ಗ್ಯಾರಂಟಿಗಳ ಮೂಲಕ ಜನರಿಗೆ ಆರ್ಥಿಕ, ಸಾಮಾಜಿಕ ಶಕ್ತಿ: ಸಿಎಂ ಸಿದ್ದರಾಮಯ್ಯ
ಶಿವಮೊಗ್ಗ: ಬಡವರು ಹಾಗೂ ಮಧ್ಯಮ ವರ್ಗದವರಿಗೆ ಆರ್ಥಿಕವಾಗಿ, ಸಾಮಾಜಿಕವಾಗಿ ಶಕ್ತಿ ತುಂಬಿ ಮುಖ್ಯವಾಹಿನಿಗೆ ಬರುವಂತಾಗಬೇಕೆಂಬ ಉದ್ದೇಶದಿಂದ ಸಾರ್ವತ್ರಿಕ ಮೂಲ ಆದಾಯದ ತತ್ವದಂತೆ ಗ್ಯಾರಂಟಿ ಯೋಜನೆಗಳನ್ನು ಸರ್ಕಾರ ಜಾರಿ ಮಾಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಇಂದು ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 1.18 ಕೋಟಿ ಮಹಿಳಾ ಯಜಮಾನಿಗೆ ತಿಂಗಳಿಗೆ 2000 ನೀಡುತ್ತಿರುವುದು ಸತ್ಯವಲ್ಲವೇ ? ಇದುವರೆಗೆ ಯಾವುದೇ ಜಾತಿ ಧರ್ಮ ಭಾಷೆ ಬೇಧವಿಲ್ಲದೇ 130 ಕೋಟಿ ಮಹಿಳೆಯರು ಶಕ್ತಿ ಯೋಜನೆಯ ಮೂಲಕ ಉಚಿತವಾಗಿ ಪ್ರಯಾಣಿಸಿರುವುದು ಸುಳ್ಳಾಗುವುದು ಸಾಧ್ಯವೇ?. 200 ಯೂನಿಟ್ ವರೆಗೆ ಉಚಿತ ವಿದ್ಯುತ್1.51 ಕೋಟಿ ಜನರಿಗೆ ನೀಡಲಾಗುತ್ತಿದೆ. ಅನ್ನಭಾಗ್ಯ ಯೋಜನೆಯಡಿ 170 ರೂ. ಫಲಾನುಭವಿಗಳಿಗೆ ತಲುಪುತ್ತಿದೆ. ಈ ಎಲ್ಲ ಸತ್ಯಗಳನ್ನು ಪರಿಶೀಲನೆ ನಡೆಸಿ ಮಾಧ್ಯಮದವರು ಸತ್ಯವಾದುದನ್ನು ಬರೆಯಬೇಕು ಮನವಿ ಮಾಡಿದರು.
ಬಡವರಿಗೆ ಆರ್ಥಿಕ ಶಕ್ತಿ ತುಂಬಬೇಕು
ಗ್ಯಾರಂಟಿ ಯೋಜನೆಗಳಿಂದ ಒಂದು ಕುಟುಂಬಕ್ಕೆ 4 ರಿಂದ 5 ಸಾವಿರ ರೂ.ಗಳು ಸೇರುತ್ತಿದ್ದು, ವರ್ಷಕ್ಕೆ 48 ರಿಂದ 50 ಸಾವಿದ ರೂ.ಗಳು ಸೇರುತ್ತದೆ. ಇದು ಬಡಜನರಿಗೆ ಸೌಲಭ್ಯ ನೀಡುತ್ತದೆ. ಬೆಲೆಯೇರಿಕೆ, ನಿರುದ್ಯೋಗ ಹೆಚ್ಚಾಗಿದ್ದು, ಬಡವರಿಗೆ ಕೊಂಡುಕೊಳ್ಳುವ ಶಕ್ತಿಯನ್ನು ಈ ಯೋಜನೆಗಳು ಹೆಚ್ಚಿಸುತ್ತವೆ ಎಂದರು