ದಾವಣಗೆರೆ | ಕಲ್ಯಾಣ ಮಂಟಪದಲ್ಲಿ ಕಾರ್ಮಿಕನಿಂದ ಒಳಚರಂಡಿ ಸ್ವಚ್ಛತೆ: ಪ್ರಕರಣ ದಾಖಲು
ದಾವಣಗೆರೆ, ಜ.7: ನಗರದ ಕಲ್ಯಾಣ ಮಂಟಪವೊಂದರಲ್ಲಿ ಕೂಲಿ ಕಾರ್ಮಿಕರೊಬ್ಬರನ್ನು ಒಳಚರಂಡಿ ಸ್ವಚ್ಛಗೊಳಿಸಲು ಚರಂಡಿಗೆ ಇಳಿಸಿದ ಪ್ರಕರಣಕ್ಕೆ ಸಂಬಂಧಿಸಿ ಇಲ್ಲಿನ ಬಡಾವಣೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಕೂಲಿ ಕಾರ್ಮಿಕ ಸಿದ್ದೇಶ ಅವರನ್ನು ಶ್ರೀಮತಿ ರಾಜನಹಳ್ಳಿ ಜಾನಬಾಯಿ, ರಾಜನಹಳ್ಳಿ ಶ್ರೀನಿವಾಸಮೂರ್ತಿ ಧರ್ಮಶಾಲಾ ಕಲ್ಯಾಣ ಮಂಟಪದ ಒಳಚರಂಡಿಗೆ ಇಳಿಸಿ ಸ್ವಚ್ಛತೆ ಮಾಡಿಸಿದ್ದು ಪರಿಶೀಲನೆ ವೇಳೆ ಸಾಬೀತಾಗಿದೆ. ಆದ್ದರಿಂದ ಸಂಬಂಧಪಟ್ಟ ಕಲ್ಯಾಣ ಮಂಟಪದ ಮಾಲಕರು, ಮೇಲ್ವಿಚಾರಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮಹಾನಗರ ಪಾಲಿಕೆಯ ಸಹಾಯಕ ಎಂಜಿನಿಯರ್ (ಯುಜಿಡಿ) ಪಿ.ಮಧುಸೂಧನ್ ಬಡಾವಣೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಒಳಚರಂಡಿ ವ್ಯವಸ್ಥೆಯ ದುರವಸ್ಥೆ ಬಗ್ಗೆ ಪಾಲಿಕೆಗೆ ದೂರು ಸಲ್ಲಿಸದೆ ಕಾರ್ಮಿಕನಿಂದ ಸ್ವಚ್ಛ ಮಾಡಿಸಲಾಗಿದೆ. ಈ ಸಂಬಂಧ ಮಾಲಕರು, ಮೇಲ್ವಿಚಾರಕರು ಹಾಗೂ ಇತರರ ವಿರುದ್ಧ ಮ್ಯಾನ್ಯುಯಲ್ ಸ್ಕ್ಯಾವೆಂಜರ್ ನೇಮಕಾತಿ ನಿಷೇಧ ಮತ್ತು ಪುನರ್ವಸತಿ ಅಧಿನಿಯಮ– 2013 ಕಾಯ್ದೆ ಹಾಗೂ ಸೆಕ್ಷನ್– 20ರ ಅಡಿ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಒತ್ತಾಯಿಸಲಾಗಿದೆ.
ಕಿರಿಯ ಆರೋಗ್ಯ ನಿರೀಕ್ಷಕ ನಿಖಿಲ್ ಅವರೊಂದಿಗೆ ಕಲ್ಯಾಣ ಮಂಟಕ್ಕೆ ಭೇಟಿ ನೀಡಿದಾಗ ಒಳಚರಂಡಿ ಛೇಂಬರ್ ತೆರೆದಿತ್ತು. ಈ ಸಂಬಂಧ ಕಲ್ಯಾಣ ಮಂಟಪದ ಸುಪರ್ ವೈಸರ್ ಮುಪ್ಪಯ್ಯರನ್ನು ವಿಚಾರಿಸಿದಾಗ, ಕಾರ್ಮಿಕ ಸಿದ್ದೇಶ ಅವರಿಂದ ಒಳಚರಂಡಿ ಸ್ವಚ್ಛಗೊಳಿಸಿರುವುದಾಗಿ ಹೇಳಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.