ʼಗ್ರೇಟರ್ ಬೆಂಗಳೂರು ವಿಧೇಯಕʼ ಪರಾಮರ್ಶೆಗೆ ಸದನ ಸಮಿತಿ ರಚನೆಗೆ ಒಪ್ಪಿಗೆಯಿದೆ : ಡಿಸಿಎಂ ಡಿ.ಕೆ.ಶಿವಕುಮಾರ್

Update: 2024-07-25 15:08 IST
ʼಗ್ರೇಟರ್ ಬೆಂಗಳೂರು ವಿಧೇಯಕʼ ಪರಾಮರ್ಶೆಗೆ ಸದನ ಸಮಿತಿ ರಚನೆಗೆ ಒಪ್ಪಿಗೆಯಿದೆ : ಡಿಸಿಎಂ ಡಿ.ಕೆ.ಶಿವಕುಮಾರ್
  • whatsapp icon

ಬೆಂಗಳೂರು : “ಬೆಂಗಳೂರಿಗೆ ಆರ್ಥಿಕ ಶಕ್ತಿ ಹಾಗೂ ಆಡಳಿತದಲ್ಲಿ ಹೊಸ ರೂಪ ನೀಡುವ ಉದ್ದೇಶದಿಂದ ರೂಪಿಸಲಾಗಿರುವ ಗ್ರೇಟರ್ ಬೆಂಗಳೂರು ವಿಧೇಯಕವನ್ನು ಪರಾಮರ್ಶಿಸಲು ಸದನ ಸಮಿತಿ ರಚನೆಗೆ ನಮ್ಮ ಒಪ್ಪಿಗೆ ಇದೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಿಳಿಸಿದರು.

ವಿಧಾನಸಭೆಯಲ್ಲಿ ಗ್ರೇಟರ್ ಬೆಂಗಳೂರು ವಿಧೇಯಕವನ್ನು ಪರ್ಯಾಲೋಚನೆ ಪ್ರಸ್ತಾಪಿಸಿ ಗುರುವಾರ ಮಾತನಾಡಿದ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಶಿವಕುಮಾರ್ ಅವರು, “ಬೆಂಗಳೂರು ದೊಡ್ಡ ಮಟ್ಟದಲ್ಲಿ ಬೆಳೆಯುತ್ತಿದ್ದು, ನಗರದ ಜನಸಂಖ್ಯೆ 1.40 ಕೋಟಿಗೆ ಏರಿದೆ. ಬೆಂಗಳೂರನ್ನು ಅತ್ಯುತ್ತಮ ನಗರವಾಗಿ ಮಾಡಬೇಕು. ಅಂತರರಾಷ್ಟೀಯ ಮಟ್ಟದಲ್ಲಿ ಬೆಂಗಳೂರು ಹೆಸರು ಮಾಡುತ್ತಿದ್ದು, ರಾಜ್ಯ ರಾಜಧಾನಿಗೆ ಹೊಸ ರೂಪ ನೀಡಲು ಗ್ರೇಟರ್ ಬೆಂಗಳೂರು ಬಿಲ್ ಗೆ ಹೊಸದಾಗಿ ಪ್ರಸ್ತಾವನೆ ಸಲ್ಲಿಸುತ್ತಿದ್ದೇನೆ” ಎಂದು ಹೇಳಿದರು.

ಈ ವೇಳೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಮತ್ತು ಶಾಸಕ ಎಸ್.ಟಿ.ಸೋಮಶೇಖರ್ ಅವರು ಮಾತನಾಡಿ, ಬೆಂಗಳೂರಿನ ಶಾಸಕರು, ವಿಧಾನಪರಿಷತ್ ಸದಸ್ಯರು ಸೇರಿದ ಸದನ ಸಮಿತಿ ರಚಿಸಬೇಕು. ವಿಶೇಷ ಚರ್ಚೆ ಮಾಡಬೇಕು. ಬಿಲ್ ಅನ್ನು ಬಾಕಿ ಇರಿಸಬೇಕು ಎಂದು ಎಂದು ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಶಿವಕುಮಾರ್ ಅವರು, “ಅಶೋಕ್ ಹಾಗೂ ಸೋಮಶೇಖರ್ ಅವರು ಚರ್ಚೆ ನಡೆಸಬೇಕು ಎಂದು ಹೇಳಿದ್ದಾರೆ. ಬೆಂಗಳೂರಿನ ಶಾಸಕರಾದ ಸತೀಶ್ ರೆಡ್ಡಿ, ರಾಮಮೂರ್ತಿ ಅವರು ನನ್ನನ್ನು ಭೇಟಿ ಮಾಡಿ ಒಂದಷ್ಟು ವಿಚಾರಗಳನ್ನು ಚರ್ಚೆ ಮಾಡಿದ್ದಾರೆ. ನಮಗೂ ಸಹ ತರಾತುರಿಯಲ್ಲಿ ಈ ಬಿಲ್ ಅನ್ನು ತರುವ ಆಲೋಚನೆ ಇಲ್ಲ. ರಾಮಲಿಂಗಾರೆಡ್ಡಿ, ಕೆ.ಜೆ.ಜಾರ್ಜ್, ರಿಜ್ವಾನ್ ಅರ್ಷದ್, ಕೃಷ್ಣಬೈರೇಗೌಡ ಅವರ ಬಳಿಯೂ ಈ ವಿಚಾರವಾಗಿ ಚರ್ಚೆ ನಡೆಸಿದ್ದೇನೆ. ಈ ವಿಚಾರವಾಗಿ ಸದನ ಸಮಿತಿ ರಚನೆ ಮಾಡಲು ನಮ್ಮ ಒಪ್ಪಿಗೆಯಿದೆ” ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News