ಜೆಡಿಎಸ್ ಕಚೇರಿ ಗೋಡೆ ಮೇಲೆ ʼವಿದ್ಯುತ್ ಕಳ್ಳ ಕುಮಾರಸ್ವಾಮಿʼ ಪೋಸ್ಟರ್: ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದೇನು?
ಬೆಂಗಳೂರು: ʼʼಜೆಡಿಎಸ್ ಕಚೇರಿ ಗೋಡೆ ಮೇಲೆ ವಿದ್ಯುತ್ ಕಳ್ಳ ಕುಮಾರಸ್ವಾಮಿ ಪೋಸ್ಟರ್‌ಗೂ ಕಾಂಗ್ರೆಸ್‌ಗೆ ಸಂಬಂಧ ಇಲ್ಲʼʼ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಸ್ಪಷ್ಟಪಡಿಸಿದ್ದಾರೆ.
ಮಂಗಳೂರಿನಲ್ಲಿ ಬುಧವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ʼʼಅಂತಹ ಕೆಲಸ ಮಾಡಲು ನಮಗೆ ಬೇರೆ ಕೆಲಸ ಇಲ್ವಾ? ನಾವು ಆಡಳಿತ ನಡೆಸುತ್ತಾ ಇದ್ದೇವೆ. ಹಾಗೆ ಮಾಡಬೇಕು ಎಂದಾದರೆ ಪೇ ಸಿಎಂ ಕ್ಯಾಂಪೇನ್ ಮಾಡಿದಂತೆ ಮಾಡುತ್ತೇವೆ. ಅದೇನು ರಾತ್ರೋ ರಾತ್ರಿ ಹಾಕಿದ್ದಾ? ಎದೆ ತಟ್ಟಿ ಮುಂದೆ ಬಂದು ಬಹಿರಂಗವಾಗಿಯೇ ಭ್ರಷ್ಟಾಚಾರ ಆರೋಪ ಮಾಡುತ್ತೇವೆ. ನಿರಾಧಾರವಾಗಿ ನಾವು ಯಾವುದನ್ನೂ ಮಾಡುವುದಿಲ್ಲʼʼ ಎಂದರು.
ʼʼಸಿಬ್ಬಂದಿಯಿಂದ ಕುಮಾರಸ್ವಾಮಿ ಮನೆಯಲ್ಲಿ ಏನು ಅಚಾತುರ್ಯ ನಡೆದಿದೆ ಎಂದು ನನಗೆ ಗೊತ್ತಿಲ್ಲ. ಕಾನೂನಾತ್ಮಕ ಕ್ರಮ ಕೈಗೊಳ್ಳಿ ಎಂದು ಅವರೇ ಹೇಳಿದ್ದಾರೆ. ಆದರೆ ಕಾಂಗ್ರೆಸ್‌ನ ಗ್ಯಾರಂಟಿಗಳ ಬಗ್ಗೆ ಕುಮಾರಸ್ವಾಮಿ ಟೀಕೆ ಮಾಡಿದ್ದರು. ಎಲ್ಲರನ್ನೂ ಕತ್ತಲಲ್ಲಿ ಇರಿಸುತ್ತೀರಿ ಎಂದು ಅವರು ಹೆಚ್ಚು ಬೆಳಕು ತಗಳೋದು ಎಷ್ಟು ಸರಿʼʼ ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.