ದಲಿತ ಉದ್ಯಮಿಗಳ ಸಮಸ್ಯೆ ಇತ್ಯರ್ಥಕ್ಕೆ ಉನ್ನತ ಮಟ್ಟದ ಸಮಿತಿ : ಸಚಿವ ಎಂ.ಬಿ.ಪಾಟೀಲ್
ಬೆಂಗಳೂರು : ರಾಜ್ಯದ ದಲಿತ ಉದ್ಯಮಿಗಳು ಎದುರಿಸುತ್ತಿರುವ ನಾನಾ ಸಮಸ್ಯೆಗಳನ್ನು ಪರಿಹರಿಸುವ ಉದ್ದೇಶದಿಂದ ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿ ರಚಿಸಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ತಿಳಿಸಿದರು.
ಶುಕ್ರವಾರ ನಗರದ ರೇಸ್ಕೋರ್ಸ್ ರಸ್ತೆಯಲ್ಲಿರುವ ಖನಿಜ ಭವನದಲ್ಲಿ ನಡೆದ ರಾಜ್ಯಸಭೆ ಮಾಜಿ ಸದಸ್ಯ ಡಾ.ಎಲ್.ಹನುಮಂತಯ್ಯ ಅಧ್ಯಕ್ಷತೆಯ ಕರ್ನಾಟಕ ದಲಿತ ಉದ್ದಿಮೆದಾರರ ಸಂಘದ ಸದಸ್ಯರ ಜತೆ ನಡೆದ ಸಭೆಯಲ್ಲಿ ಅವರು ಈ ಘೋಷಣೆ ಮಾಡಿದರು.
ದಲಿತ ಉದ್ದಿಮೆದಾರರು ಎದುರಿಸುತ್ತಿರುವ ನಾನಾ ಸಮಸ್ಯೆಗಳನ್ನು ಆಲಿಸುವುದು ಮತ್ತು ಅದಕ್ಕೆ ಪರಿಹಾರ ಕಂಡುಹಿಡಿಯುವ ಕೆಲಸವನ್ನು ಈ ಸಮಿತಿ ಮಾಡಲಿದೆ. ನಿಯಮಗಳ ಪ್ರಕಾರ ರಾಜ್ಯದ ಕೈಗಾರಿಕಾ ಪ್ರದೇಶಗಳಲ್ಲಿ ದಲಿತ ಉದ್ದಿಮೆದಾರರಿಗೆ ಶೇ.24.10ರಷ್ಟು ಕೈಗಾರಿಕಾ ನಿವೇಶನಗಳನ್ನು ಹಂಚಲು ಸರಕಾರ ಬದ್ಧವಾಗಿದೆ. ಇದರಂತೆ, ವಿವಿಧ ಕೈಗಾರಿಕಾ ಪ್ರದೇಶಗಳಲ್ಲಿ ಇನ್ನೂ 391 ಎಕರೆಯಷ್ಟು ಜಾಗವನ್ನು ಪರಿಶಿಷ್ಟರಿಗೆ ಹಂಚುವುದು ಬಾಕಿ ಇದ್ದು, ಆದಷ್ಟು ಬೇಗ ಹಂಚಿಕೆ ಮಾಡಲಾಗುವುದು ಎಂದು ಅವರು ಹೇಳಿದರು.
ಕೋವಿಡ್ ಪೂರ್ವದಲ್ಲಿ ಹಂಚಿಕೆಯಾಗಿರುವ ಫಲಾನುಭವಿಗಳಿಗೆ ಯೋಜನೆ ಜಾರಿ ಮತ್ತು ಹಣ ಪಾವತಿಗೆ ಈ ಹಿಂದೆ ಒಂದು ವರ್ಷ ನೀಡಿದ್ದ ವಿನಾಯಿತಿಯನ್ನು ಎಂ.ಬಿ.ಪಾಟೀಲ್, ಉದ್ದಿಮೆದಾರರ ಮನವಿ ಮೇರೆಗೆ ಎರಡು ವರ್ಷಗಳ ವಿನಾಯಿತಿ ನೀಡಿದರು. ಅಲ್ಲದೆ, ಹಳೇ ಕೈಗಾರಿಕಾ ಪ್ರದೇಶಗಳಲ್ಲಿ ಹಂಚಿಕೆಯಾಗದೆ ಉಳಿದಿರುವ ನಿವೇಶನಗಳ ಪೈಕಿ ಶೇ.25ರಷ್ಟು ನಿವೇಶನಗಳನ್ನು ಪರಿಶಿಷ್ಟರಿಗೆ ಹಂಚಿಕೆ ಮಾಡಲಾಗುವುದು ಎಂದು ತಿಳಿಸಿದರು.
