ಭ್ರಷ್ಟಾಚಾರಿಗಳನೆಲ್ಲಾ ಶುದ್ಧಹಸ್ತ ಮಾಡುವ ಅದ್ಯಾವ ಮಾಂತ್ರಿಕ ಪೆಟ್ಟಿಗೆ ನಿಮ್ಮ ಬಳಿ ಇದೆ : ದಿನೇಶ್ ಗುಂಡೂರಾವ್

Update: 2024-03-26 12:34 GMT

ಬೆಂಗಳೂರು: ‘ಭ್ರಷ್ಟಾಚಾರಿಗಳನೆಲ್ಲಾ ಶುದ್ಧಹಸ್ತ ಮಾಡುವ ಅದ್ಯಾವ ಮಾಂತ್ರಿಕ ಪೆಟ್ಟಿಗೆ ನಿಮ್ಮ ಬಳಿ ಇದೆ ಮೋದಿಯವರೆ?, ಉತ್ತರಿಸುವಿರಾ ಅಥವಾ ಉತ್ತರ ಕೊಡಿಸುವಿರಾ?’ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಇಂದಿಲ್ಲಿ ವಾಗ್ದಾಳಿ ನಡೆಸಿದ್ದಾರೆ.

ಮಂಗಳವಾರ ಎಕ್ಸ್‌ ನಲ್ಲಿ ಸರಣಿ ಪೋಸ್ಟ್ ಹಾಕಿರುವ ಅವರು, ‘ಮೋದಿಯವರೆ, ಅಜಿತ್ ಪವಾರ್, ಮುಕುಲ್ ರಾಯ್, ನವೀನ್ ಜಿಂದಾಲ್, ತಪಸ್ ರಾಯ್, ಪೆಮಾ ಖಂಡ್ ಇವರ ಮೇಲೆಲ್ಲಾ ಭ್ರಷ್ಟಾಚಾರದ ಆರೋಪವಿದೆ. ಇವರೆಲ್ಲಾ ಈಗ ನಿಮ್ಮ ಸಖ್ಯ ಬೆಳೆಸಿದ್ದಾರೆ. ಇಲ್ಲಿ ಕೆಲವರಿಗೆ ಉನ್ನತ ಹುದ್ದೆ ಸಿಕ್ಕಿದೆ ಹಾಗೂ ಎಲ್ಲರಿಗೂ ತನಿಖೆಯಿಂದ ಮುಕ್ತಿ ಸಿಕ್ಕಿದೆ. ನಿಮ್ಮ ಪಕ್ಷದ ಸಖ್ಯ ಬೆಳೆಸುವ ಮೊದಲು ಇವರೆನ್ನೆಲ್ಲಾ ಬಂಧಿಸಿ ಜೈಲಿಗಟ್ಟಲು ಗೆಜ್ಜೆ ಕಟ್ಟಿ ಕುಣಿಯುತ್ತಿದ್ದ ಸಿಬಿಐ, ಐಟಿ ಮತ್ತು ಇಡಿ ಈಗ ಶೋಚನೀಯವಾಗಿ ಸೋತು ತಣ್ಣಗೆ ಮಲಗಿವೆ’ ಎಂದು ಲೇವಡಿ ಮಾಡಿದ್ದಾರೆ.

‘ಮೋದಿಯವರೆ, ಭ್ರಷ್ಟಾಚಾರದ ಆರೋಪ ಹೊತ್ತಿದ್ದ ಮಹಾರಾಷ್ಟ್ರದ ನಾರಾಯಣ ರಾಣೆಯವರನ್ನು ಇಡಿ ಬಂಧಿಸುವ ಹಂತಕ್ಕೂ ಹೋಗಿತ್ತು. ಆದರೆ ರಾಣೆ ನಿಮ್ಮ ಪಕ್ಷ ಸೇರಿದರು ಜೊತೆಗೆ ಕೇಂದ್ರ ಮಂತ್ರಿಯೂ ಆದರು. ವಿಸ್ಮಯವೆಂದರೆ ರಾಣೆ ನಿಮ್ಮ ಪಕ್ಷ ಸೇರಿದ ತಕ್ಷಣವೇ ಈಡಿ ಅವರ ವಿರುದ್ಧದ ಕೇಸ್ ಫೈಲ್ ಮುಚ್ಚಿಟ್ಟು ತೆಪ್ಪಗಾಯಿತು.

‘ಮೋದಿಯವರೆ, ನಾರದಾ ಚಿಟ್ ಫಂಡ್ ಹಗರಣ ಸಹಿತ ಹಲವು ಹಗರಣಗಳ ಆರೋಪಿಯಾಗಿರುವ ಸುವೇಂದು ಅಧಿಕಾರಿ ಟಿಎಂಸಿ ಮುಖಂಡರಾಗಿದ್ದರು. ತನಿಖಾ ಸಂಸ್ಥೆಗಳು ಅವರ ಬೆನ್ನು ಬೀಳುತ್ತಿದ್ದಂತೆ ನಿಮ್ಮ ಪಕ್ಷ ಸೇರಿದರು ಜೊತೆಗೆ ಪಶ್ಚಿಮ ಬಂಗಾಳದ ವಿಪಕ್ಷ ನಾಯಕರಾದರು. ಏನಿದರ ರಹಸ್ಯ ಮೋದಿಯವರೆ?’ ಎಂದು ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.

‘ಮೋದಿಯವರೆ, ಶಾರದಾ ಚಿಟ್ ಫಂಡ್ ಹಗರಣ, ಲೂಯಿಸ್ ಬರ್ಗರ್ ಲಂಚ ಹಗರಣದ ಆರೋಪಿ ಹಿಮಂತ್ ಬಿಸ್ವ ಶರ್ಮಾ ನಿಮ್ಮ ಪಕ್ಷ ಸೇರಿದ ಮೇಲೆ ಅಸ್ಸಾಂ ಸಿಎಂ ಆಗಿದ್ದಾರೆ. ಹಾಗಾದರೆ ಅವರ ವಿರುದ್ದದ ಭ್ರಷ್ಟಾಚಾರದ ಆರೋಪ ಏನಾಯ್ತು?, ಮಹಾರಾಷ್ಟ್ರದ ಅಶೋಕ್ ಚೌಹಾಣ್ ವಿರುದ್ಧ ಆದರ್ಶ್ ಹೌಸಿಂಗ್ ಸೊಸೈಟಿ ಆರೋಪವಿದೆ. ಈ ಹಗರಣದ ಬಗ್ಗೆ ನಿಮ್ಮದೇ ಸರಕಾರ ಲೋಕಸಭೆಯಲ್ಲಿ ಶ್ವೇತಪತ್ರ ಹೊರಡಿಸಿತ್ತು. ಇದೀಗ ಅಶೋಕ್ ಚೌಹಾಣ್ ನಿಮ್ಮ ಪಕ್ಷ ಸೇರಿದ್ದಾರೆ. ಅದಕ್ಕೆ ಪ್ರತಿಫಲವಾಗಿ ನೀವು ಅವರಿಗೆ ರಾಜ್ಯಸಭಾ ಸದಸ್ಯತ್ವ ದಯಪಾಲಿಸಿದ್ದೀರಿ. ಏನಿದರ ಮರ್ಮ ಮೋದಿಯವರೆ?’ ಎಂದು ಅವರು ಕೇಳಿದ್ದಾರೆ.

‘ಭ್ರಷ್ಟಾಚಾರದ ವಿರುದ್ಧ ಬೊಗಳೆ ಭಾಷಣ ಬಿಗಿಯುವ ಮೋದಿಯವರಿಗೆ ಕೆಲ ಮೂಲಭೂತ ಪ್ರಶ್ನೆಗಳು. ಮೋದಿಯವರೆ, ಈ ಪ್ರಶ್ನೆಗಳಿಗೆ ನೀವಾದರೂ ಉತ್ತರಿಸಿ. ನಿಮ್ಮ ಪಕ್ಷದ ಇತರ ನಾಯಕರಿಂದಾದರೂ ಉತ್ತರ ಕೊಡಿಸಿ. ಪ್ರಧಾನಿಯವರೆ, ನೀವು ಪ್ರಾಮಾಣಿಕವಾಗಿ ಭ್ರಷ್ಟಾಚಾರದ ವಿರುದ್ಧವಾಗಿದ್ದರೆ ಇತರೆ ಪಕ್ಷದ ಭ್ರಷ್ಟಾಚಾರಿಗಳನೆಲ್ಲಾ ರತ್ನಗಂಬಳಿ ಹಾಸಿ ನಿಮ್ಮ ಪಕ್ಷಕ್ಕೇಕೆ ಸೇರಿಸಿಕೊಳ್ಳುತ್ತಿದ್ದೀರಿ?. ಆ ಭ್ರಷ್ಟಚಾರಿಗಳೆಲ್ಲಾ ನಿಮ್ಮ ಪಕ್ಷ ಸೇರಿದ ಮೇಲೆ ಅವರ ವಿರುದ್ಧದ ತನಿಖೆಗಳು ಸ್ಥಗಿತಗೊಳ್ಳುವುದ್ಯಾಕೆ?’ ಎಂದು ದಿನೇಶ್ ಗುಂಡೂರಾವ್ ಟೀಕಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News