ರಾಜ್ಯದಲ್ಲಿ ಮುಂದುವರೆದ ಬಿಸಿಗಾಳಿ, ತಾಪಮಾನದಲ್ಲಿ ಏರಿಕೆ

Update: 2024-04-07 15:09 GMT

ಬೆಂಗಳೂರು : ರಾಜ್ಯದಲ್ಲಿ ಇನ್ನೂ ಮೂರು ದಿನಗಳ ಕಾಲ ಬಿಸಿಗಾಳಿ ಇರಲಿದ್ದು, ಬಹುತೇಕ ಜಿಲ್ಲೆಗಳಲ್ಲಿ ಕನಿಷ್ಠ ಮತ್ತು ಗರಿಷ್ಠ ತಾಪಮಾನದಲ್ಲಿ 2 ರಿಂದ 3 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಏರಿಕೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಬೀದರ್, ಬಾಗಲಕೋಟೆ, ಗದಗ, ಕಲಬುರಗಿ, ಕೊಪ್ಪಳ, ರಾಯಚೂರು, ಯಾದಗಿರಿ, ವಿಜಯಪುರ, ಹಾವೇರಿ, ಬಳ್ಳಾರಿ, ವಿಜಯನಗರ, ಚಿತ್ರದುರ್ಗ, ದಾವಣಗೆರೆ ಮತ್ತು ತುಮಕೂರು ಸೇರಿ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಬಿಸಿಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ರವಿವಾರ ರಾಜ್ಯದಲ್ಲಿ ಅತಿ ಹೆಚ್ಚು ತಾಪಮಾನ ಯಾದಗಿರಿ ಜಿಲ್ಲೆಯಲ್ಲಿ 44.6 ಡಿಗ್ರಿ ದಾಖಲಾಗಿದೆ ಉಳಿದಂತೆ ಕಲಬುರಗಿ ಜಿಲ್ಲೆಯಲ್ಲಿ 43.1 ಡಿ.ಸೆ. ಉಷ್ಣಾಂಶ ದಾಖಲಾಗಿದೆ ಎಂದು ಮಾಹಿತಿ ನೀಡಿದೆ. ಏನಾದರೂ ಅನಾಹುತವಾದರೆ 155214 ಸಹಾಯವಾಣಿಗೆ ಕರೆ ಮಾಡಬಹುದು ಎಂದು ಹವಾಮಾನ ಇಲಾಖೆಯ ವಿಜ್ಞಾನಿ ಎ ಪ್ರಸಾದ್ ಹೇಳಿದ್ದಾರೆ.

ರಾಜ್ಯದಲ್ಲಿ ತಾಪಮಾನ ಅಧಿಕವಾಗುತ್ತಿದ್ದು, ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇದೆ. ಹಾಗಾಗಿ, ನಿರ್ಮಾಣ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರು ಅಗತ್ಯ ಎಚ್ಚರಿಕೆ ತೆಗೆದುಕೊಳ್ಳುವಂತೆ ಕಾರ್ಮಿಕ ಇಲಾಖೆ ಸಲಹೆ ಕೊಟ್ಟಿದೆ. ಯೆಥೇಚ್ಛವಾಗಿ ನೀರು ಕುಡಿಯಬೇಕು, ಕೆಲಸದ ಸ್ಥಳಗಳಲ್ಲಿ ಸಾಧ್ಯವಾದಷ್ಟೂ ನೆರಳಿನ ವ್ಯವಸ್ಥೆ ಮಾಡಿಕೊಳ್ಳಬೇಕು, ಬಿಸಿಲಿನಲ್ಲಿ ಕೆಲಸ ಮಾಡುವುದನ್ನು ತಪ್ಪಿಸಬೇಕು, ದೇಹದಲ್ಲಿ ನೀರಿನ ಅಂಶ ಕಡಿಮೆಯಾಗದಂತೆ ಎಚ್ಚರ ವಹಿಸಬೇಕು, ಸಮಯಕ್ಕೆ ಸರಿಯಾಗಿ ಆರೋಗ್ಯಕರ ಆಹಾರ ಸೇವಿಸಬೇಕು.

ಮಧ್ಯಾಹ್ನ 12ರಿಂದ ಮಧ್ಯಾಹ್ನ 3 ಗಂಟೆಯ ವರೆಗೆ ಬಿಸಿಲಿನಲ್ಲಿ ಓಡಾಡಬಾರದು, ಸಾಕಷ್ಟು ನೀರು ಕುಡಿಯಬೇಕು, ಹತ್ತಿ ಬಟ್ಟೆ ಧರಿಸಬೇಕು, ಬಿಸಿಲಿನಲ್ಲಿ ಓಡಾಡುವಾಗ ಛತ್ರಿ, ಕನ್ನಡಕ, ಟೋಪಿ, ಶೂ,ಚಪ್ಪಲಿ ಧರಿಸಬೇಕು, ಮದ್ಯಪಾನ ತ್ಯಜಿಸಿ ದ್ರವರೂಪದ ಪಾನೀಯ ಸೇವಿಸಬೇಕು. ಅಧಿಕ ಪೋಷಕಾಂಶ ಆಹಾರ ತಿನ್ನಬಾರದು. ವಾಹನ ನಿಲುಗಡೆ ಸ್ಥಳಗಳಲ್ಲಿ ಮಕ್ಕಳು, ಸಾಕು ಪ್ರಾಣಿಗಳನ್ನು ಬಿಡಬಾರದು ಎಂದು ಸಲಹೆ ನೀಡಿದೆ.

ಇದೇ ಮೊದಲ ಬಾರಿಗೆ ರಾಜಧಾನಿಯಲ್ಲಿ ಅಧಿಕ ಉಷ್ಣಾಂಶ ದಾಖಲಾಗುತ್ತಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರವಿವಾರ 37.8 ಡಿ. ಸೆ. ಉಷ್ಣಾಂಶ ವರದಿಯಾಗಿದೆ. 30 ವರ್ಷ ಬಳಿಕ ದಾಖಲೆ ಉಷ್ಣಾಂಶ ಕಂಡುಬರುತ್ತಿದೆ. 1996ರ ಮಾ.29ರಂದು 37.3 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News