ಚನ್ನಪಟ್ಟಣದಲ್ಲಿ ಗಿಫ್ಟ್ ಕೂಪನ್ ಹಂಚಲು ಕಾಂಗ್ರೆಸ್ ಹುನ್ನಾರ : ಎಚ್.ಡಿ.ಕುಮಾರಸ್ವಾಮಿ ಆರೋಪ

Update: 2024-10-31 12:33 GMT

PC:x/@hd_kumaraswamy

ಬೆಂಗಳೂರು : ‘ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಪಕ್ಷ ವಾಮಮಾರ್ಗದಲ್ಲಿ ಉಪಚುನಾವಣೆ ಗೆಲ್ಲಲು ಸಂಚು ರೂಪಿಸಿದೆʼ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಆರೋಪ ಮಾಡಿದ್ದಾರೆ.

ಗುರುವಾರ ಚನ್ನಪಟ್ಟಣ ಕ್ಷೇತ್ರದಲ್ಲಿ ತಿಟ್ಟಮಾರನಹಳ್ಳಿ, ಕುಂತೂರು ದೊಡ್ಡಿ, ಚಿಕ್ಕನದೊಡ್ಡಿ, ಪಟಲು, ಕಳ್ಳಿ ಹೊಸೂರು, ಮೈಲನಾಯಕನಹಳ್ಳಿ ಇನ್ನಿತರೆ ಗ್ರಾಮಗಳಲ್ಲಿ ಚುನಾವಣಾ ಪ್ರಚಾರ ಮಾಡಿದ ಅವರು, ʼಕಳೆದ ಚುನಾವಣೆಯಲ್ಲಿ ರಾಮನಗರ ಸೇರಿ ವಿವಿಧ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷ ಗಿಫ್ಟ್ ಕೂಪನ್‍ಗಳನ್ನು ಹಂಚಿ ಅಕ್ರಮ ನಡೆಸಿತ್ತು. ಉಪಚುನಾವಣೆಯಲ್ಲಿಯೂ ಅದೇ ರೀತಿಯ ಅಕ್ರಮ ನಡೆಸಲು ಹೊರಟಿದೆʼ ಎಂದು ಆರೋಪಿಸಿದರು.

ವಿಧಾನಸಭೆ ಚುನಾವಣೆಯಲ್ಲಿ ರಾಮನಗರ, ಮಾಗಡಿ, ಕನಕಪುರ ಸೇರಿ ಹಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷವು ಬೆಂಗಳೂರಿನ ಲುಲು ಮಾಲ್‍ನಲ್ಲಿ ಖರೀದಿ ಮಾಡುವ 3 ಸಾವಿರ ರೂ., 5ಸಾವಿರ ರೂ.ಮೌಲ್ಯದ ಗಿಫ್ಟ್ ಕೂಪನ್ ಹಂಚಲಾಯಿತು. ಚುನಾವಣೆ ಮುಗಿದ ಮೇಲೆ ಆ ಕೂಪನ್‍ಗಳನ್ನು ಮಾಲ್‍ನವರಿಗೆ ಕೊಟ್ಟರೆ ವಾಪಸ್ ಕಳಿಸಿದ್ದಾರೆ. ಇದೇ ಕುತಂತ್ರವನ್ನು ಕಾಂಗ್ರೆಸ್ ಚನ್ನಪಟ್ಟಣದಲ್ಲಿಯೂ ಜಾರಿ ಮಾಡುತ್ತಿದೆ ಎಂದು ಅವರು ದೂರಿದರು.

ಕಾಂಗ್ರೆಸ್ ಪಕ್ಷವು ವಾಮಮಾರ್ಗದಲ್ಲಿ ಚುನಾವಣೆಗಳನ್ನು ಗೆಲ್ಲುವ ಚಾಳಿ ಮಾಡಿಕೊಂಡಿದೆ. ಚನ್ನಪಟ್ಟಣ ಕ್ಷೇತ್ರದಲ್ಲಿಯೂ ಕೂಪನ್ ಷಡ್ಯಂತ್ರ ಮಾಡಲು ಕಾಂಗ್ರೆಸ್ ಹೊರಟಿದೆ. ಇಂತಹ ವಂಚನೆಯ ಕುತಂತ್ರಕ್ಕೆ ಯಾರೂ ಮರುಳಾಗಾಬಾರದು ಎಂದು ಅವರು ಮನವಿ ಮಾಡಿದರು

ದೇವರ ನಿರ್ಧಾರ: ನಿಖಿಲ್ ಎನ್‍ಡಿಎ ಅಭ್ಯರ್ಥಿ ಆಗಿದ್ದು ದೇವರ ನಿರ್ಧಾರ. ಕಾಂಗ್ರೆಸ್ ಅಭ್ಯರ್ಥಿ ಆಗಿರುವ ವ್ಯಕ್ತಿ ಎನ್‍ಡಿಎ ಅಭ್ಯರ್ಥಿ ಆಗಬೇಕಿತ್ತು. ಅವರು ಮೊದಲು ನನಗೆ ಟಿಕೆಟ್ ಬೇಕು ಎಂದು ಕೇಳಿದರು. ಆಮೇಲೆ, ಕಮಲ ಚಿಹ್ನೆ ಆದರೇನು, ತೆನೆ ಹೊತ್ತ ಮಹಿಳೆಯ ಚಿಹ್ನೆ ಆದರೇನು. ಚುನಾವಣೆಗೆ ನಿಲ್ಲಲು ಸೈ ಎಂದು ಹೇಳಿಕೊಂಡಿದ್ದರು. ಅವರ ಮಾತುಗಳಿಗೆ ನಾವೂ ಮರುಳಾದೆವು. ಜೆಡಿಎಸ್ ಚಿಹ್ನೆ ಅಡಿಯಲ್ಲಿ ನಿಲ್ಲಲ್ಲ, ಆಮೇಲೆ ಕಮಲ ಚಿಹ್ನೆಯೇ ಬೇಕು ಹೊಸ ವರಸೆ ತೆಗೆದರು. ಅದಕ್ಕೂ ನಾವು ಒಪ್ಪಿದೆವು. ಆದರೆ, ಆ ವ್ಯಕ್ತಿ ಎಲ್ಲರಿಗೂ ಟೋಪಿ ಹಾಕಿ ಹೋದರು ಎಂದು ಅವರು ಕಿಡಿಕಾರಿದರು

ಚನ್ನಪಟ್ಟಣದಲ್ಲಿ ಅಪಪ್ರಚಾರ ನಡೆಯುತ್ತಿದೆ. ಕಾಂಗ್ರೆಸ್ ನಾಯಕರು ಕುಮಾರಸ್ವಾಮಿಗೆ ಕ್ಷೇತ್ರದಲ್ಲಿ ಎಷ್ಟು ಕೆರೆ ಇದೆ ಎಂದು ಹೇಳಿಕೊಂಡು ತಿರುಗುತ್ತಿದ್ದಾರೆ. ನಾನು ಎಷ್ಟು ಕಡೆ ಭೇಟಿ ಕೊಟ್ಟಿದ್ದೇನೆ, ಎಷ್ಟು ಕೆರೆಗಳಿಗೆ ನೀರು ಹರಿಸಿದ್ದೇನೆ. ದಾಖಲೆಗಳಿವೆ, ಬೇಕಾದರೆ ನೋಡಿಕೊಳ್ಳಬಹುದು ಎಂದು ಅವರು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News