ಫೆಬ್ರವರಿಯಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶ : ಸಂಪುಟ ಅನುಮೋದನೆ

Update: 2024-06-13 13:24 GMT

File Photo

ಬೆಂಗಳೂರು : ಮುಂದಿನ ವರ್ಷದ ಫೆಬ್ರವರಿ ತಿಂಗಳಿನಲ್ಲಿ ʼಜಾಗತಿಕ ಹೂಡಿಕೆದಾರರ ಸಮಾವೇಶʼ ಆಯೋಜನೆ, ಹೊಸ ಟೆಂಡರ್ ಪ್ರಕ್ರಿಯೆ ಚಾಲನೆಗೆ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ ಎಂದು ಕಾನೂನು ಸಚಿವ ಎಚ್.ಕೆ.ಪಾಟೀಲ್ ತಿಳಿಸಿದರು.

ಗುರುವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ʼ2025ರ ಫೆ.12ರಿಂದ ಫೆ.14ರವರೆಗೆ ಜಾಗತಿಕ ಹೂಡಿಕೆದಾರರ ಸಮಾವೇಶವೂ ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜನೆ ಮಾಡಲು ನಿರ್ಧರಿಸಲಾಗಿದೆ. ಈಗಾಗಲೆ 75ಕೋಟಿ ರೂ.ಒದಗಿಸಲಾಗಿದ್ದು, ಹೆಚ್ಚುವರಿಯಾಗಿ 15ಕೋಟಿ ರೂ. ಒದಗಿಸಲು ಇಂದಿನ ಸಂಪುಟದಲ್ಲಿ ಅನುಮೋದನೆ ನೀಡಲಾಗಿದೆ ಎಂದರು.

ಅದೇ ರೀತಿ, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯಡಿ ಇನ್ವೆಸ್ಟ್ ಕರ್ನಾಟಕ-2025ದಲ್ಲಿ ಬಂಡವಾಳ ಹೂಡಿಕೆ ಆಕರ್ಷಣೆಗೆ ನಾಲೆಡ್ಜ್ ಪಾರ್ಟನರ್ ಆಯ್ಕೆ ಕುರಿತು ಕರೆದ ಟೆಂಡರ್ ನಲ್ಲಿ 21 ಕೋಟಿ ರೂ. ಟೆಂಡರ್ ಕೋಟ್ ಮಾಡಿದ್ದ ಬಾಸ್ಟನ್ ಕನ್ಟ್ರಕ್ಷನ್ ಇಂಡಿಯಾ ಕಂಪೆನಿಯವರಿಗೆ ಟೆಂಡರ್ ಕೊಡಲಾಗಿದೆ. ಒಂದೇ ಟೆಂಡರ್ ಬಂದಿದ್ದ ಕಾರಣಕ್ಕೆ ಅವರಿಗೆ ಟೆಂಡರ್ ನೀಡಲಾಗಿದೆ ಎಂದು ಅವರು ಉಲ್ಲೇಖಿಸಿದರು.

ಇನ್ನೂ, ಹಿಂದಿನ ಸಚಿವ ಸಂಪುಟದಲ್ಲಿ 147 ಟೆಂಡರ್ ಗಳಿಗೆ ಆಡಳಿತಾತ್ಮಕ ಮಂಜೂರಾತಿ ನೀಡಿದ್ದು, ಇವುಗಳಲ್ಲಿ ಎಷ್ಟು ಟೆಂಡರ್ ಕರೆದು ಕೆಲಸ ಪ್ರಾರಂಭ ಮಾಡಲಾಗಿದೆ ಎನ್ನುವ ಅವಲೋಕನ ನಡೆಸಲಾಯಿತು. ಇದರಲ್ಲಿ 94 ಪ್ರಸ್ತಾವಗಳಿಗೆ ಟೆಂಡರ್ ಆಹ್ವಾನಿಸಲಾಗಿದೆ. 19 ಟೆಂಡರ್ ಪರಿಶೀಲನೆಯಲ್ಲಿದ್ದು, 18 ಟೆಂಡರ್ ಗಳಿಗೆ ಕಾರ್ಯಾದೇಶ ನೀಡಲಾಗಿದೆ ಎಂದು ಎಚ್.ಕೆ.ಪಾಟೀಲ್ ಹೇಳಿದರು.

