ನೂತನ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿಗೆ ಪಂಚ ಪ್ರಶ್ನೆ ಕೇಳಿದ ಜೈರಾಮ್ ರಮೇಶ್
ಬೆಂಗಳೂರು: ತುಕ್ಕು ಹಿಡಿದಿರುವ ಕೇಂದ್ರ ಸರಕಾರದ ನೂತನ ಉಕ್ಕಿನ ಸಚಿವರಿಗೆ ಐದು ಪ್ರಶ್ನೆಗಳನ್ನು ಕೇಳಲು ಬಯಸುತ್ತೇನೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ತಿಳಿಸಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ಕಳೆದ ಸರಕಾರವು ವೈಜಾಗ್ ಸ್ಟೀಲ್ ಪ್ಲಾಂಟ್ ಎಂದೇ ಖ್ಯಾತಿ ಪಡೆದಿರುವ ರಾಷ್ಟ್ರೀಯ ಇಸ್ಪತ್ ನಿಗಮ ಲಿಮಿಟೆಡ್(ಆರ್‍ಐಎನ್‍ಎಲ್) ಅನ್ನು ಪ್ರಧಾನಿಯ ಸ್ನೇಹಿತರಿಗೆ ಮಾರಾಟ ಮಾಡಲು ಪ್ರಸ್ತಾವನೆ ಸಲ್ಲಿಸಿತ್ತು. ಸುಮಾರು 1 ಲಕ್ಷ ಜನ ಜೀವನೋಪಾಯಕ್ಕೆ ಈ ಕಾರ್ಖಾನೆ ಮೇಲೆ ಅವಲಂಬಿತವಾಗಿದ್ದಾರೆ ಎಂದು ತಿಳಿಸಿದ್ದಾರೆ.
2021ರ ಜನವರಿಯಲ್ಲಿ ಆರ್ಥಿಕ ವ್ಯವಹಾರಗಳ ಮೇಲೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಆರ್‌ಐಎನ್‍ಎಲ್ ಶೇ.100ರಷ್ಟು ಖಾಸಗಿಕರಣದ ಪ್ರಸ್ತಾವನೆಗೆ ಅಂಕಿತ ನೀಡಿದ್ದು, ಕಳೆದ ಮೂರು ವರ್ಷಗಳಿಂದ ಕಾರ್ಖಾನೆಯ ಕಾರ್ಮಿಕರು ಶಾಂತಿಯುತ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.
ಕೇಂದ್ರ ಸರಕಾರದ ಉದ್ದೇಶಪೂರ್ವಕ ನಿರ್ಲಕ್ಷ್ಯದ ಪರಿಣಾಮವಾಗಿ ಈ ಕಾರ್ಖಾನೆ ನಷ್ಟ ಅನುಭವಿಸುತ್ತಿದೆ ಎಂದು ಕಾರ್ಮಿಕರು ಆರೋಪಿಸಿದ್ದಾರೆ. ಹೀಗಾಗಿ ಕುಮಾರಸ್ವಾಮಿ ಈ ವೈಜಾಗ್ ಉಕ್ಕಿನ ಕಾರ್ಖಾನೆಯನ್ನು ಪ್ರಧಾನಿಯ ಸ್ನೇಹಿತರಿಗೆ ಮಾರುವುದಿಲ್ಲ ಎಂದು ಲಿಖಿತ ಭರವಸೆ ನೀಡಬಲ್ಲರೇ? ಎಂದು ಅವರು ಪ್ರಶ್ನಿಸಿದ್ದಾರೆ.
