ʼಗೃಹಲಕ್ಷ್ಮಿʼ ರಂಗೋಲಿ ಹಾಕಿ ಮಹಿಳೆಯರಿಂದ ಸಂಭ್ರಮ; ಫೋಟೊ ಹಂಚಿಕೊಂಡ ಕಾಂಗ್ರೆಸ್
ಬೆಂಗಳೂರು: ಕರ್ನಾಟಕ ಸರ್ಕಾರದ ಬಹು ನಿರೀಕ್ಷಿತ 'ಗೃಹ ಲಕ್ಷ್ಮಿ' ಯೋಜನೆಗೆ ಬುಧವಾರ ಮೈಸೂರಿನಲ್ಲಿ ವಿದ್ಯುಕ್ತ ಚಾಲನೆ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಹಲವೆಡೆ ಮಹಿಳೆಯರು ಸರಕಾರದ ಈ ಮಹತ್ವದ ಯೋಜನೆಯನ್ನು ಸಂಭ್ರಮದಿಂದ ತಮ್ಮ ಮನೆಗಳ ಮುಂದೆ ರಂಗೋಲಿ ಹಾಕುವ ಮೂಲಕ ಸ್ವಾಗತಿಸಿದ್ದಾರೆ.
ಈ ಯೋಜನೆಯಡಿ 2000 ರೂ. ಹಣ ತಮ್ಮ ಖಾತೆಗಳಿಗೆ ನೇರವಾಗಿ ವರ್ಗಾವಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಫಲಾನುಭವಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ʼʼನಾನೇ ಗೃಹ ಲಕ್ಷ್ಮಿʼʼ, ʼʼನಾನೇ ನಾಯಕಿʼʼ ಎಂದು ರಂಗೋಲಿ ಬಿಡಿಸಿ ಈ ಯೋಜನೆಯನ್ನು ಸ್ವಾಗತಿಸಿದ್ದು, ಫೋಟೊಗಳು ಸಾಮಾಜಿಕ ಜಾಲತಾಣ ಹರಿದಾಡುತ್ತಿವೆ.
ಈ ಕುರಿತ ಫೋಟೊಗಳನ್ನು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಕಾಂಗ್ರೆಸ್ ನ ಅಧಿಕೃತ ಟ್ವಿಟರ್ ಖಾತೆಗಳಲ್ಲಿ ಹಂಚಿಕೊಂಡಿದ್ದು, ʼʼನಮ್ಮ ಸರ್ಕಾರದ ಯೋಜನೆಗೆ ಜನತೆ ಸಂಭ್ರಮಿಸುತ್ತಿರುವುದು ನಮ್ಮಲ್ಲಿ ಸಾರ್ಥಕತೆ ಮೂಡಿಸುತ್ತಿದೆʼʼ ಎಂದು ಹರ್ಷ ವ್ಯಕ್ತಪಡಿಸಿದೆ.
ʼʼಮುಖ್ಯಮಂತ್ರಿಗಳ ತವರು ಕ್ಷೇತ್ರದಲ್ಲಿ, ಜಗತ್ತಿನಲ್ಲೇ ವಿಶಿಷ್ಟವಾದ ಇಂತಹ ಯೋಜನೆಯನ್ನು ನನ್ನ ಇಲಾಖೆಯಿಂದ ಜಾರಿಗೊಳಿಸುತ್ತಿರುವುದು ನನಗೆ ಖುಷಿಯನ್ನು ಇಮ್ಮಡಿಗೊಳಿಸಿದೆ. ಇದನ್ನು ನನ್ನ ಜೀವನದ ಸಾರ್ಥಕ ಕ್ಷಣ ಎಂದೇ ಭಾವಿಸುತ್ತೇನೆʼʼ
- ಲಕ್ಷ್ಮಿ ಹೆಬ್ಬಾಳ್ಕರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ.