆಲೆಯಲ್ಲಿ ಬೆಂಗಳೂರಿನ ಮಹಾರಾಣಿ ಕ್ಲಸ್ಟರ್ ಕಾಲೇಜಿನಲ್ಲಿ ಎನ್‍ಎಸ್‍ಯುಐ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ನೂರಾರು ವಿದ್ಯಾರ್ಥಿನಿಯರು ಪ್ರತಿಭಟನೆ ಮೂಲಕ ಆಕ್ರೋಶ ಹೊರಹಾಕಿದರು. ಪ್ರತಿಭಟನೆಯಲ್ಲಿ ‘ಮಹಿಳೆಯರಿಗೆ ಆಮಿಷ ತೋರಿಸಿ ಹೆಣ್ಣು ಮಕ್ಕಳ ಜೊತೆ ಚೆಲ್ಲಾಟ ಆಡುತ್ತಿದ್ದಾರೆ. ಇತಿಹಾಸದಲ್ಲಿ ಈ ತರಹ ಕೃತ್ಯ ಯಾರೂ ಮಾಡಿಲ್ಲ. 65 ವರ್ಷ ಮಹಿಳೆ ಮೇಲೆ ವಿಕೃತಿ ಮೆರೆದಿದ್ದಾರೆ. ಹಲವು ಮಹಿಳೆಯರ ಮೇಲೆ ಲೈಂಗಿಕ ಕಿರುಕುಳ ಆಗಿದೆ ಎಂಬ ಮಾಹಿತಿ ಇದೆ. ಅವರ ಪೈಕಿ ಬಹುತೇಕರು ಹಿಂದೂಗಳೇ ಆಗಿದ್ದಾರೆ. ಯಾರಾದರು ಮಹಿಳೆಯರೇ, ಅವರಿಗೆ ರಕ್ಷಣೆ ಮಾಡಬೇಕು. ಸಮಾಜದಲ್ಲಿ ಯಾರೇ ಮಾಡಿದರು ತಪ್ಪು ತಪ್ಪೇ. ಅವರನ್ನು ಕೂಡಲೇ ಬಂಧನ ಮಾಡಬೇಕು’ ಎಂದು ವಿದ್ಯಾರ್ಥಿನಿಯರು ಆಗ್ರಹಿಸಿದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News