2019ರಲ್ಲಿ ಮೋದಿ ಸರಕಾರವು ಸೇಲಂ ಉಕ್ಕಿನ ಕಾರ್ಖಾನೆಯಲ್ಲಿ ಬಂಡಾವಾಳ ಹೂಡಿಕೆ ಸ್ಥಗಿತಗೊಳಿಸಲು ತೀರ್ಮಾನಿಸಿತ್ತು. ನಂತರ 2000 ಕಾರ್ಮಿಕರು, ಕಾರ್ಮಿಕರ ಕುಟುಂಬದವರು, ಕಾರ್ಖಾನೆಗೆ ಜಾಗ ನೀಡಿದ್ದ ರೈತರು ಈ ಕಾರ್ಖಾನೆಯ ಖಾಸಗೀಕರಣ ವಿರೋಧಿಸಿ ಹೋರಾಟ ಮಾಡಿದರು. ಈ ಕಾರ್ಖಾನೆ ಸುಮಾರು 25 ಹಳ್ಳಿಗಳಷ್ಟು ವಿಸ್ತೀರ್ಣ ಹೊಂದಿದ್ದು, ಉದ್ದೇಶಪೂರ್ವಕವಾಗಿ ಈ ಕಾರ್ಖಾನೆಯನ್ನು ನಷ್ಟದಲ್ಲಿ ನಡೆಸಲಾಗುತ್ತಿದೆ ಎಂದು ಕಾರ್ಮಿಕರು ಆರೋಪಿಸಿದ್ದಾರೆ ಎಂದು ಜೈರಾಮ್ ತಿಳಿಸಿದ್ದಾರೆ.
ಭಾರತೀಯ ಉಕ್ಕು ಪ್ರಾಧಿಕಾರದ ಮುಖ್ಯಸ್ಥರು ಆಡಳಿತ ಪಕ್ಷದ ವಕ್ತಾರರಂತೆ ಕಾರ್ಯನಿರ್ವಹಿಸುತ್ತಿದ್ದಾರೆ. ಕೇಂದ್ರ ಸರಕಾರ ಈವರೆಗೂ ಈ ಕಾರ್ಖಾನೆ ಮಾರಲು ಸಾಧ್ಯವಾಗಿಲ್ಲ. ಕುಮಾರಸ್ವಾಮಿ ಈ ಕಾರ್ಖಾನೆಯ ಖಾಸಗೀಕರಣ ಪ್ರಕ್ರಿಯೆ ಮುಂದುವರಿಸುವರೇ? ಎಂದು ಜೈರಾಮ್ ರಮೇಶ್ ಪ್ರಶ್ನಿಸಿದ್ದಾರೆ.
ಡಾ.ಮನಮೋಹನ್ ಸಿಂಗ್ ಪರಿಕಲ್ಪನೆಯಲ್ಲಿ ನಗರ್ನಾರ್ ಉಕ್ಕು ಕಾರ್ಖಾನೆಯು ಬಸ್ತರ್ ಪ್ರದೇಶದ ಜನರಿಗೆ ಸಾವಿರಾರು ಉದ್ಯೋಗ ಸಿಗುವ ನಿರೀಕ್ಷೆಗಳನ್ನು ಹುಟ್ಟುಹಾಕಿತ್ತು. ಆದರೆ ಮೋದಿ 2020ರಿಂದ ಈ ಕಾರ್ಖಾನೆಯನ್ನು ಖಾಸಗೀಕರಣ ಮಾಡಲು ಪ್ರಯತ್ನಿಸುತ್ತಿದ್ದಾರೆ. ಇದರಲ್ಲಿ ಬಹುಪಾಲು ಒಡೆತನ ಪ್ರಧಾನಿಯ ಉದ್ಯಮಿ ಸ್ನೇಹಿತರ ಪಾಲಾಗಲು ಸಿದ್ಧತೆ ನಡೆಸಿತ್ತು. ಆದರೆ, ಕಳೆದ ವರ್ಷ ನಡೆದ ವಿಧಾನಸಭೆ ಚುನಾವಣೆ ಸಮಯದಲ್ಲಿ ಅಮಿತ್ ಶಾ ಬಸ್ತ ಪ್ರದೇಶಕ್ಕೆ ಭೇಟಿ ನೀಡಿ ಈ ಕಾರ್ಖಾನೆಯನ್ನು ಖಾಸಗಿಕರಣ ಮಾಡುವುದಿಲ್ಲ ಎಂದು ಮಾತು ಕೊಟ್ಟಿದ್ದರು ಎಂದು ಅವರು ಸ್ಮರಿಸಿದ್ದಾರೆ.
