ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಕ್ಕೆ ಪರಿಹಾರ ನೀಡಲೂ ಸರಕಾರದ ಬಳಿ ಹಣವಿಲ್ಲ: ಆರ್. ಅಶೋಕ್

Update: 2024-01-07 15:11 GMT

ಮಂಗಳೂರು: ಗ್ಯಾರಂಟಿ ಯೋಜನೆಯ ಅನುಷ್ಠಾನದಿಂದಾಗಿ ರಾಜ್ಯದ ಆರ್ಥಿಕ ಪರಿಸ್ಥಿತಿ ಸಂಪೂರ್ಣವಾಗಿ ಹದಗೆಟ್ಟಿದೆ. ವಿದ್ಯಾರ್ಥಿಗಳ ಸ್ಕಾಲರ್‌ಶಿಪ್ ಹಣ ಜಮೆಯಾಗುತ್ತಿಲ್ಲ. 550ಕ್ಕೂ ಅಧಿಕ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ಅವರ ಕುಟುಂಬಕ್ಕೆ ಪರಿಹಾರ ನೀಡಲೂ ಸರಕಾರದಲ್ಲಿ ಹಣವಿಲ್ಲ ಎಂದು ರಾಜ್ಯ ವಿಧಾನಸಭಾ ವಿಪಕ್ಷ ನಾಯಕ ಆರ್.ಅಶೋಕ್ ಹೇಳಿದರು.

ರಾಜ್ಯ ವಿಧಾನಸಭಾ ವಿಪಕ್ಷ ನಾಯಕರಾದ ಬಳಿಕ ಮೊದಲ ಬಾರಿಗೆ ದ.ಕ.ಜಿಲ್ಲೆಗೆ ರವಿವಾರ ಭೇಟಿ ನೀಡಿದ ಅವರು ನಗರದ ಬಿಜೆಪಿ ಚುನಾವಣ ಕಚೇರಿಯಲ್ಲಿ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

ದೇಶದಲ್ಲಿ ರಾಮ ಮಂದಿರದ ಪ್ರತಿಷ್ಠಾಪನೆಯ ಸಂಭ್ರಮಾಚರಣೆ ಇದೆ. ಆದರೆ ಕಾಂಗ್ರೆಸ್‌ನವರಿಗೆ ಮಾತ್ರ ಇದನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ. ಈಗಾಗಲೇ ನಡೆದ 8 ಸರ್ವೇಯಲ್ಲೂ ಬಿಜೆಪಿಗೆ ಅಧಿಕ ಲೋಕಸಭಾ ಸ್ಥಾನ ದೊರೆಯಲಿದೆ ಎಂಬುದಾಗಿ ವರದಿ ಬಂದಿದೆ. ಭ್ರಷ್ಟಾಚಾರದಲ್ಲಿ ಮುಳುಗಿದ ಕಾಂಗ್ರೆಸ್ ಸರಕಾರಕ್ಕೆ ಭಯ ಕಾಡುತ್ತಿವೆ. ಅದಕ್ಕಾಗಿ ಕರಸೇವಕರನ್ನು ಜೈಲಿಗೆ ಹಾಕುತ್ತಿದೆ ಎಂದು ಆರೋಪಿಸಿದರು.

ಕಳೆದ ಏಳು ತಿಂಗಳಿಂದ ಅಭಿವದ್ಧಿ ಕೆಲಸವಾಗಿಲ್ಲ. ಸರಕಾರದ ಖಜಾನೆ ಖಾಲಿಯಾಗಿದೆ. ಲೋಕಸಭಾ ಚುನಾವಣೆಯ ಬಳಿಕ ಈ ಎಲ್ಲ ಉಚಿತ ಯೋಜನೆಗಳು ಸ್ಥಗಿತಗೊಳ್ಳಲಿದೆ. ಆದ್ದರಿಂದ ರಾಜ್ಯ ಸರಕಾರದ ವಿರುದ್ಧ ‘ಫ್ರಿ ಸಾಕಪ್ಪ.. ಅಭಿವೃದ್ಧಿ ಮಾಡಪ್ಪ...’ ಅಭಿಯಾನ ಆಯೋಜಿಸಲು ಉದ್ದೆಶಿಸಲಾಗಿದೆ ಎಂದು ಆರ್. ಅಶೋಕ್ ಹೇಳಿದರು.

ಸಭೆಯಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬೌರತಿ ಬಸವರಾಜ್, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಮೂಡುಬಿದಿರೆ, ಶಾಸಕರಾದ ವೇದವ್ಯಾಸ ಕಾಮತ್, ಡಾ.ವೈ. ಭರತ್ ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ಮೇಯರ್ ಸುಧಿರ್ ಶೆಟ್ಟಿ ಕಣ್ಣೂರು ಉಪಸ್ಥಿತರಿದ್ದರು.

ರವಿಶಂಕರ್ ಮಿಜಾರ್ ಸ್ವಾಗತಿಸಿದರು. ಕಸ್ತೂರಿ ಪಂಜ ಕಾರ್ಯಕ್ರಮ ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News