ಜತೆಗೆ, 7 ಟೆಂಡರ್ ಕಾಮಗಾರಿ ಮುಕ್ತಾಯಗೊಂಡಿದೆ. 53 ಟೆಂಡರ್ ಕರೆಯಲು ಬಾಕಿ ಇದ್ದು, ಇದನ್ನು ಸಂಪುಟ ಗಂಭೀರವಾಗಿ ಪರಿಗಣಿಸಿದ್ದು, ಅನುಮೋದನೆ ಕೊಟ್ಟಿರುವುದಕ್ಕೆಲ್ಲಾ ಟೆಂಡರ್ ಕರೆದು ಕೆಲಸ ಆರಂಭಿಸಲು ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ ಎಂದು ಅವರು ತಿಳಿಸಿದರು.

ಬಸ್ ಖರೀದಿ: ಕಲ್ಯಾಣ ಕರ್ನಾಟಕ ಸಾರಿಗೆ ಮತ್ತು ವಾಯುವ್ಯ ಸಾರಿಗೆ ನಿಗಮಕ್ಕೆ 112 ಹೊಸ ಪೂರ್ಣ ಕವಚ ನಿರ್ಮಿತ ಬಿಎಸ್ 4 ಬಸ್‍ಗಳನ್ನು 46.48 ಕೋಟಿ ರೂ. ವೆಚ್ಚದಲ್ಲಿ ಖರೀದಿಸಲು ಒಪ್ಪಿಗೆ ನೀಡಲಾಯಿತು. 62 ಹೊಸ ಬಸ್ ಕಲ್ಯಾಣ ಕರ್ನಾಟಕ್ಕೆ ಮತ್ತು 50 ಬಸ್ ವಾಯುವ್ಯ ಸಾರಿಗೆಗೆ ನೀಡಲಾಗುತ್ತದೆ ಎಂದು ಅವರು ವಿವರಿಸಿದರು.

ಕೆಜಿಎಫ್ ಸುತ್ತಮುತ್ತ ಪ್ರದೇಶದಲ್ಲೂ ಲಭ್ಯವಿರುವ ಟೇಲಿಂಗ್‍ನಲ್ಲಿ ಗಣಿ ಚಟುವಟಿಕೆ ಕೈಗೊಳ್ಳುವ ಬಗ್ಗೆ ತಾಂತ್ರಿಕ ವಿವರ ಬೇಕಿರುವ ಕಾರಣಕ್ಕೆ ವಿಷಯದಲ್ಲಿ ಯಾವ ನಿರ್ಧಾರ ಕೈಗೊಳ್ಳದೆ ಮುಂದಿನ ಸಂಪುಟಕ್ಕೆ ಮುಂದೂಡಲಾಗಿದೆ. ಕಾನೂನು ಇಲಾಖೆಯ ಕಾನೂನು ನೀತಿ ಬಗ್ಗೆ ಪ್ರಸ್ತಾವನೆ ಬಂದಿತ್ತು, ಕೆಲ ಬದಲಾವಣೆ ಕಾರಣಕ್ಕೆ ಮುಂದೂಡಿಕೆ ಮಾಡಲಾಯಿತು ಎಂದು ಅವರು ತಿಳಿಸಿದರು.

