ಸಚಿವೆ ವಿರುದ್ದ ಮಾನಹಾನಿ ಹೇಳಿಕೆ ಪ್ರಕರಣ: ತಕ್ಷಣವೇ ಸಿ.ಟಿ.ರವಿ ಬಿಡುಗಡೆಗೆ ಹೈಕೋರ್ಟ್ ಮಧ್ಯಂತರ ಆದೇಶ
ಬೆಂಗಳೂರು: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕುರಿತು ಮಾನಹಾನಿ ಹೇಳಿಕೆ ಆರೋಪ ಪ್ರಕರಣ ಸಂಬಂಧ ಶನಿವಾರ ದಿನವಿಡೀ ನಡೆದ ಕ್ಷಿಪ್ರ ಬೆಳವಣಿಗೆಯಲ್ಲಿ ವಿಧಾನ ಪರಿಷತ್ತಿನ ಬಿಜೆಪಿ ಸದಸ್ಯ ಸಿ.ಟಿ.ರವಿ ಅವರಿಗೆ ತಕ್ಷಣ ಬಿಡುಗಡೆಗೆ ಹೈಕೋರ್ಟ್ ಮಧ್ಯಂತರ ಆದೇಶ ನೀಡಿತು. ಇನ್ನೊಂದೆಡೆ, ಇದೇ ವಿಚಾರವಾಗಿ ರಾಜ್ಯದ ವಿವಿಧೆಡೆ ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರು ಬೀದಿಗಿಳಿದು ಪ್ರತಿಭಟಿಸಿದರು.
ಗುರುವಾರ ಬೆಳಗಾವಿಯ ಹಿರೇಬಾಗೇವಾಡಿ ಠಾಣಾ ಪೊಲೀಸರು ತನ್ನನ್ನು ಅಕ್ರಮವಾಗಿ ಬಂಧಿಸಿ, ಕಾನೂನುಬಾಹಿರವಾಗಿ ವರ್ತನೆ ಮಾಡಿದ್ದು, ತಮ್ಮನ್ನು ಬಿಡುಗಡೆಗೊಳಿಸುವಂತೆ ಕೋರಿ ಸಿ.ಟಿ.ರವಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ.ಜಿ.ಉಮಾ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ ವಾದ, ಪ್ರತಿವಾದ ಆಲಿಸಿದ ನ್ಯಾಯಾಲಯ, ಸಿಆರ್‍ಪಿಸಿ ಸೆಕ್ಷನ್ 41ಎ (ಪೆÇಲೀಸ್ ನೋಟಿಸ್ ನೀಡುವುದು) ಅಡಿ ಪೊಲೀಸರು ಪ್ರಕ್ರಿಯೆ ಪಾಲಿಸಬೇಕಿತ್ತು. ರವಿ ಅವರು ವಿಧಾನ ಪರಿಷತ್ ಸದಸ್ಯರಾಗಿದ್ದು, ತನಿಖೆಗೆ ಲಭ್ಯವಾಗುವುದಿಲ್ಲ ಎಂಬ ಪರಿಸ್ಥಿತಿ ಇಲ್ಲ. ರವಿ ಅವರು ತಕ್ಷಣ ಬಿಡುಗಡೆ ಸಂಬಂಧಿತ ಮಧ್ಯಂತರ ಕೋರಿಕೆಗೆ ಅರ್ಹರಾಗಿದ್ದಾರೆ. ಹೀಗಾಗಿ, ಅವರನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಆದೇಶಿಸಿತು.
ಅದೇ ರೀತಿ, ಕರ್ನಾಟಕ ಹೈಕೋರ್ಟ್ ಮಧ್ಯಂತರ ಆದೇಶ ಮಾಡಿದ್ದು, ತನಿಖಾಧಿಕಾರಿ ಸೂಚಿಸಿದಾಗ ರವಿ ತನಿಖೆಗೆ ಹಾಜರಾಗಬೇಕು ಎಂಬ ಷರತ್ತನ್ನು ನ್ಯಾಯಾಲಯ ವಿಧಿಸಿತು. ಇದಕ್ಕೂ ಮೊದಲು ರವಿ ಪರ ವಕೀಲರು, ರವಿ ಅವರನ್ನು ಬೆಳಗಾವಿ ಪೊಲೀಸರು ಅಕ್ರಮವಾಗಿ ಬಂಧಿಸಿದ್ದಾರೆ. ಪೊಲೀಸ್ ನೋಟಿಸ್ ನೀಡುವುದು ಅಥವಾ ಅವರ ಬಂಧನಕ್ಕೆ ಆಧಾರ ಒದಗಿಸಿಲ್ಲ. ಇದು ಸುಪ್ರೀಂ ಕೋರ್ಟ್ ತೀರ್ಪುಗಳಿಗೆ ವಿರುದ್ಧವಾಗಿದೆ ಎಂದರು.
