ಉದ್ಯಮ ಬೆಳವಣಿಗೆಗೆ ವಿಶಿಷ್ಟ ಮಾದರಿಯ ಹೊಸ ಸಂಸ್ಥೆ ರಚನೆ: ಸಚಿವ ಎಂ.ಬಿ.ಪಾಟೀಲ್

Update: 2024-02-05 14:51 GMT

ಬೆಂಗಳೂರು: ರಾಜ್ಯದ ಕೈಗಾರಿಕಾ ವಲಯಕ್ಕೆ ನಿರಂತರವಾಗಿ ಬಂಡವಾಳ ಆಕರ್ಷಿಸಲು ಮತ್ತು ಈಗಾಗಲೇ ನಮ್ಮಲ್ಲಿ ನೆಲೆಯೂರಿರುವ ಉದ್ಯಮಗಳಿಂದ ಮರುಹೂಡಿಕೆ ಉತ್ತೇಜಿಸಲು ಪೂರ್ಣ ಪ್ರಮಾಣದ ಹೊಸ ಸಂಸ್ಥೆಯನ್ನು ರಚಿಸುವ ಸಂಬಂಧ ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಸಮಾಲೋಚನೆ ಆರಂಭಿಸಿದ್ದಾರೆ.

ಸೋಮವಾರ ನಗರದಲ್ಲಿ ರಾಜನೀತಿ ಸಂಸ್ಥೆ ಮತ್ತು ಬೋಸ್ಟನ್ ಕನ್ಸಲ್ಟೆನ್ಸಿ ಗ್ರೂಪ್ ತಯಾರಿಸಿರುವ ಪ್ರಾತ್ಯಕ್ಷಿಕೆಗಳನ್ನು ವೀಕ್ಷಿಸಿದರು. 

ʼಔದ್ಯಮಿಕ ಬೆಳವಣಿಗೆ ಸಾಧಿಸುವುದು ಮತ್ತು ನಿರಂತರ ಹೂಡಿಕೆ ಸೆಳೆಯುವ ನಿಟ್ಟಿನಲ್ಲಿ ಸಿಂಗಪುರ, ತೈವಾನ್, ವಿಯಟ್ನಾಂ, ಚಿಲಿ ಮತ್ತು ದಕ್ಷಿಣ ಕೊರಿಯಾ ಸೇರಿದಂತೆ ಹಲವು ದೇಶಗಳ ಮಾದರಿಗಳನ್ನು ಕೂಲಂಕಷವಾಗಿ ಅಧ್ಯಯನ ಮಾಡಲಾಗಿದೆ. ಚಿಲಿ ದೇಶವು ಅಳವಡಿಸಿಕೊಂಡಿರುವ `ಇನ್ವೆಸ್ಟ್ ಚಿಲಿ’ ಉಪಕ್ರಮವು ಜಗತ್ತಿನಲ್ಲೇ ಅಗ್ರಸ್ಥಾನದಲ್ಲಿದ್ದು, ಆಸಕ್ತಿದಾಯಕವಾಗಿದೆʼ ಎಂದು ಅವರು ಮಾಹಿತಿ ನೀಡಿದರು.

ರಾಜ್ಯವು ಬಂಡವಾಳ ಆಕರ್ಷಣೆಯಲ್ಲಿ ಮುಂಚೂಣಿಯಲ್ಲಿರುವುದು ನಿಜ. ಆದರೆ, ನಮ್ಮಲ್ಲಿ ನೆಲೆಯೂರಿರುವ ಕಂಪೆನಿಗಳಿಂದ ಹೆಚ್ಚಿನ ಪ್ರಮಾಣದ ಮರುಹೂಡಿಕೆ ಮಾಡುವ ಹಾಗೆ ಮಾಡಬೇಕು. ಹಾಗೆಯೇ ಹೊಸ ಹೊಸ ಹೂಡಿಕೆಗೆ ಹೆಚ್ಚು ಗಮನ ನೀಡುವ ಉದ್ದೇಶದಿಂದ ಐಎಎಸ್ ಅಧಿಕಾರಿಯೊಬ್ಬರನ್ನು ಉದ್ದೇಶಿತ ಸಂಸ್ಥೆಗೆ ಸಿಇಒ ಆಗಿ ನೇಮಕ ಮಾಡಿ, ಖಾಸಗಿ ಉದ್ಯಮಗಳ ದಿಗ್ಗಜರನ್ನೂ ಪೂರ್ಣಕಾಲಿಕವಾಗಿ ಗುತ್ತಿಗೆ ಆಧಾರದಲ್ಲಿ ನೇಮಿಸಿಕೊಳ್ಳಲಾಗುವುದು. ಒಟ್ಟಿನಲ್ಲಿ ಇದು ಜಾಗತಿಕ ಗುಣಮಟ್ಟದ ಸಂಸ್ಥೆಯಂತೆ ಕಾರ್ಯ ನಿರ್ವಹಿಸಲಿದೆ ಎಂದು ಅವರು ವಿವರಿಸಿದರು.

