ದೆಹಲಿಯಲ್ಲಿ ಬಿಜೆಪಿ ನಾಯಕರನ್ನು ಭೇಟಿ ಮಾಡಿದ್ದು ನಿಜ ಎಂದ ಎಚ್.ಡಿ.ದೇವೇಗೌಡ

Update: 2023-09-10 15:17 GMT

ಬೆಂಗಳೂರು: ಕೆಲ ದಿನಗಳ ಹಿಂದೆ ನಾನು ದೆಹಲಿಗೆ ಹೋಗಿದ್ದೂ ನಿಜ, ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದೂ ನಿಜ ಎಂದು ಮಾಜಿ ಪ್ರಧಾನಿಗಳಾದ ಎಚ್.ಡಿ.ದೇವೇಗೌಡ ಹೇಳಿದ್ದಾರೆ.

ಬೆಂಗಳೂರಿನ ಅರಮನೆ ಮೈದಾನದಲ್ಲಿ ಭಾನುವಾರ ನಡೆದ ಜೆಡಿಎಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡಿದರು.

ʼʼಕುಮಾರಸ್ವಾಮಿ ಅವರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿಶೇಷ ಪ್ರೀತಿ, ವಿಶ್ವಾಸ ಇದೆ. 2018ರಲ್ಲಿಯೇ ದಿಲ್ಲಿಯಲ್ಲಿ ಒಮ್ಮೆ, “ಈ ಕೂಡಲೇ ರಾಜೀನಾಮೆ ನೀಡಿ. ನಾಳೆಯೇ ಹೊಸದಾಗಿ ಪ್ರಮಾಣ ಸ್ವೀಕಾರ ಮಾಡಿ. ಬಿಹಾರದ ನಿತೀಶ್ ಕುಮಾರ್ ಅವರಂತೆ ನಿಮ್ಮನ್ನೂ ದೀರ್ಘಾವಧಿ ಮುಖ್ಯಮಂತ್ರಿಯನ್ನಾಗಿ ಮಾಡುವುದು ನನ್ನ ಜವಾಬ್ದಾರಿ ಎಂದು ಹೇಳಿದ್ದರು. ಆದರೆ, ನನ್ನನ್ನು ನೋಡಿಕೊಂಡು ಕುಮಾರಸ್ವಾಮಿ ಅವರು ಮೋದಿ ಅವರ ಆಫರ್ ಅನ್ನು ನಯವಾಗಿ ತಿರಸ್ಕರಿಸಿದ್ದರುʼʼ ಎಂದು ಹೇಳಿದರು. 

ʼʼಕೆಲವು ದಿನಗಳಿಂದ ಚರ್ಚೆ ನಡೆಯುತ್ತಿದೆ. ಜೆಡಿಎಸ್ ಎಲ್ಲಿದೆ? 28 ಸ್ಥಾನಗಳಲ್ಲಿ ಕನಿಷ್ಠ 24 ಸ್ಥಾನಗಳನ್ನು ನಾವೇ ಗೆಲ್ಲುತ್ತೇವೆ. 4 ಸ್ಥಾನಗಳು ಬಿಜೆಪಿಗೆ ಹೋಗಬಹುದು, ಜೆಡಿಎಸ್ ಎಲ್ಲಿದೆ ಎಂಬ ಚರ್ಚೆ 3 ದಿನಗಳಿಂದ ನಡೆಯುತ್ತಿದೆ. ಅದಕ್ಕೆ ಉತ್ತರ ಕೊಡುವ ಕಾಲ ಬಂದಿದೆʼʼ ಎಂದರು. 

ʼʼಬಿಜೆಪಿ ನಾಯಕರನ್ನು ದೆಹಲಿಯಲ್ಲಿ ಭೇಟಿ ಮಾಡಿದ್ದು ಹೌದು, ದೇವೆಗೌಡ ಮತ್ತೆ ಪ್ರಧಾನಿ ಆಗೊದಕ್ಕೆ ಈ ಭೇಟಿ ಮಾಡಿದ್ದಲ್ಲ, ಈ ಪಕ್ಷ ಉಳಿಸಲು. ಮೋದಿಯವರು ಅವರಾಗಿಯೇ ವಿಶ್ವಾಸದಿಂದ ಭೇಟಿ ಮಾಡಲು ಮುಂದೆ ಬಂದಾಗ ಅವರ ಜತೆ ಮಾತನಾಡಿದ್ದು ಸತ್ಯ. ಆದರೆ ನಾವು ಯಾವ ಸೀಟನ್ನು ಕೇಳಲಿಲ್ಲʼʼ ಎಂದು ಸ್ಪಷ್ಟಪಡಿಸಿದ್ದಾರೆ. 

ʼʼಮಂಡ್ಯದಲ್ಲಿ ಬಿಜೆಪಿಯ ಮತಗಳು ಇಲ್ಲವೇ? ರಾಮನಗರದಲ್ಲಿ ಬಿಜೆಪಿಯ ಓಟ್ ಇಲ್ವೇ? ಕೋಲಾರ, ತುಮಕೂರಿನಲ್ಲಿ ಇಲ್ವೇ?? ಹಾಗಂದ ಮಾತ್ರಕ್ಕೆ ಜೆಡಿಎಸ್ನಲ್ಲಿ ಏನೂ ಇಲ್ಲ ಎಂದು ಯಾರೂ ಭಾವಿಸಬಾರದು. ಈ ಬಗ್ಗೆ ಬಿಜೆಪಿ ನಾಯಕರಿಗೆ ಮಾತುಕತೆಯ ವೇಳೆಯೇ ಹೇಳಿದ್ದೇನೆ. ವಿಜಯಪುರದಲ್ಲಿ, ರಾಯಚೂರಿನಲ್ಲಿ ನನ್ನ ಪಕ್ಷದ ಶಕ್ತಿ ಕೊಟ್ಟರೆ ಮಾತ್ರ ಬಿಜೆಪಿ ಗೆಲ್ಲುತ್ತೆ ಎಂದು ಹೇಳಿದ್ದೇನೆ. ಬೀದರ್ ನಲ್ಲಿ ಎರಡು ಕ್ಷೇತ್ರಗಳಲ್ಲಿ ನಮ್ಮ ಶಕ್ತಿ ಇದೆ. ಚಿಕ್ಕಮಗಳೂರಿನ ಲೋಕಸಭೆ ಕ್ಷೇತ್ರದಲ್ಲಿಯೂ ನಮ್ಮ ಶಕ್ತಿ ಇದೆ. ನಾನು ವಿನಮ್ರವಾಗಿ ಈ ವಿಷಯ ತಿಳಿಸಿದ್ದೇನೆʼʼ ಎಂದು ಅವರು ಹೇಳಿದರು. 

ʻʻಈ ವಿಚಾರವಾಗಿ ಕುಮಾರಸ್ವಾಮಿ ಅವರು ಅಂತಿಮವಾಗಿ ಎಷ್ಟು ಸೀಟು ಹಂಚಿಕೆ ಮಾಡಿಕೊಳ್ಳಬೇಕೆಂದು ಬಿಜೆಪಿ ನಾಯಕರ ಜತೆ ಕೂತು ಚರ್ಚೆ ನಡೆಸಿ ತೀರ್ಮಾನ ಮಾಡುತ್ತಾರೆʻʻ ಎಂದು ಹೇಳಿದರು. 

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News