ʼಸಿಎಸ್‍ಆರ್ ನಿಧಿಯನ್ನು ಗ್ರಾಮೀಣ ಶಾಲೆಗಳ ಗುಣಮಟ್ಟ ಹೆಚ್ಚಿಸಲು ಮೀಸಲಿಡಿʼ ಉದ್ಯಮಿಗಳಿಗೆ ಡಿಕೆಶಿ ಕರೆ

Update: 2023-11-29 13:11 GMT

ಬೆಂಗಳೂರು: ನಮ್ಮ ರಾಜ್ಯದಲ್ಲಿ ಹೊಸ ಶಿಕ್ಷಣ ವ್ಯವಸ್ಥೆಯನ್ನು ಜಾರಿಗೆ ತರಲು ಪ್ರಯತ್ನಿಸುತ್ತಿದ್ದೇವೆ. ಗ್ರಾಮೀಣ ಭಾಗದ ಶಾಲೆಗಳ ಗುಣಮಟ್ಟ ಸುಧಾರಣೆಗೆ ಸಿಎಸ್‍ಆರ್ ನಿಧಿಯನ್ನು ಮೀಸಲಿಡಿ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಉದ್ಯಮಿಗಳಿಗೆ ಕರೆ ನೀಡಿದರು.

ಬುಧಾವರ ಬೆಂಗಳೂರು ಅರಮನೆಯಲ್ಲಿ ನಡೆದ ಬೆಂಗಳೂರು ಟೆಕ್ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಗ್ರಾಮೀಣ ಭಾಗದ ಶಾಲೆಗಳ ಗುಣಮಟ್ಟ ಹೆಚ್ಚಿದರೆ ಆ ಭಾಗದ ಮಕ್ಕಳು ಕೂಡ ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸಲು ನೆರವಾಗುತ್ತದೆ ಎಂದರು.

ಈ ಬಗ್ಗೆ ವಿಪ್ರೋ ಮುಖ್ಯಸ್ಥ ಅಝೀಮ್ ಪ್ರೇಮ್ ಜಿ ಸೇರಿದಂತೆ ಹಲವರ ಜತೆ ಚರ್ಚೆ ಮಾಡಿದ್ದು, ಈಗಾಗಲೇ 2 ಸಾವಿರ ಕೋಟಿ ರೂ.ಗಳನ್ನು ಈ ಉದ್ದೇಶಕ್ಕೆ ನೀಡಲು ಅವರು ಮುಂದಾಗಿದ್ದಾರೆ. ನಾವೆಲ್ಲರೂ ಒಟ್ಟಿಗೆ ಸೇರಿ ಕೆಲಸ ಮಾಡೋಣ. ರಾಜ್ಯದಲ್ಲಿ ನೂತನ ಜೈವಿಕ ತಂತ್ರಜ್ಞಾನ ನೀತಿಯನ್ನು ರೂಪಿಸಲಾಗಿದೆ. ಆದರೂ ಉದ್ಯಮದಾರರಿಗೆ ರಾಜ್ಯ ಸರಕಾರ ಯಾವ ಸವಲತ್ತು ಹಾಗೂ ಪ್ರೋತ್ಸಾಹ ಸಿಗುತ್ತದೆ ಎಂಬುದು ಮುಖ್ಯವಾಗುತ್ತದೆ ಎಂದು ಅವರು ಹೇಳಿದರು.

ಉದ್ಯಮಿಗಳು, ಬಂಡವಾಳ ಹೂಡಿಕೆದಾರರು ಬಲಿಷ್ಠವಾದರೆ, ಸರಕಾರ ಬಲಿಷ್ಠವಾಗುತ್ತದೆ. ನೀವು ದುರ್ಬಲರಾದರೆ ನಾವು ದುರ್ಬಲವಾಗುತ್ತೇವೆ. ನೀವು ಆರ್ಥಿಕವಾಗಿ ಸಧೃಡವಾದರೆ ರಾಜ್ಯ ಕೂಡ ಆರ್ಥಿಕವಾಗಿ ಸಧೃಡವಾಗುತ್ತದೆ ಎಂದು ನಾವು ನಂಬಿದ್ದೇವೆ ಎಂದು ಶಿವಕುಮಾರ್ ಹೇಳಿದರು.

ತಂತ್ರಜ್ಞಾನದ ಬೆಳವಣಿಗೆಯಲ್ಲಿ ಬೆಂಗಳೂರು ಜಾಗತಿಕ ಮಟ್ಟದಲ್ಲೇ ತನ್ನದೇ ಆದ ಹೆಸರು ಸಂಪಾದಿಸಿದೆ. ನಮ್ಮಲ್ಲಿ 300ಕ್ಕೂ ಹೆಚ್ಚು ಇಂಜಿನಿಯರಿಂಗ್ ಕಾಲೇಜುಗಳು ಬೆಂಗಳೂರಿನಲ್ಲಿವೆ. ಇಡೀ ರಾಜ್ಯದಲ್ಲಿ 70ಕ್ಕೂ ಹೆಚ್ಚು ಮೆಡಿಕಲ್ ಕಾಲೇಜುಗಳಿವೆ. ಈ ದೇಶದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಮಾನವಸಂಪನ್ಮೂಲ ಉತ್ಪಾದನೆ ಬೇರೆ ಯಾವುದೇ ರಾಜ್ಯಗಳಲ್ಲಿ ಆಗುತ್ತಿಲ್ಲ. ಆ ಮೂಲಕ ಇಡೀ ವಿಶ್ವಕ್ಕೆ ಶಕ್ತಿ ನೀಡುತ್ತಿದ್ದೇವೆ ಎಂದು ಅವರು ಹೇಳಿದರು.

ನಮ್ಮ ಮಕ್ಕಳು ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸುತ್ತಿದ್ದಾರೆ. ನಾವು ನಿಮ್ಮೆಲ್ಲರಿಗೂ ಎಲ್ಲ ರೀತಿಯ ಅಗತ್ಯ ಸಹಕಾರ ನೀಡುತ್ತೇವೆ. ನಮ್ಮ ರಾಜ್ಯದಲ್ಲಿ ತಾಂತ್ರಿಕ ವಿಚಾರವಾಗಿ ಕ್ಷಮತೆ ಹೊಂದಿರುವ ಮಾನವ ಸಂಪನ್ಮೂಲವಿದೆ. ನೀವು ಉದ್ಯೋಗ ಸೃಷ್ಟಿಸಿ, ತೆರಿಗೆ ಪಾವತಿಸಿ ರಾಜ್ಯಕ್ಕೆ ಶಕ್ತಿ ತುಂಬುತ್ತಿದ್ದೀರಿ. ದೇಶದ ತೆರಿಗೆ ಪಾವತಿಯಲ್ಲಿ ಕರ್ನಾಟಕ ಶೇ.37ರಷ್ಟು ಪಾಲನ್ನು ಹೊಂದಿದ್ದು, ಈ ಶಕ್ತಿಯನ್ನು ನೀವು ತುಂಬಿದ್ದೀರಿ ಎಂದು ಶಿವಕುಮಾರ್ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News