 ಆರೋಗ್ಯ ಇಲಾಖೆಯಡಿ ಅರೆ ವೈದ್ಯಕೀಯ ಸಿಬ್ಬಂದಿ ಹಾಗೂ ವಾಹನ ಚಾಲಕರ ವಿಲೀನ ಕುರಿತು ಕೆಎಟಿ ತೀರ್ಪಿನಂತೆ ಇಬ್ಬರು ಅಧಿಕಾರಿಗಳ ಹುದ್ದೆ ವಿಲೀನಗೊಳಿಸಲು ಸಂಪುಟ ಒಪ್ಪಿದೆ. ಕಾರ್ಮಿಕ ಇಲಾಖೆಯಡಿ ವೈದ್ಯಕೀಯ ಗುತ್ತಿಗೆ ಇಲಾಖೆ ಸೇವಾ ಸಕ್ರಮಾತಿಗೆ ಚರ್ಚೆಯಾಗಿ ಮುಂದೂಡಿ ಕಾನೂನು ಅಭಿಪ್ರಾಯ ಪಡೆಯಲು ನಿರ್ಧರಿಸಲಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ 12 ಕೋಟಿ ರೂ. ವೆಚ್ಚದಲ್ಲಿ ನ್ಯಾಯಾಲಯ ಕಟ್ಟಡ ನಿರ್ಮಾಣಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಸಚಿವರು ವಿವರಿಸಿದರು.

ಮೂರು ತಿಂಗಳ ನಂತರ ಸಂಪುಟ ಸದಸ್ಯರು ಸೇರಿದ್ದು, ವಿಸ್ತೃತವಾದ ಚರ್ಚೆ ಮಾಡಲಾಗಿದೆ. ಆಡಳಿತವನ್ನು ಹೆಚ್ಚು ಸುಧಾರಿತವಾಗಿ ಮಾಡಬೇಕು, ರಾಜ್ಯದ ಆಡಳಿತವನ್ನು ಹೆಚ್ಚು ವೇಗ, ಜನಸ್ನೇಹಿ, ಜನಪರ ಮಾಡಬೇಕು. ವಿಳಂಬವಾಗುವುದನ್ನು ನಿರ್ಲಕ್ಷಿಸಬಾರದು. ವಿಳಂಬವಾಗದಂತೆ ಕೆಲಸವಾಗಬೇಕು, ಆಡಳಿತವನ್ನು ಮತ್ತಷ್ಟು ಉತ್ತಮಗೊಳಿಸಲು ಬೇಕಾದ ಕ್ರಮದ ಕುರಿತು ಮುಖ್ಯಮಂತ್ರಿ ನಿರ್ದೇಶನ ಮತ್ತು ಮಾರ್ಗದರ್ಶನ ನೀಡಿದರು ಎಂದು ಎಚ್.ಕೆ.ಪಾಟೀಲ್ ತಿಳಿಸಿದರು.

ಜಾತಿ ಗಣತಿ ಚರ್ಚೆಯಿಲ್ಲ: ಜಾತಿ ಜನಗಣತಿ ವಿಷಯ ಈ ಬಾರಿಯ ಸಂಪುಟ ಸಭೆಯಲ್ಲಿ ಚರ್ಚೆಗೆ ಬಂದಿಲ್ಲ ಎಂದು ಸಚಿವ ಎಚ್.ಕೆ.ಪಾಟೀಲ್ ಸ್ಪಷ್ಟಪಡಿಸಿದರು.

ವೇತನ ಆಯೋಗ ಅಧಿವೇಶದಲ್ಲಿ ನಿರ್ಧಾರ: ಏಳನೇ ವೇತನ ಆಯೋಗದ ಕುರಿತು ಸಂಪುಟ ಸಭೆಯಲ್ಲಿ ಚರ್ಚೆಗೆ ಬಂದಿತ್ತು. ಆದರೆ ಯಾವುದೇ ನಿರ್ಣಯ ಕೈಗೊಂಡಿಲ್ಲ, ಅದು ಅಧಿಕೃತ ಪ್ರಸ್ತಾವನೆಯಾಗಿರಲಿಲ್ಲ, ಅಧಿವೇಶನ ನಡೆಸಬೇಕು ಎನ್ನುವ ಅಭಿಪ್ರಾಯ ಬಂದಿದೆ. ಮುಂದಿನ ಸಂಪುಟ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಮಾಡಲಾಗುತ್ತದೆ ಎಂದು ಸಚಿವ ಎಚ್.ಕೆ.ಪಾಟೀಲ್ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News