ಕೆಲವು ಸಂದರ್ಭಗಳಲ್ಲಿ ದಲಿತ ಉದ್ದಿಮೆದಾರರ ಯೋಜನಾ ಪ್ರಸ್ತಾವನೆಗಳ ಸ್ವರೂಪ ಬದಲಾದಂತೆ ನಿಗದಿತ ಪ್ರಮಾಣಕ್ಕಿಂತ ಕಡಿಮೆ ಕೈಗಾರಿಕಾ ನಿವೇಶನ ಕೊಡಲಾಗಿದೆ. ಇಂತಹ ಪ್ರಕರಣಗಳಲ್ಲಿ ಹೂಡಿಕೆಯು 15 ಕೋಟಿ ರೂ.ಗಳಿಗಿಂತ ಕಡಿಮೆಯಾಗಿದ್ದಲ್ಲಿ ಅಂತಹ ಪ್ರಕರಣಗಳನ್ನು ಆಯಾ ಜಿಲ್ಲಾಧಿಕಾರಿಗಳ ನೇತೃತ್ವದ ಸಮಿತಿಗೆ ವಹಿಸುವ ಬಗ್ಗೆ ಕ್ರಮವಹಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.
ದಾಬಸ್ ಪೇಟೆ, ಹಾಸನ, ಬಿಡದಿ ಸೇರಿದಂತೆ ಹಲವೆಡೆಗಳಲ್ಲಿ ಪರಿಶಿಷ್ಟರಿಗೆ ಕೊಟ್ಟಿರುವ ನಿವೇಶನಗಳಲ್ಲಿ ಸಮಸ್ಯೆ ಇದ್ದು ಅದನ್ನು ಆದಷ್ಟು ಬೇಗ ಪರಿಹರಿಸುವ ಬಗ್ಗೆ ಕ್ರಮವಹಿಸಲಾಗಿದೆ ಎಂದು ಎಂ.ಬಿ.ಪಾಟೀಲ್ ಹೇಳಿದರು.
ಅಂತಿಮವಾಗಿ ಕರ್ನಾಟಕ ದಲಿತ ಉದ್ದಿಮೆದಾರರ ಸಂಘದ ಉಪಾಧ್ಯಕ್ಷ ಶ್ರೀನಿವಾಸನ್ ಮಾತನಾಡಿ, ‘ಸಚಿವರು ನಮ್ಮ ಬಹುತೇಕ ಎಲ್ಲ ಬೇಡಿಕೆಗಳನ್ನು ಈಡೇರಿಸಿದ್ದಾರೆ. ಹೀಗಾಗಿ ಸಚಿವರಿಗೆ ನನ್ನ ಅಭಿನಂದನೆಗಳು ಎಂದು ಮೆಚ್ಚುಗೆಯ ಮಾತುಗಳನ್ನಾಡಿದರು. ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಕೆಐಎಡಿಬಿ ಸಿಇಒ ಡಾ.ಆರ್.ಮಹೇಶ್, ಕೈಗಾರಿಕಾ ಇಲಾಖೆ ಆಯುಕ್ತೆ ಗುಂಜನ್ ಕೃಷ್ಣ, ಕರ್ನಾಟಕ ಉದ್ಯೋಗ ಮಿತ್ರ ವ್ಯವಸ್ಥಾಪಕ ನಿರ್ದೇಶಕ ದೊಡ್ಡ ಬಸವರಾಜ ಸೇರಿದಂತೆ ಇತರ ