27 ವರ್ಷಗಳ ನಂತರ ದೇವೇಗೌಡ ಅವರ ಕನಸಿಗೆ ಮರುಜೀವ: ಮಹಿಳಾ ಮೀಸಲಾತಿ ಕುರಿತು ಹೆಚ್‌ಡಿಕೆ ಪ್ರತಿಕ್ರಿಯೆ

Update: 2023-09-19 13:38 GMT

ಎಚ್.ಡಿ.ಕುಮಾರಸ್ವಾಮಿ

ಬೆಂಗಳೂರು: ವಿಧಾನಸಭೆ ಮತ್ತು ಲೋಕಸಭೆಯಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ನೀಡುವ ಮಸೂದೆ ಲೋಕಸಭೆಯಲ್ಲಿ ಮಂಡನೆ ಆಗುತ್ತಿರುವುದನ್ನು ನಾನು ಮುಕ್ತವಾಗಿ ಸ್ವಾಗತಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಎಚ್.ಡಿ.ದೇವೇಗೌಡರು ಪ್ರಧಾನಮಂತ್ರಿಯಾಗಿದ್ದ ಸಂದರ್ಭದಲ್ಲಿಯೆ ರಾಜ್ಯಸಭೆಯಲ್ಲಿ ಈ ಐತಿಹಾಸಿಕ ಮಸೂದೆ ಮಂಡಿಸಲಾಗಿತ್ತು. ಆದರೆ, ಅವರ ಸಂಯುಕ್ತರಂಗ ಸರಕಾರದ ಮೈತ್ರಿಕೂಟದ ಕೆಲ ಮಿತ್ರಪಕ್ಷಗಳೆ ತೀವ್ರ ವಿರೋಧ ವ್ಯಕ್ತಪಡಿಸಿದ ಕಾರಣಕ್ಕೆ ಆ ಮಸೂದೆ ಅಂಗೀಕಾರ ಆಗಲಿಲ್ಲ ಎಂದು ತಿಳಿಸಿದ್ದಾರೆ.

ಇವತ್ತು ಕಾಂಗ್ರೆಸ್ಸಿನ ‘ಇಂಡಿಯಾ’ ಮೈತ್ರಿಕೂಟವನ್ನು ಸೇರಿಕೊಂಡಿರುವ ನಾಯಕರೆ ಅಂದು ಈ ಮಸೂದೆಗೆ ತಡೆ ಒಡ್ಡಿದ್ದರು. 27 ವರ್ಷಗಳ ನಂತರ ದೇವೇಗೌಡರ ಕನಸಿಗೆ ಮರುಜೀವ ಬಂದಿರುವುದು ನನಗೆ ಸಂತೋಷ ಉಂಟು ಮಾಡಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

1995ರಲ್ಲಿ ದೇವೇಗೌಡರು ಕರ್ನಾಟಕದ ಮುಖ್ಯಮಂತ್ರಿಗಳಾಗಿದ್ದಾಗ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡಿ, ಅಧಿಕಾರ ನಡೆಸುವ ಹಕ್ಕು ಕಲ್ಪಿಸಿ ಮಹಿಳಾ ಸಬಲೀಕರಣದ ಸುವರ್ಣ ಅಧ್ಯಾಯಕ್ಕೆ ನಾಂದಿ ಹಾಡಿದ್ದರು. ಅಂದು ನಮ್ಮ ರಾಜ್ಯದಲ್ಲಿ ಘಟಿಸಿದ ಈ ಕ್ರಾಂತಿಕಾರಿ ವಿದ್ಯಮಾನವನ್ನು ಇಡೀ ದೇಶವೇ ಬೆರಗು ಕಂಗಳಿಂದ ನೋಡಿತ್ತು ಎಂದು ಅವರು ಸ್ಮರಿಸಿದ್ದಾರೆ.

ಇಂದು ಮಹಿಳಾ ಮೀಸಲಾತಿ ಮಸೂದೆ ಲೋಕಸಭೆಯಲ್ಲಿ ಅಂಗೀಕಾರ ಆಗುವುದು ಖಚಿತವಾಗಿದ್ದು, ಈ ಮೂಲಕ ಮಾಜಿ ಪ್ರಧಾನಿ ಕನಸು ನನಸಾಗುತ್ತಿದೆ. ಮಹಿಳೆಯರಿಗೆ ಸಮಾನ ಹಕ್ಕು, ಅವಕಾಶಗಳನ್ನು ಕಲ್ಪಿಸುವುದು ಇಂದಿನ ತುರ್ತು. ಪ್ರಧಾನಿ ನರೇಂದ್ರ ಮೋದಿ, ಮತ್ತವರ ಸಂಪುಟ ಕೈಗೊಂಡ ನಿರ್ಧಾರ ಶ್ಲಾಘನೀಯ. ರಾಜಕೀಯಕ್ಕೆ ಅತೀತವಾಗಿ ಈ ಮಸೂದೆಯನ್ನು ಎಲ್ಲ ಪಕ್ಷಗಳು ಬೆಂಬಲಿಸಬೇಕು ಎನ್ನುವುದು ನನ್ನ ಮನವಿ ಎಂದು ಅವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News