ಮಾರುಕಟ್ಟೆ ವಿಸ್ತರಣೆ, ಉದ್ಯಮಿಗಳ ನಾಡಿಮಿಡಿತ ಅರಿಯುವಿಕೆ, ವಿಶ್ಲೇಷಣೆ, ರಚನಾತ್ಮಕ ಕಾರ್ಯತಂತ್ರ, ಸ್ಪರ್ಧಾತ್ಮಕತೆಯನ್ನು ಎದುರಿಸುವುದು, ಉತ್ಕೃಷ್ಟತೆಯನ್ನು ಕಾಪಾಡಿಕೊಳ್ಳುವುದು, ಅನುಮೋದನೆ ನೀಡಲಾದ ಯೋಜನೆಗಳ ಅನುಸರಣೆ, ಹೊಸಹೊಸ ಉದ್ಯಮಗಳ ಆಗಮನ, ಏಕಗವಾಕ್ಷಿ ಯೋಜನೆಯ ಜಾರಿ, ಸುಗಮ ವಹಿವಾಟಿನ ವಾತಾವರಣ ಇವೆಲ್ಲವನ್ನೂ ಸಾಧಿಸಿದರೆ ಮಾತ್ರ ಕೈಗಾರಿಕಾ ಬೆಳವಣಿಗೆಯ ಕನಸು ನನಸಾಗಲಿದೆ. ಉದ್ದೇಶಿತ ಸಂಸ್ಥೆಯ ಭಾಗವಾಗಲಿರುವ ಉದ್ಯಮಿಗಳು ಸಕ್ರಿಯವಾಗಿ ಇದನ್ನೆಲ್ಲ ಸಾಧಿಸಲಿದ್ದಾರೆ ಎಂದು ಅವರು ನುಡಿದರು.

ಉದ್ಯಮಗಳ ಬೆಳವಣಿಗೆಗೆ ಅಧಿಕಾರಿಗಳು, ಆಯುಕ್ತರು, ಕಾರ್ಯದರ್ಶಿಗಳು, ಸಚಿವರು ಮತ್ತು ಸಿಎಂ ಹಂತಗಳಲ್ಲಿ ದಕ್ಷ ಸಮಿತಿಗಳನ್ನು ರಚಿಸಬೇಕಾಗಿದೆ. ಪ್ರತಿ ತಿಂಗಳು ಇವುಗಳ ಸಭೆ ನಡೆಯುವ ಹಾಗೆ ಮಾಡಬೇಕು. ಉದ್ಯಮಿಗಳ ಕುಂದುಕೊರತೆ ಆಲಿಸಿ, ಅವುಗಳನ್ನು ಕ್ಷಿಪ್ರಗತಿಯಲ್ಲಿ ಬಗೆಹರಿಸುವ ಹಾಗೆ ಮಾಡಲಾಗುವುದು. ಈ ಕೆಲಸ ಮಾಡಲು ವಿಶಿಷ್ಟವಾದ ಒಂದು ಸಾಂಸ್ಥಿಕ ವ್ಯವಸ್ಥೆಯ ಅಗತ್ಯವಿದೆ ಎಂದು ಪಾಟೀಲ್ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News