ರಾಜ್ಯ ಸರಕಾರದ ಪರವಾಗಿ ಹಾಜರಾಗಿದ್ದ ವಿಶೇಷ ಸರಕಾರಿ ಅಭಿಯೋಜಕ-1 ಎಸ್.ಎ. ಬೆಳ್ಳಿಯಪ್ಪ, ಜಾಮೀನು ಕೋರಿ ರವಿ ಅವರು ವಿಶೇಷ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ಇಲ್ಲಿ ನ್ಯಾಯಾಲಯ ಹಸ್ತಕ್ಷೇಪ ಮಾಡಬಾರದು. ಬಂಧನ ಅಕ್ರಮ ಎನ್ನುವುದಾದರೆ ಅವರು ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಲಿ. ಪೊಲೀಸರ ಜೊತೆ ರವಿ ಅವರು ಅಸಭ್ಯವಾಗಿ ನಡೆದುಕೊಂಡಿದ್ದಾರೆ ಎಂದು ಆಕ್ಷೇಪಿಸಿದರು.
ಈ ಮಧ್ಯೆ ಪೀಠವು, ರವಿ ಅವರನ್ನು ವಶಕ್ಕೆ ಪಡೆದಿರುವ ರೀತಿಯ ಬಗ್ಗೆ ಏನು ಹೇಳುತ್ತೀರಿ? ಗಂಭೀರ ಅಪರಾಧ ಪ್ರಕರಣಗಳಲ್ಲೂ ಪೊಲೀಸರು ವರ್ಷಗಟ್ಟಲೆ ಬಂಧಿಸುವುದಿಲ್ಲ. ವ್ಯಕ್ತಿಯ ಸ್ವಾತಂತ್ರ್ಯ ಹರಣವಾದಾಗ ಅದನ್ನು ರಕ್ಷಿಸುವುದು ಹೈಕೋರ್ಟ್ ಕರ್ತವ್ಯ ಎಂದು ಪೀಠವು ಮೌಖಿಕವಾಗಿ ಹೇಳಿ, ವಿಚಾರಣೆ ಮುಂದೂಡಿತು.
ಅದೇ ರೀತಿ, ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯದಲ್ಲೂ ಪ್ರಕರಣದ ವಿಚಾರಣೆ ನಡೆಯಿತು. ರವಿ ಪರ ವಾದ ಮಂಡಿಸಿದ ಹಿರಿಯ ವಕೀಲ ಅಶೋಕ್ ಹಾರನಹಳ್ಳಿ, ಬಂಧನದ ಕಾರಣದ ಕುರಿತು ಕಕ್ಷಿದಾರರಿಗೆ, ಕುಟುಂಬ ಸದಸ್ಯರಿಗೆ ಯಾವುದೇ ಮಾಹಿತಿ ನೀಡಿಲ್ಲ. ಅಲ್ಲದೇ ದೂರುದಾರರು ಓರ್ವ ಸಚಿವೆಯಾಗಿದ್ದಾರೆ, ಅವರಿಗೆ ಬೆದರಿಕೆ ಹಾಕಲು ಸಾಧ್ಯವೇ? ಎಂದರು.
ಇದಕ್ಕೆ ಪ್ರತಿಯಾಗಿ ಸಚಿವೆ ಪರ ವಾದ ಮಂಡಿಸಿದ ಹಿರಿಯ ವಕೀಲ ಎಂ.ಎಸ್.ಶ್ಯಾಮ್ ಸುಂದರ್, ಆರೋಪಿ ಅಸಾಂವಿಧಾನಿಕ ಪದ ಬಳಕೆ ಮಾಡಿ ಸುಮಾರು ಬಾರಿ ದೂರುದಾರರನ್ನು ಕರೆದಿದ್ದಾರೆ. ಓರ್ವ ಶಾಸಕ ಮಹಿಳೆಯನ್ನು ಹಾಗೆ ಕರೆದಿದ್ದಾರೆ ಎಂದು ಸೀತಾ ಸೊರೇನ್ ಪ್ರಕರಣ ಉಲ್ಲೇಖಿಸಿದರು.
ವಾದ-ಪ್ರತಿವಾದ ಆಲಿಸಿದ ಜನಪ್ರತಿನಿಧಿಗಳ ನ್ಯಾಯಾಲಯ ಮಧ್ಯಂತರ ಜಾಮೀನು ಅರ್ಜಿಯ ವಿಚಾರಣೆಯನ್ನು ಶನಿವಾರಕ್ಕೆ ಮುಂದೂಡಿತು.