ರಾಜ್ಯದ ಎಲ್ಲಾ 28 ಸ್ಥಾನಗಳಲ್ಲಿ ಎನ್‍ಡಿಎ ಅಭ್ಯರ್ಥಿಗಳನ್ನು ಗೆಲ್ಲಿಸಿ: ಎಚ್‌.ಡಿ. ದೇವೇಗೌಡ ಕರೆ

Update: 2024-04-20 18:26 GMT

Screengrab:X/@BJP4Karnataka

ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಎಲ್ಲಾ 28 ಸ್ಥಾನಗಳಲ್ಲಿ ಎನ್‍ಡಿಎ ಅಭ್ಯರ್ಥಿಗಳನ್ನು ಗೆಲ್ಲಿಸಿ ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಕರೆ ನೀಡಿದರು.

ನಗರದ ಹೊರವಲಯದ ಅಗಲಗುರ್ಕಿ ಗ್ರಾಮದ ಮೈದಾನದಲ್ಲಿ ಆಯೊಜಿಸಿದ್ದ ವಿಜಯ ಸಂಕಲ್ಪ ಸಮಾವೇಶದಲ್ಲಿ ಮಾತನಾಡಿದ ಅವರು, ಯುಪಿಎ ಸರ್ಕಾರದಲ್ಲಿ ಹಲವು ಯೋಜನೆಗಳಲ್ಲಿ ಭ್ರಷ್ಟಾಚಾರ ನಡೆದಿದ್ದು ದೇಶದ ದುಡ್ಡನ್ನು ದೋಚಿದ್ದರು. ಬಹುಶಃ ಅದರ ಸಂಕೇತವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚೊಂಬಿನ ಜಾಹಿರಾತನ್ನು ನೀಡಿದ್ದಾರೆಂದು ವ್ಯಂಗ್ಯವಾಡಿದರು.

ನಂತರ 2014 ರಲ್ಲಿ ಆಡಳಿತಕ್ಕೆ ಬಂದ ನರೇಂದ್ರ ಮೋದಿ ನೇತೃತ್ವದ ಎನ್‍ಡಿಎ ಸರ್ಕಾರ ಹತ್ತು ವರ್ಷಗಳಲ್ಲಿ ಒಂದೂ ಕಪ್ಪು ಚುಕ್ಕೆ ಇಲ್ಲದೆ ಆಡಳಿತ ನಡೆಸಿರುವುದು ಅವರ ಪ್ರಾಮಾಣಿಕತೆಗೆ ನಿದರ್ಶನ ಎಂದರು. ಬೆಂಗಳೂರು ನಗರದಲ್ಲಿ ನೀರಿಗೆ ಹಾಹಾಕಾರ ಏರ್ಪಟ್ಟಿದ್ದು ಅದನ್ನು ನಿವಾರಿಸುವಲ್ಲಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಮಾಜಿ ಶಾಸಕರೊಬ್ಬರು ಬಿಜೆಪಿ ಪರವಾಗಿ ಪ್ರಚಾರ ಮಾಡುವುದಿಲ್ಲವೆಂದು ಹೇಳಿ ಕಾಂಗ್ರೆಸ್ ಪಕ್ಷಕ್ಕೆ ಜಿಗಿದಿದ್ದು ಇದರಿಂದ ಪಕ್ಷಕ್ಕೇನು ನಷ್ಟವಿಲ್ಲವೆಂದು ಹೆಸರು ಹೇಳದೆಯೇ ಬಚ್ವೇಗೌಡರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

ಈ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಡಾ ಕೆ ಸುಧಾಕರ್ ಮತ್ತು ಕೋಲಾರ ಕ್ಷೇತ್ರದಿಂದ ಮಲ್ಲೇಶ್ ಬಾಬುರವರನ್ನು ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು ಮತ್ತು ಮುಖಂಡರು ಗೆಲ್ಲಿಸಲು ಪಣ ಕೊಡಬೇಕೆಂದು ಮನವಿ ಮಾಡಿದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News