ಕೆ.ಎಸ್.ಈಶ್ವರಪ್ಪ ವಿರುದ್ಧ ಎಫ್ ಐಆರ್ ಗೆ ಹೈಕೋರ್ಟ್ ತಡೆ
ಬೆಂಗಳೂರು, ಫೆ.16: 'ದೇಶದ್ರೋಹಿ ಹೇಳಿಕೆ ನೀಡುವವರಿಗೆ ಗುಂಡಿಕ್ಕುವ ಕಾನೂನು ತನ್ನಿ' ಎಂದು ಹೇಳಿ ವಿವಾದಕ್ಕೆ ಕಾರಣವಾಗಿದ್ದ ಮಾಜಿ ಉಪ ಮುಖ್ಯಮಂತ್ರಿ, ಬಿಜೆಪಿ ನಾಯಕ ಕೆ.ಎಸ್.ಈಶ್ವರಪ್ಪ ವಿರುದ್ಧ ದಾಖಲಾಗಿದ್ದ ಎಫ್ ಐಆರ್ ಗೆ ಹೈಕೋರ್ಟ್ ತಡೆ ನೀಡಿದೆ
ತಮ್ಮ ವಿರುದ್ದ ದಾಖಲಾಗಿರುವ ಪ್ರಕರಣದ ರದ್ದತಿ ಕೋರಿ ಕೆ.ಎಸ್.ಈಶ್ವರಪ್ಪ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು ವಿಚಾರಣೆಗೆತ್ತಿಕೊಂಡ ಹೈಕೋರ್ಟ್ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಪೀಠ ಕೆ.ಎಸ್. ಈಶ್ವರಪ್ಪ ವಿರುದ್ಧದ ಎಫ್ ಐಆರ್ ಗೆ ತಡೆ ನೀಡಿ ಆದೇಶಿದೆ.
ಇದೇ ವೇಳೆ ಆಕ್ಷೇಪಾರ್ಹ ಹೇಳಿಕೆ ನೀಡುವ ರಾಜಕಾರಣಿಗಳಿಗೆ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. "ನಮ್ಮ ಧುರೀಣರು ಒಳ್ಳೇ ಭಾಷೆ ಏಕೆ ಬಳಸುತ್ತಿಲ್ಲ?. ಮಾತನಾಡುವಾಗ ಉತ್ತಮ ಸಂಸ್ಕೃತಿಯನ್ನೇಕೆ ಪ್ರತಿಬಿಂಬಿಸುವುದಿಲ್ಲ?. ಹೀಗೆ ಮಾತನಾಡಿ ಭಾಷೆ ಮೇಲೆ ದೌರ್ಜನ್ಯ ಏಕೆ?" ಎಸಗುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದೆ.
ಕರ್ನಾಟಕ ವಿವಿಧ ಸಿದ್ಧಾಂತದ ಜನರನ್ನು ಹೊಂದಿರುವ ರಾಜ್ಯ. ಭಾಷೆಯ ಬಳಕೆಯ ಬಗ್ಗೆ ರಾಜಕಾರಣಿಗಳು ಎಚ್ಚರ ವಹಿಸಬೇಕು. ಶಾಲೆ ಮಕ್ಕಳು ನಮ್ಮನ್ನು ನೋಡುತ್ತಿರುತ್ತಾರೆ ಎಂಬ ಅರಿವಿರಬೇಕು ಎಂದು ನ್ಯಾ.ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಹೈಕೋರ್ಟ್ ಪೀಠ ಹೇಳಿದೆ.
ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ.ಸುರೇಶ್, ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ವಿರುದ್ಧ ಕೆ.ಎಸ್.ಈಶ್ವರಪ್ಪ ನೀಡಿದ್ದ ಹೇಳಿಕೆಯ ವಿರುದ್ಧ ಎಫ್ ಐಆರ್ ದಾಖಲಾಗಿತ್ತು. ಇದರ ವಿರುದ್ಧ ಈಶ್ವರಪ್ಪ ಹೈಕೋರ್ಟ್ ಮೆಟ್ಟಿಲೇರಿದ್ದರು.