ಪರವಾನಿಗೆ ಇಲ್ಲದ ಹುಕ್ಕಾ ಬಾರ್‌ಗಳ ಮೇಲೆ ಕ್ರಮಕ್ಕೆ ಹೈಕೋರ್ಟ್ ನಿರ್ದೇಶನ

Update: 2024-02-28 13:19 GMT

ಬೆಂಗಳೂರು : ಹುಕ್ಕಾ ಬಾರ್ ನಡೆಸಲು ಅಧಿಕೃತ ಪರವಾನಿಗೆ ಇಲ್ಲದಿದ್ದರೆ ಕ್ರಮ ತೆಗೆದುಕೊಳ್ಳಬೇಕು ಎಂದು ರಾಜ್ಯ ಸರಕಾರಕ್ಕೆ ಹೈಕೋರ್ಟ್ ಸೂಚಿಸಿದೆ.

ರಾಜ್ಯಾದ್ಯಂತ ರೆಸ್ಟೋರೆಂಟ್ ಗಳಲ್ಲಿ ಹುಕ್ಕಾ ಮಾರಾಟ ನಿಷೇಧಿಸಿ ಫೆ.7 ರಂದು ರಾಜ್ಯ ಸರಕಾರ ಹೊರಡಿಸಿದ ಅಧಿಸೂಚನೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ನೇತೃತ್ವದ ಏಕಸದಸ್ಯ ಪೀಠ ವಿಚಾರಣೆ ನಡೆಸಿತ್ತು.

ಈ ವೇಳೆ ಅರ್ಜಿದಾರರ ಪರ ವಕೀಲರು ರೆಸ್ಟೋರೆಂಟ್‌ಗಳಲ್ಲಿ ಹುಕ್ಕಾ ಮಾರಾಟ ನಿಷೇಧ ಹೇರಿರುವುದರಿಂದ ವ್ಯಾಪಾರ ವಹಿವಾಟಿಗೆ ತೊಂದರೆ. ಹುಕ್ಕಾ ಸೇವನೆಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ ಎಂದು ಹೈಕೋರ್ಟ್ ಗಮನಕ್ಕೆ ತಂದರು.

ಸರಕಾರದ ಪರ ವಕೀಲರು ವಾದ ಮಂಡಿಸಿ 2003ರ ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳ ಜಾಹೀರಾತು ನಿಷೇಧ ಕಾಯ್ದೆಯ ಪ್ರಕಾರ ಅನುಮತಿಸಲ್ಪಟ್ಟಿರುವ ನಿಗದಿತ ಸ್ಥಳಗಳಲ್ಲಿ ಮಾತ್ರ ಧೂಮಪಾನ ಮಾಡಲು ಅವಕಾಶವಿದೆ. ಹುಕ್ಕಾ ಕೂಡ ಧೂಮಪಾನವಾಗಿದೆ. ಈ ರೆಸ್ಟೋರೆಂಟ್ ಗಳು , ಕಾಯ್ದೆಗೆ ವಿರುದ್ಧವಾಗಿ ಹುಕ್ಕಾವನ್ನು ಮಾರಾಟ ಮಾಡಲು ಸಂಪೂರ್ಣ ಮಹಡಿಗಳು ಹಾಗೂ ಕೆಫೆಗಳನ್ನು ನಿರ್ಮಾಣ ಮಾಡಲಾಗಿದೆ ಎಂದು ಆರೋಪಿಸಿದರು. ಇದನ್ನು ಪರಿಗಣಿಸಿದ ನ್ಯಾಯಪೀಠವು, ಹುಕ್ಕಾ ಮಾರಾಟ ಮಾಡಲು ಯಾವುದೇ ಪರವಾನಗಿ ಇಲ್ಲದ ಎಲ್ಲಾ ಸ್ಥಳಗಳಲ್ಲಿ ಹುಕ್ಕಾ ನಿಷೇಧಿಸುವ ಕ್ರಮವನ್ನು ತೆಗೆದುಕೊಳ್ಳಬೇಕು ಎಂದು ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಿ, ವಿಚಾರಣೆಯನ್ನು ಮಾರ್ಚ್ 5ಕ್ಕೆ ಮುಂದೂಡಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News