ಚಿಕ್ಕಮಗಳೂರು: ಮಲೆನಾಡು ಭಾಗದಲ್ಲಿ ಮುಂದುವರಿದ ಮಳೆ ಆರ್ಭಟ

Update: 2023-07-22 15:29 GMT

ಚಿಕ್ಕಮಗಳೂರು: ಕಾಫಿನಾಡಿನ ಮಲೆನಾಡು ಭಾಗದಲ್ಲಿ ಧಾರಾಕಾರ ಮಳೆ ಶನಿವಾರವೂ ಮುಂದುವರಿದಿದೆ. ಮಲೆನಾಡು ಭಾಗದಲ್ಲಿ ಎಡಬಿಡದೆ ಮಳೆ ಯಾಗುತ್ತಿದ್ದರೇ, ಬಯಲುಸೀಮೆ ಭಾಗದಲ್ಲಿ ಮೋಡಕವಿದ ವಾತಾವರಣ ನಿರ್ಮಾಣವಾಗಿದ್ದು, ಅಲ್ಲಲ್ಲಿ ಸಾಧಾರಣ ಮಳೆಯಾಗಿದೆ. ಮಳೆಯ ಜೊತೆಗೆ ಭಾರೀ ಗಾಳಿ ಬೀಸುತ್ತಿದ್ದು, ಮಳೆ ಗಾಳಿಯಿಂದಾಗಿ ಕೆಲವೆಡೆ ಅನಾಹುತಗಳೂ ಸೃಷ್ಟಿಯಾಗಿವೆ.

ಜಿಲ್ಲೆಯ ಕಳಸ ಕುದುರೆಮುಖ, ಹೊರನಾಡು, ಮೂಡಿಗೆರೆ, ಶೃಂಗೇರಿ, ಕೊಪ್ಪ, ಜಯಪುರ, ಕೆರೆಕಟ್ಟೆ, ಕಿಗ್ಗಾ, ಮಾಗುಂಡಿ, ಬಾಳೆಹೊನ್ನೂರು, ಚಾರ್ಮಾಡಿಘಾಟಿ ಪ್ರದೇಶದಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು, ಮಲೆನಾಡು ಭಾಗದಲ್ಲಿ ಹರಿಯುವ ತುಂಗಾ, ಭದಾ, ಹೇಮಾವತಿ ನದಿಗಳ ನೀರಿನ ಮಟ್ಟದಲ್ಲಿ ಮತ್ತಷ್ಟು ಏರಿಕೆಯಾಗಿದೆ. ಶೃಂಗೇರಿ, ಕೊಪ್ಪ, ನರಸಿಂಹರಾಜಪುರ, ಬಾಳೆಹೊನ್ನೂರು, ಕೆರೆಕಟ್ಟೆ ಭಾಗದಲ್ಲಿ ಬಾರಿ ಮಳೆಯಾಗುತ್ತಿರುವುದರಿಂದ ತುಂಗಾನದಿ ನೀರಿನ ಮಟ್ಟ ಏರಿಕೆಯಾಗಿದೆ.

ಕಳಸ, ಮೂಡಿಗೆರೆ ತಾಲೂಕು ವ್ಯಾಪ್ತಿಯಲ್ಲಿ ಭಾರೀ ಮಳೆ ಪರಿಣಾಮ ಭದ್ರಾ ನದಿಯಲ್ಲೂ ನೀರಿನ ಮಟ್ಟ ನಿರಂತರವಾಗಿ ಏರಿಕೆಯಾಗುತ್ತಿದೆ. ಮುಳುಗು ಸೇತುವೆ ಎಂದು ಖ್ಯಾತಿ ಪಡೆದಿರುವ ಕಳಸ-ಹೊರನಾಡು ಸಂಪರ್ಕ ಕಲ್ಪಿಸುವ ಹೆಬ್ಬಾಳೆ ಸೇತುವೆ ಭದ್ರಾ ನದಿಯಲ್ಲಿ ಮುಳುಗಲು ಕೆಲವು ಅಡಿಗಳು ಮಾತ್ರ ಬಾಕಿ ಉಳಿದಿದೆ. ಮಲೆನಾಡು ಭಾಗದಲ್ಲಿ ನಿರಂತವಾಗಿ ಮಳೆಯಾಗುತ್ತಿರುವುದರಿಂದ ಹಳ್ಳಕೊಳ್ಳಗಳು ಕೆರೆಕಟ್ಟೆಗಳು ತುಂಬಿ ಹರಿಯುತ್ತಿವೆ. ನಿರಂತರ ಮಳೆಯಿಂದಾಗಿ ಮಲೆನಾಡು ಭಾಗದಲ್ಲಿ ಜನಜೀವನವೂ ಅಸ್ತವ್ಯಸ್ತಗೊಂಡಿದೆ. ಮಲೆನಾಡು ಭಾಗದ ಅಲ್ಲಲ್ಲಿ ಮರಗಳು, ವಿದ್ಯುತ್ ಕಂಬಗಳೂ ಧರೆಗುರುಳಿದ್ದು, ಮೆಸ್ಕಾಂ, ಅರಣ್ಯ ಸಿಬ್ಬಂದಿ ತೆರವು, ದುರಸ್ತಿ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.

