ಗೋಡ್ಸೆ ಫೋಟೊ ಹಾಕಿ ವೈಭವೀಕರಿಸುವವರು ಮನುಷ್ಯರೇ?: ಲೇಖಕ ನಟರಾಜ್ ಹುಳಿಯಾರ್
ಮೈಸೂರು,ಜು.15: 'ಗೋಡ್ಸೆ ಫೋಟೊ ಹಾಕಿ ವೈಭವೀಕರಿಸುವವರು ಮನುಷ್ಯರೇ? ಗಾಂಧಿ ಬೇಡ ಎಂದರೆ ಬಿಟ್ಟುಬಿಡಿ, ಆದರೆ ಕೇಡನ್ನು ಮಾತ್ರ ಬೆಂಬಲಿಸಬೇಡಿ' ಎಂದು ಲೇಖಕ ಹಾಗೂ ಪ್ರಗತಿಪರ ಚಿಂತಕ ನಟರಾಜ್ ಹುಳಿಯಾರ್ ಕರೆ ನೀಡಿದರು.
ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಕೇಂದ್ರದ ಕನ್ನಡ ಸಂಘ ಶನಿವಾರ ಕಾಲೇಜಿನ ಆವರಣದಲ್ಲಿ ಆಯೋಜಿಸಿದ್ದ ಶತಮಾನೋತ್ಸವ ಸಂಭ್ರಮ ಉಪನ್ಯಾಸ ಮಾಲೆ 'ನಮಗೆ ಬೇಕಾದ ಗಾಂಧಿ' ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
'ಎಲ್ಲರೊಳಗೂ ಗಾಂಧಿ ಇದ್ದಾರೆ. ಗಾಂಧೀಜಿ ಅವರ ಅಹಿಂಸಾ ಮಾರ್ಗದಿಂದಲೇ ದೇಶ ಶುಭಿಕ್ಷವಾಗಿರುವುದು. ಅಂತಹದರಲ್ಲಿ ಕೆಲವರು ಗೋಡ್ಸೆ ಫೋಟೊ ಹಾಕಿ ವೈಭವೀಕರಿಸಲು ಹೊರಟಿದ್ದಾರೆ. ಇವರು ಮನುಷ್ಯರ, ನಿಮಗೆ ಗಾಂಧಿ ಬೇಡ ಎಂದರೆ ಬಿಟ್ಟುಬಿಡಿ. ಆದರೆ ಕೇಡನ್ನು ಬೆಂಬಲಿಸಬೇಡಿ' ಎಂದು ಹೇಳಿದರು.
'ಗಾಂಧಿ ಹೇಳಿಕೊಟ್ಟ ಪಾಠ, ಅಂಬೇಡ್ಕರ್ ಅವರ ಸಂವಿಧಾನದಿಂದ ಇಂದು ಅಲ್ಪ ಸ್ವಲ್ಪ ಪ್ರಜಾಪ್ರಭುತ್ವ ಉಳಿದಿದೆ. ಗಾಂಧಿ ಸಮಾಜದ ಕಟ್ಟಕಡೆಯ ವ್ಯಕ್ತಿಯ ಬಗ್ಗೆ ಚಿಂತನೆ ಮಾಡುತ್ತಿದ್ದರು. ಅದೇ ರೀತಿ ನಮ್ಮನ್ನು ಆಳುವವರು, ಮತ್ತು ಸಮಾಜದಲ್ಲಿ ಹೊಸ ಹೊಸ ಯೋಜನೆಗಳನ್ನು ರೂಪಿಸುವವರು ಚಿಂತಿಸಬೇಕಿದೆ. ಗಾಂಧಿ ಅವರ ಫಲವಾಗಿ ಇಂದು ರಾಜ್ಯದ ಬಜೆಟ್ ನಲ್ಲಿ ಕಟ್ಟಕಡೆಯ ವ್ಯಕ್ತಿಗಳಿಗಾಗಿ ಅನುದಾನ ಮೀಸಲಿಡಲಾಗಿದೆ. ಹಾಗಾಗಿ ನಾವು ನೀವುಗಳೆಲ್ಲರೂ ಸಮಾಜದ ಕಟ್ಟಕಡೆಯ ವ್ಯಕ್ತಿಗಳ ಬಗ್ಗೆ ಕಾಳಜಿ ವಹಿಸಬೇಕಿದೆ' ಎಂದು ಕರೆ ನೀಡಿದರು.
'ಗಾಂಧೀಜಿ ಆ ಕಾಲದಲ್ಲೇ ಮಹಿಳೆಯರು ಸ್ವಾಲಂಬಿ ಜೀವನ ನಡೆಸಬೇಕು ಎಂದು ಪ್ರತಿ ಗ್ರಾಮಗಳಲ್ಲಿ ಮಹಿಳೆಯರಿಗೆ ಚರಕ ನೀಡಿದರು. ಇದರಿಂದ ಲಕ್ಷಾಂತರ ಹೆಣ್ಣು ಮಕ್ಕಳು ಸ್ವಾವಲಂಭಿ ಜೀವನ ನಡೆಸಿದರು.ಗಾಂಧಿ ಅವರು ಹಾಕಿಕೊಟ್ಟ ಮಾರ್ಗದಿಂದಲೇ ಕುವೆಂಪು ಸರ್ವ ಜನಾಂಗದ ಶಾಂತಿಯ ತೋಟ ಎಂದು ಬರೆದರು. ಮಾಸ್ತಿ, ಕುವೆಂಪು, ಮತ್ತು ಈಗಿನ ಸಾಹಿತಿ ದೇವನೂರ ಮಹಾದೇವ ಗಾಂಧಿಯಿಂದ ಒಂದೊಂದು ಪಾಠ ಕಲಿತಿದ್ದಾರೆ' ಎಂದು ಹೇಳಿದರು.
'ಕೋವಿಡ್ ಬಂದ ಸಂದರ್ಭದಲ್ಲಿ ವೈದ್ಯರು, ನಸ್9ಗಳು, ಆಂಬುಲೆನ್ಸ್ ಚಾಲಕರುಗಳು ಸೇರಿದಂತೆ ಅನೇಕರು ಗಡಿಕಾಯುವ ಯೋಧರಿಗಿಂತಲೂ ಹೋರಾಟ ಮಾಡಿದರು. ಯಾಕೆಂದರೆ ಅವರೊಳಗೆ ಗಾಂಧಿ ಇದ್ದರು. ಗಾಂಧಿ ಇಲ್ಲದಿದ್ದರೆ ನಮ್ಮ ಸಮಾಜ ಕುಸಿಯುತ್ತಿತ್ತು. ಗಾಂಧಿ ಇರುವುದರಿಂದಲೇ ನಾವು ಸತ್ಯ ಪ್ರಾಮಾಣಿಕತೆಯಿಂದ ಜೀವನ ನಡೆಸುತ್ತಿದ್ದೇವೆ' ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮೈಸೂರು ವೈದ್ಯಕೀಯ ಮಹಾವಿದ್ಯಾಲಯದ ಡೀನ್ ದಾಕ್ಷಾಯಿಣಿ, ಪ್ರಾಧ್ಯಾಪಕ ಡಾ.ರವೀಂದ್ರನಾಥ್, ಡಾ.ಚಂದ್ರಶೇಖರ್ ಉಪಸ್ಥಿತರಿದ್ದರು.