ಅಮಿತ್ ಶಾ ಕೊಟ್ಟಿರುವ ಮಾತಿಗೆ ಕುಮಾರಸ್ವಾಮಿ ಬದ್ಧರಾಗಿರುವರೇ ಅಥವಾ ಪ್ರಧಾನಮಂತ್ರಿಯ ಉದ್ಯಮಿ ಸ್ನೇಹಿತರಿಗೆ ಈ ಕಾರ್ಖಾನೆ ಮಾರಾಟ ಮಾಡುವರೇ? ಎಂದು ಜೈರಾಮ್ ರಮೇಶ್ ಪ್ರಶ್ನಿಸಿದ್ದಾರೆ.
ಮೋದಿ ಸರಕಾರವು 2022ರ ಅಕ್ಟೋಬರ್ ತಿಂಗಳಿನಿಂದ ಭದ್ರಾವತಿಯ ವಿಶ್ವೇಶ್ವರಯ್ಯ ಉಕ್ಕು ಹಾಗೂ ಕಬ್ಬಿಣ ಕಾರ್ಖಾನೆ ಮುಚ್ಚಿದೆ. ಈ ಕಾರ್ಖಾನೆಗೆ ಅದಿರು ಪೂರೈಸಲು ಯಾವುದೇ ನಿಕ್ಷೇಪವಿಲ್ಲ ಎಂಬ ಸಮಜಾಯಷಿ ನೀಡಿತ್ತು. ಭದ್ರಾವತಿಯಿಂದ 250ಕಿ.ಮೀ ದೂರದಲ್ಲಿರುವ ಬಳ್ಳಾರಿಯಲ್ಲಿರುವ ಅದಿರು ನಿಕ್ಷೆಪವನ್ನು 2011ರಲ್ಲಿ ಭಾರತೀಯ ಉಕ್ಕು ಪ್ರಾಧಿಕಾರಕ್ಕೆ ಗಣಿಗಾರಿಕೆಗೆ ಭೋಗ್ಯ ನೀಡಲಾಗಿದೆ. ಹೀಗಾಗಿ ಕುಮಾರಸ್ವಾಮಿ ವಿಐಎಸ್‍ಎಲ್ ಕಾರ್ಖಾನೆ ಮುಚ್ಚುವ ನಿರ್ಧಾರವನ್ನು ಕೈಬಿಟ್ಟು ಕಾರ್ಖಾನೆ ಉಳಿವಿಗೆ ಅಗತ್ಯ ಕ್ರಮ ಕೈಗೊಳ್ಳುವರೇ? ಎಂದು ಅವರು ಪ್ರಶ್ನಿಸಿದ್ದಾರೆ.
ಮೋದಿ ಅವರ ಕಳೆದ ಸರಕಾರ ದುರ್ಗಾಪುರದ ಅಲೊಯ್ ಉಕ್ಕಿನ ಕಾರ್ಖಾನೆ ಮಾರಾಟ ಮಾಡಲು ಪ್ರಯತ್ನಿಸಿತ್ತು. ದುರ್ಗಾಪುರದ ಜನರು ಈ ಕಾರ್ಖಾನೆ ಮೂಲಕ ತಮ್ಮ ಭವಿಷ್ಯ ಕಟ್ಟಿಕೊಳ್ಳುವ ನಿರೀಕ್ಷೆ ಹೊಂದಿದ್ದು, ಕುಮಾರಸ್ವಾಮಿ ಈ ಕಾರ್ಖಾನೆಯ ಖಾಸಗೀಕರಣಕ್ಕೆ ಅವಕಾಶ ನೀಡುವುದಿಲ್ಲ ಎಂದು ಪಶ್ಚಿಮ ಬಂಗಾಳ ಹಾಗೂ ದುರ್ಗಾಪುರದ ಜನರಿಗೆ ಭರವಸೆ ನೀಡಬಲ್ಲರೇ? ಎಂದು ಜೈರಾಮ್ ರಮೇಶ್ ಪ್ರಶ್ನಿಸಿದ್ದಾರೆ.