ಮುಸ್ಲಿಂ ಸಮುದಾಯವನ್ನು ಅವಹೇಳಿಸುವಂತಹ ವಿಡಿಯೋ ಹರಿಬಿಟ್ಟ ಬಿಜೆಪಿ : ಜೆ.ಪಿ.ನಡ್ಡಾ, ಅಮಿತ್ ಮಾಳವಿಯಾ, ವಿಜಯೇಂದ್ರ ವಿರುದ್ಧ ಎಫ್​​ಐಆರ್ ದಾಖಲು

Update: 2024-05-05 14:54 GMT

ಪಿ ನಡ್ಡಾ, ಅಮಿತ್ ಮಾಳವಿಯಾ , ವಿಜಯೇಂದ್ರ 

ಬೆಂಗಳೂರು : ರಾಜ್ಯ ಬಿಜೆಪಿಯ ಅಧಿಕೃತ ಎಕ್ಸ್ ಖಾತೆಯಲ್ಲಿ ಮುಸ್ಲಿಂ ಸಮುದಾಯವನ್ನು ಅವಮಾನಿಸುವ ರೀತಿಯಲ್ಲಿ ವಿಡಿಯೋ ಪೋಸ್ಟ್ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ವಿರುದ್ಧ ಒಂದನೆ ಎಸಿಎಂಎಂ ನ್ಯಾಯಾಲಯದಲ್ಲಿ ಎಫ್‍ಐಆರ್ ದಾಖಲಾಗಿದೆ.

ಶನಿವಾರ ಸಂಜೆ ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಬಿಜೆಪಿ ನಾಯಕರ ವಿರುದ್ಧ ದೂರು ದಾಖಲಿಸಿದ್ದು, ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವ ಸಮಯದಲ್ಲೆ ಚುನಾವಣಾ ಆಯೋಗದ ನಿಯಮವನ್ನು ಉಲ್ಲಂಘಿಸಿ, ಸಮುದಾಯಗಳ ಮಧ್ಯೆ ದ್ವೇಷ ಕೆರಳಿಸುವ ರೀತಿಯಲ್ಲಿ ಪೋಸ್ಟ್ ಮಾಡಿರುವ ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಕೋರಿದ್ದಾರೆ.

ದೂರಿನಲ್ಲಿ ಏನಿದೇ?: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸೂಚನೆಯಂತೆ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ, ರಾಜ್ಯ ಬಿಜೆಪಿಯ ಅಧಿಕೃತ ಸಾಮಾಜಿಕ ಜಾಲತಾಣಕ್ಕೆ ಸೇರಿದ ‘ಎಕ್ಸ್’ ನಲ್ಲಿ ‘ಎಚ್ಚರ..ಎಚ್ಚರ..ಎಚ್ಚರ’ ಒಂದು ವಿಡಿಯೋವನ್ನು ಪೋಸ್ಟ್ ಮಾಡಿ, ಆ ವಿಡಿಯೋದಲ್ಲಿ ಎಸ್ಸಿ, ಎಸ್ಟಿ ಮತ್ತು ಓಬಿಸಿ ವರ್ಗಗಳನ್ನು ಮೊಟ್ಟೆಗಳೆಂದು ಬಿಂಬಿಸಿ, ಆ ಮೊಟ್ಟೆಗಳಿರುವ ಬ್ಯಾಸ್ಕೆಟ್‍ಗೆ ರಾಹುಲ್ ಗಾಂಧಿ ಮತ್ತು ಸಿದ್ದರಾಮಯ್ಯ ಮುಸ್ಲಿಂ ಎಂಬ ಮೊಟ್ಟೆಯನ್ನು ತಂದಿಟ್ಟಿದ್ದಾರೆ.

ಆ ಮೊಟ್ಟೆಯು ಮರಿಯಾದ ನಂತರ ಎಸ್ಸಿ, ಎಸ್ಟಿ ಮತ್ತು ಓಬಿಸಿ ವರ್ಗಗಳೆಂದು ಬಿಂಬಿಸುವ ಮೊಟ್ಟೆಯಿಂದ ಬಂದ ಮರಿಗಳಿಗೆ ಸೇರಬೇಕಾದ ಅನುದಾನವನ್ನು ಮುಸ್ಲಿಂ ಸಮುದಾಯದವೆಂದು ಬಿಂಬಿಸುವ ಮೊಟ್ಟೆಯಿಂದ ಬಂದ ಮರಿಯ ಬಾಯಿಗೆ ತಿನಿಸುವಂತೆ ಅನಿಮೇಶನ್ ಮಾಡಲಾಗಿದೆ.

ಆನಂತರ, ಮುಸ್ಲಿಂ ಸಮುದಾಯದ ಹೋಲುವ ಪಕ್ಷಿ ಎಸ್ಸಿ, ಎಸ್ಟಿ ಮತ್ತು ಓಬಿಸಿ ವರ್ಗಗಳನ್ನು ಗೂಡಿನಿಂದ ಒದ್ದು ಓಡಿಸುವಂತೆ ಸಮುದಾಯಗಳ ಮಧ್ಯೆ ದ್ವೇಷ ಕೆರಳಿಸುವ ರೀತಿಯಲ್ಲಿ ಪೋಸ್ಟ್ ಮಾಡಿದ್ದು, ಇವರುಗಳ ವಿರುದ್ಧ ಸೂಕ್ತ ಕಾನೂನು ರೀತಿ ಕ್ರಮ ಜರುಗಿಸಬೇಕೆಂದು ಆಗ್ರಹಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News