ಚಿಕ್ಕಮಗಳೂರು ತಾಲೂಕಿನ ಮಲೆನಾಡು ಭಾಗದಲ್ಲಿ ಶನಿವಾರ ಸಾಧಾರಣ ಮಳೆಯಾಗಿದ್ದು, ಬಯಲು ಭಾಗದಲ್ಲಿ ತುಂತುರು ಮಳೆಯಾಗಿದೆ. ಕಡೂರು, ತರೀಕೆರೆ, ಅಜ್ಜಂಪುರ ತಾಲೂಕು ವ್ಯಾಪ್ತಿಯಲ್ಲಿ ಆಗಾಗ್ಗೆ ಸಾಧಾರಣ ಮಳೆಯಾಗಿದ್ದು, ಉಳಿದಂತೆ ಮೋಡಕವಿದ ವಾತಾವರಣ, ತುಂತುರು ಮಳೆ ಸಾಮಾನ್ಯವಾಗಿದೆ. ಬಯಲು ಭಾಗದಲ್ಲಿ ಮಳೆಗಿಂತ ಭಾರೀ ಗಾಳಿ ಬೀಸುತ್ತಿದ್ದು, ಎಲ್ಲೆಡೆ ಶೀತದ ವಾತಾವರಣ ನಿರ್ಮಾಣವಾಗಿದೆ.

ಮಲೆನಾಡು ಭಾಗದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಭತ್ತದ ಗದ್ದೆ ನಾಟಿ ಕಾರ್ಯಕ್ಕೆ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಕೆಲವರು ಸಸಿಮಡಿ ಹಾಕಿದ್ದು, ಇನ್ನೂ ಕೆಲವರು ನಾಟಿ ಕೆಲಸಕ್ಕೆ ಮುಂದಾಗಿದ್ದಾರೆ. ನಿರಂತರ ಮಳೆಯಿಂದ ಶೃಂಗೇರಿ, ಕಳಸ, ಕೊಪ್ಪ, ಮೂಡಿಗೆರೆ ಭಾಗದಲ್ಲಿನ ಅಡಿಕೆ, ಕಾಫಿ ತೋಟಗಳಿಗೆ ಕೊಳೆರೋಗ ವ್ಯಾಪಿಸಿದ್ದು, ರೋಗ ನಿಯಂತ್ರಿಸುವ ನಿಟ್ಟಿನಲ್ಲಿ ಬೋಡೋ ದ್ರಾವಣ ಸಿಂಪಡಣೆಗೆ ಬೆಳೆಗಾರರು ಮುಂದಾಗಿದ್ದಾರೆ. ಬಯಲು ಭಾಗದಲ್ಲಿ ಜೋಳ, ರಾಗಿ ಮತ್ತು ತರಕಾರಿ ಬೆಳೆ ಬಿತ್ತನೆ ನಡೆಸಲಾಗುತ್ತಿದ್ದು, ಸಾಧಾರಣ ಮಳೆ ಪರಿಣಾಮ ಬಯಲು ಭಾಗದ ಕೃಷಿಕರು ತರಕಾರಿ ಸೇರಿದಂತೆ ವಿವಿಧ ಬೆಳೆಗಳ ಬಿತ್ತನೆ ಕೆಲಸಲ್ಲಿ ತೊಡಗಿಕೊಂಡಿದ್ದಾರೆ.

ಮಳೆಗೆ ಮನೆ ಕುಸಿತ: ಮಲೆನಾಡು ಭಾಗದಲ್ಲಿ ನಿರಂತರವಾಗಿ ಮಳೆಯಾಗುತ್ತಿರುವುದರಿಂದ ಚಿಕ್ಕಮಗಳೂರು ತಾಲೂಕಿನ ಹೊಸಪೇಟೆ ಸಮೀಪದ ಶಿವಪುರ ಗ್ರಾಮದಲ್ಲಿ ಮನೆಯ ಗೋಡೆ ಕುಸಿದು ಬಿದ್ದಿದೆ. ಗ್ರಾಮದ ರಾಜೇಂದ್ರ ಎಂಬು=ವರಿಗೆ ಸೇರಿದ ಮನೆ ಇದಾಗಿದ್ದು, ಸ್ಥಳಕ್ಕೆ ಕಂದಾಯ, ಗ್ರಾಪಂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಪಶ್ಚಿಮಘಟ್ಟ ಪ್ರದೇಶದಲ್ಲಿ ನಿರಂತರವಾಗಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಝರಿ, ಜಲಪಾತಗಳು ಜೀವಕಳೆ ಪಡೆದುಕೊಂಡಿವೆ. ತರೀಕೆರೆ ತಾಲೂಕು ಕಲ್ಲತ್ತಗಿರಿ ಜಲಪಾತ ಕಳೆದ 15ದಿನಗಳ ಹಿಂದೆ ಬತ್ತಿ ಹೋಗಿದ್ದು, ಮುಳ್ಳಯ್ಯನಗಿರಿ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಜಲಪಾತ ಜೀವಕಳೆ ಪಡೆದುಕೊಂಡು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಕಲ್ಲತ್ತಗಿರಿ ಜಲಪಾತ ಸೇರಿದಂತೆ ಇತರ ಜಲಪಾತಗಳಲ್ಲಿನ ನೀರಿನ ಮಟ್ಟ ಹೆಚ್ಚಳವಾಗಿದೆ. ಮಲೆನಾಡು ಭಾಗದ ಸಿರಿಮನೆ ಪಾಲ್ಸ್ ಕೂಡ ಮೈದುಂಬಿ ಹರಿಯುತ್ತಿದ್ದು, ಪ್ರವಾಸಿಗರನ್ನು ಆಕರ್ಷಿಸುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News