ಬೆಂಗಳೂರು ಸಮೀಪ ಕೆಎಚ್‍ಐಆರ್ ಸಿಟಿ ನಿರ್ಮಾಣ | 40 ಸಾವಿರ ಕೋಟಿ ರೂ. ಹೂಡಿಕೆ, 1 ಲಕ್ಷ ಉದ್ಯೋಗ ಸೃಷ್ಟಿ: ಎಂ.ಬಿ.ಪಾಟೀಲ್

Update: 2023-11-10 15:35 GMT

ಚಿತ್ರ ಕೃಪೆ- twitter@MBPatil

ಬೆಂಗಳೂರು, ನ.10: ರಾಜಧಾನಿಯಿಂದ 60-80 ಕಿ.ಮೀ. ದೂರದಲ್ಲಿ ಜಾಗತಿಕ ದರ್ಜೆಯ `ಜ್ಞಾನ, ಆರೋಗ್ಯ, ನಾವೀನ್ಯತೆ ಮತ್ತು ಸಂಶೋಧನಾ ನಗರ’ (ಕೆಎಚ್‍ಐಆರ್ ಸಿಟಿ)ವನ್ನು ಅಭಿವೃದ್ಧಿ ಪಡಿಸಲಾಗುವುದು. ಇಲ್ಲಿ 40 ಸಾವಿರ ಕೋಟಿ ರೂ.ಹೂಡಿಕೆ ಆಗಲಿದ್ದು, 80 ಸಾವಿರದಿಂದ 1 ಲಕ್ಷ ಉದ್ಯೋಗ ಸೃಷ್ಟಿ ಆಗಲಿದೆ ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.

ಉದ್ದೇಶಿತ ಕೆಎಚ್‍ಐಆರ್ ಸಿಟಿ ಬಗ್ಗೆ ಗಣ್ಯ ಉದ್ಯಮಿಗಳು, ವೈದ್ಯರು, ಶಿಕ್ಷಣ ತಜ್ಞರು ಮತ್ತು ಸಂಶೋಧಕರ ಸಲಹೆ, ಅಭಿಪ್ರಾಯಗಳನ್ನು ಪಡೆಯಲು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ದುಂಡು ಮೇಜಿನ ಸಭೆಯ ಬಳಿಕ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಜಗತ್ತಿನ ಅತ್ಯುತ್ತಮ ಕಂಪೆನಿಗಳು, ವಿಶ್ವವಿದ್ಯಾಲಯಗಳ ಕ್ಯಾಂಪಸ್, ಆಸ್ಪತ್ರೆ, ಆರ್ ಅಂಡ್ ಡಿ ಕೇಂದ್ರಗಳು, ಆಧುನಿಕ ಸ್ಟಾರ್ಟಪ್ಸ್, ಕೆಎಚ್‍ಐಆರ್ ಸಿಟಿಯಲ್ಲಿ ನೆಲೆಯೂರಲಿವೆ. ಒಟ್ಟು ಎರಡು ಹಂತಗಳಲ್ಲಿ ಇದನ್ನು ತಲಾ ಒಂದು ಸಾವಿರ ಎಕರೆಯಲ್ಲಿ ಅಭಿವೃದ್ಧಿ ಪಡಿಸಲಾಗುವುದು. ಈ ಯೋಜನೆಯು ಸಾಕಾರಗೊಂಡರೆ 1 ಲಕ್ಷ ಕೋಟಿ ರೂ.ಗಳಷ್ಟು ವಾರ್ಷಿಕ ವರಮಾನ ಉತ್ಪತ್ತಿಯಾಗಲಿದ್ದು, ರಾಜ್ಯದ ಜಿಡಿಪಿಗೆ ಶೇ.5ರಷ್ಟು ಕೊಡುಗೆ ಇದರಿಂದ ಬರಲಿದೆ ಎಂದು ಅವರು ತಿಳಿಸಿದರು.

ಅಮೆರಿಕ, ಸಿಂಗಪುರ, ಜಪಾನ್, ಅರಬ್, ಸ್ವೀಡನ್, ಡೆನ್ಮಾರ್ಕ್, ಚೀನಾ ಮುಂತಾದ ದೇಶಗಳಲ್ಲಿ ಇಂತಹ `ಸಿಟಿ’ಗಳಿವೆ. ನಿರೀಕ್ಷಿತ ಮಟ್ಟದ ಆರ್ಥಿಕ ಅಭಿವೃದ್ಧಿಯನ್ನು ಸಾಧಿಸಬೇಕೆಂದರೆ ಆರೋಗ್ಯ, ಶಿಕ್ಷಣ, ಸಂಶೋಧನೆ, ನಾವೀನ್ಯತೆ, ವಿಜ್ಞಾನ, ತಂತ್ರಜ್ಞಾನ ಇವುಗಳ ಮೇಲೆ ಗಮನವನ್ನು ಕೇಂದ್ರೀಕರಿಸಬೇಕಾಗಿದೆ. ಬೆಂಗಳೂರು ಇವುಗಳ ಆಡುಂಬೊಲವಾಗಿದ್ದು, ಇದರ ಗರಿಷ್ಠ ಲಾಭವನ್ನು ನಾವು ಪಡೆದುಕೊಳ್ಳಬೇಕಾಗಿದೆ ಎಂದು ಅವರು ಪ್ರತಿಪಾದಿಸಿದರು.

