ಆ.31ರಿಂದ ಶಿವಮೊಗ್ಗದಿಂದ ವಿಮಾನ ಹಾರಾಟ ಆರಂಭ; ಉಡಾನ್ ಯೋಜನೆಯಡಿ ತಿರುಪತಿ, ಗೋವಾ, ಹೈದರಾಬಾದ್‌ಗೂ ಸಂಪರ್ಕ: ಎಂ.ಬಿ.ಪಾಟೀಲ್

Update: 2023-07-28 04:53 GMT

Photo- ANI 

ಬೆಂಗಳೂರು, ಜು. 28: ಶಿವಮೊಗ್ಗ ವಿಮಾನ ನಿಲ್ದಾಣ ಆಗಸ್ಟ್ 31ರಿಂದ ತನ್ನ ಕಾರ್ಯಾಚರಣೆ ಆರಂಭಿಸಲಿದ್ದು ಅಂದೇ ಮೊದಲ ವಿಮಾನದಲ್ಲಿ ಪ್ರಯಾಣಿಸುವ ಭಾಗ್ಯ ಮಲೆನಾಡಿನ ಜನರಿಗೆ ಸಿಗಲಿದೆ ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.

ಗುರುವಾರ ನಗರದಲ್ಲಿ ಮಾಧ್ಯಮ ಪ್ರಕಟನೆ ನೀಡಿರುವ ಅವರು, ‘ಈ ಮುಂಚೆ ಶಿವಮೊಗ್ಗ ವಿಮಾನ ನಿಲ್ದಾಣದಿಂದ ಆಗಸ್ಟ್ 11ರಿಂದ ವಿಮಾನಯಾನ ಆರಂಭವಾಗಬೇಕಿತ್ತು. ತಾಂತ್ರಿಕ ಕಾರಣಗಳಿಂದ ಆಗಸ್ಟ್ 31ಕ್ಕೆ ಹೋಗಿದ್ದು ಇಂಡಿಗೊ ಏರ್‍ಲೈನ್ಸ್ ತನ್ನ ಬುಕ್ಕಿಂಗ್ ಅನ್ನು ಆರಂಭಿಸಿದೆ’ ಎಂದು ಅವರು ವಿವರ ನೀಡಿದ್ದಾರೆ.

ತಿರುಪತಿಗೂ ಸಂಪರ್ಕ: ‘ಶಿವಮೊಗ್ಗದಿಂದ ತಿರುಪತಿ, ಗೋವಾ ಮತ್ತು ಹೈದರಾಬಾದ್ ನಗರಗಳಿಗೆ ಉಡಾನ್ ಯೋಜನೆಯಡಿ ವಿಮಾನಯಾನ ಸೇವೆ ನೀಡಲು ಮೂರು ಏರ್‍ಲೈನ್ಸ್ ಸಂಸ್ಥೆಗಳಿಗೆ ಅನುಮತಿ ಸಿಕ್ಕಿದೆ ಎಂದೂ ಅವರು ತಿಳಿಸಿದ್ದಾರೆ.

ಸ್ಪೈಸ್ ಜೆಟ್, ಸ್ಟಾರ್ ಏರ್ ಲೈನ್ಸ್ ಮತ್ತು ಅಲಯನ್ಸ್ ಏರ್ ಸಂಸ್ಥೆಗಳು ಈ ರಹದಾರಿಗಳಲ್ಲಿ ವಿಮಾನ ಸಂಚಾರ ಮಾಡುವ ಸಂಬಂಧ ಕರೆದಿದ್ದ ಟೆಂಡರ್‍ನಲ್ಲಿ ಭಾಗವಹಿಸಿ ಯಶಸ್ವಿಯಾಗಿವೆ. ಸದ್ಯಕ್ಕೆ ಹಗಲು ವೇಳೆಯ ವಿಮಾನ ಸಂಚಾರ ಮಾತ್ರ ಇರುತ್ತದೆ. ರಾತ್ರಿ ವೇಳೆ ಲ್ಯಾಂಡಿಂಗ್ ವ್ಯವಸ್ಥೆಗೆ ಸಂಬಂಧಿಸಿದ ಕಾಮಗಾರಿ ಪ್ರಗತಿಯಲ್ಲಿದ್ದು ಆದಷ್ಟು ಬೇಗ ಮುಗಿಯಲಿದೆ ಎಂದು ಅವರು ವಿವರಿಸಿದ್ದಾರೆ.

ಉಡಾನ್ ಯೋಜನೆಯಡಿ ಅನುಮತಿ ಪಡೆದಿರುವ ವಿಮಾನಯಾನ ಸಂಸ್ಥೆಗಳೂ ವಿಮಾನ ಸಂಚಾರಕ್ಕೆ ಸಿದ್ಧತೆ ನಡೆಸಿದ್ದು, ನಾಗರಿಕ ವಿಮಾನಯಾನ ನಿರ್ದೇಶನಾಲಯದ ಅನುಮತಿ ಸಿಕ್ಕ ನಂತರ ಅವುಗಳ ಕಾರ್ಯಾಚರಣೆ ನಡೆಸಲಿವೆ ಎಂದು ಎಂ.ಬಿ.ಪಾಟೀಲ್ ಅವರು ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News