ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ದೇಶದ ಅತ್ಯಂತ ಶ್ರೀಮಂತ ಶಾಸಕ: ಎಡಿಆರ್ ವರದಿ
ಬೆಂಗಳೂರು: ಕರ್ನಾಟಕದ ಉಪಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ತಮ್ಮ ರೂ. 1,413 ಕೋಟಿ ಮೌಲ್ಯದ ಸಂಪತ್ತಿನೊಂದಿಗೆ ದೇಶದ ಅತ್ಯಂತ ಶ್ರೀಮಂತ ಶಾಸಕರಾಗಿದ್ದಾರೆ ಎಂದು ಅಸೋಸಿಯೇಶನ್ ಫಾರ್ ಡೆಮಾಕ್ರೆಟಿಕ್ ರಿಫಾರ್ಮ್ಸ್ ಮತ್ತು ನ್ಯಾಷನಲ್ ಇಲೆಕ್ಷನ್ ವಾಚ್ ವರದಿ ತಿಳಿಸಿದೆ.
ಅಷ್ಟೇ ಅಲ್ಲ, ದೇಶದ ಅತ್ಯಂತ ಶ್ರೀಮಂತ 20 ಶಾಸಕರ ಪಟ್ಟಿಯಲ್ಲಿ 12 ಮಂದಿ ಶಾಸಕರು ಕರ್ನಾಟಕದವರಾಗಿದ್ದಾರೆ. ಕರ್ನಾಟಕದ ಶೇ. 14ರಷ್ಟು ಶಾಸಕರು ರೂ. 100 ಕೋಟಿ ಆಸ್ತಿಯ ಒಡೆಯರಾಗಿದ್ದಾರೆ ಹಾಗೂ ರಾಜ್ಯದ ಶಾಸಕರ ಸರಾಸರಿ ಸಂಪತ್ತಿನ ಮೌಲ್ಯ ರೂ. 64.3 ಕೋಟಿ ಎಂದು ವರದಿ ಹೇಳಿದೆ.
ಶ್ರೀಮಂತ ಶಾಸಕರ ಪಟ್ಟಿಯಲ್ಲಿ ಡಿ.ಕೆ. ಶಿವಕುಮಾರ್ ಆಗ್ರಸ್ಥಾನದಲ್ಲಿದ್ದರೆ ಗೌರಿಬಿದನೂರಿನ ಶಾಸಕ ಕೆ ಎಚ್ ಪುಟ್ಟಸ್ವಾಮಿ ಗೌಡ ತಮ್ಮ ರೂ. 1,267 ಕೋಟಿ ಮೌಲ್ಯದ ಆಸ್ತಿಯೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.
ಮೂರನೇ ಸ್ಥಾನ ಕಾಂಗ್ರೆಸ್ ಶಾಸಕ ಪ್ರಿಯಕೃಷ್ಣ ಅವರಿಗೆ ಹೋಗಿದೆ. 39 ವರ್ಷದ ಇವರ ಘೋಷಿತ ಸಂಪತ್ತಿನ ಮೌಲ್ಯ ರೂ. 1,156 ಕೋಟಿ ಆಗಿದೆ.
ದೇಶದ ಅತ್ಯಂತ ಬಡ ಶಾಸಕ ಪಶ್ಚಿಮ ಬಂಗಾಳದ ಇಂಡಸ್ ಕ್ಷೇತ್ರವನ್ನು ಪ್ರತಿನಿಧಿಸುವ ನಿರ್ಮಲ್ ಕುಮಾರ್ ಧಾರಾ ಅವರಾಗಿದ್ದಾರೆ. ಅವರ ಸಂಪತ್ತಿನ ಮೌಲ್ಯ ಕೇವಲ ರೂ. 1700.
ಕರ್ನಾಟಕದ ಅತ್ಯಂತ ಕಡಿಮೆ ಸಂಪತ್ತು ಹೊಂದಿರುವ ಶಾಸಕಿ ಸುಳ್ಯ ಕ್ಷೇತ್ರವನ್ನು ಪ್ರತಿನಿಧಿಸುವ ಬಿಜೆಪಿಯ ಭಾಗೀರಥಿ ಮುರುಳ್ಯ ಅವರಾಗಿದ್ದಾರೆ. ಅವರ ಘೋಷಿತ ಸಂಪತ್ತಿನ ಮೌಲ್ಯ ರೂ. 28 ಲಕ್ಷ ಆಗಿದೆ.
ಗಣಿ ದೊರೆ ಜನಾರ್ದನ ರೆಡ್ಡಿ ಶ್ರೀಮಂತ ಶಾಸಕರ ಪಟ್ಟಿಯಲ್ಲಿ 23ನೇ ಸ್ಥಾನದಲ್ಲಿದ್ದಾರೆ.
ಅಗ್ರ 20 ಶ್ರೀಮಂತ ಶಾಸಕರ ಪಟ್ಟಿಯಲ್ಲಿರುವ ಇತರ ಕರ್ನಾಟಕದ ಶಾಸಕರೆಂದರೆ ಕಾಂಗ್ರೆಸ್‌ನ ಬಿ ಎಸ್ ಸುರೇಶ್ (ರೂ. 648 ಕೋಟಿ), ಕಾಂಗ್ರೆಸ್‌ನ ಎನ್ ಎ ಹಾರಿಸ್ (ರೂ. 439 ಕೋಟಿ), ಬಿಜೆಪಿಯ ಎಚ್ ಕೆ ಸುರೇಶ್ (ರೂ. 435 ಕೋಟಿ), ಕಾಂಗ್ರೆಸ್‌ನ ಆರ್ ವಿ ದೇಶಪಾಂಡೆ (ರೂ 363 ಕೋಟಿ), ಜೆಡಿಎಸ್‌ನ ಎಂ ಆರ್ ಮಂಜುನಾಥ್ (ರೂ 316 ಕೋಟಿ), ಕಾಂಗ್ರೆಸ್‌ನ ಎಸ್ ಎನ್ ಸುಬ್ಬಾರೆಡ್ಡಿ (ರೂ 313 ಕೋಟಿ), ಕಾಂಗ್ರೆಸ್‌ನ ಶಾಮನೂರು ಶಿವಶಂಕರಪ್ಪ (ರೂ 312 ಕೋಟಿ), ಕಾಂಗ್ರೆಸ್‌ನ ಎಂ ಕೃಷ್ಣಪ್ಪ (ರೂ 296 ಕೋಟಿ) ಮತ್ತು ಬಿಜೆಪಿಯ ಮುನಿರತ್ನ (ರೂ. 293 ಕೋಟಿ).