ಕೆಎಚ್‍ಐಆರ್ ಸಿಟಿಯಲ್ಲಿ ಆರೋಗ್ಯ ಕ್ಷೇತ್ರದ ಕಂಪೆನಿಗಳು, ವೈದ್ಯಕೀಯ ಕೇಂದ್ರಗಳು, ರಿಯಲ್ ಎಸ್ಟೇಟ್, ಹೂಡಿಕೆದಾರರು ಮತ್ತು ವಿಮಾ ಕಂಪೆನಿಗಳ ನಡುವೆ ಸಹಭಾಗಿತ್ವಕ್ಕೆ ಒತ್ತು ಇರಲಿದೆ. ಇದು ಅಂತಿಮವಾಗಿ ಜಾಗತಿಕ ಮಟ್ಟದಲ್ಲಿ ಉತ್ಕøಷ್ಟತೆಯ ಮಾನದಂಡವಾಗಿ ಗುರುತಿಸಿಕೊಳ್ಳುವಂತೆ ಮಾಡುವುದು ಸರಕಾರದ ಗುರಿಯಾಗಿದೆ ಎಂದು ಎಂ.ಬಿ.ಪಾಟೀಲ್ ವಿವರಿಸಿದರು.

ಈ ‘ಸಿಟಿ’ಯನ್ನು ಸರಿಯಾದ ದಿಕ್ಕಿನಲ್ಲಿ ಮುಂದಿನ ಹಂತಕ್ಕೆ ಕೊಂಡೊಯ್ಯಲು ಗಣ್ಯ ಸಾಧಕರ ಸಲಹೆಗಳನ್ನು ಪಡೆಯಲಾಗಿದ್ದು, ಒಂದೊಂದು ವಲಯಕ್ಕೂ ಉಪಸಮಿತಿಗಳನ್ನು ರಚಿಸಲಾಗುವುದು. ಒಟ್ಟಾರೆಯಾಗಿ ಯೋಜನೆಯು ರಾಜ್ಯಕ್ಕೆ ವಾಣಿಜ್ಯ ದೃಷ್ಟಿಯಿಂದ ಲಾಭದಾಯಕವಾಗಿ ಪರಿಣಮಿಸಬೇಕು ಎನ್ನುವÀ ನಿಟ್ಟಿನಲ್ಲಿ ನೀಲನಕ್ಷೆ ಮತ್ತು ಕಾರ್ಯತಂತ್ರ ರೂಪಿಸಲಾಗುವುದು ಎಂದು ಅವರು ನುಡಿದರು.

ಸಭೆಯಲ್ಲಿ ಉದ್ಯಮಿಗಳಾದ ಕ್ರಿಸ್ ಗೋಪಾಲಕೃಷ್ಣನ್, ಗೀತಾಂಜಲಿ ಕಿರ್ಲೋಸ್ಕರ್, ಪ್ರಶಾಂತ್ ಪ್ರಕಾಶ್, ವೈದ್ಯರಾದ ಡಾ.ದೇವಿಶೆಟ್ಟಿ, ಡಾ.ಸಿ.ಎನ್.ಮಂಜುನಾಥ್, ಡಾ.ವಿವೇಕ್ ಜವಳಿ, ಡಾ.ಶರಣ್ ಪಾಟೀಲ್, ಡಾ.ತಸ್ಲಿಂ ಸೈಯದ್, ಅಂಶುಲ್ ಗುಪ್ತ, ಕೈಗಾರಿಕಾ ಇಲಾಖೆಯ ಆಯುಕ್ತೆ ಗುಂಜನ್ ಕೃಷ್ಣ, ಆರೋಗ್ಯ ಇಲಾಖೆಯ ಉನ್ನತಾಧಿಕಾರಿ ಟಿ.ಕೆ.ಅನಿಲ್ ಕುಮಾರ್, ಕೌಶಲ್ಯಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ಉಮಾ ಮಹದೇವನ್ ಮುಂತಾದವರು ಉಪಸ್ಥಿತರಿದ್ದರು. ಸಭೆಯಲ್ಲಿ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News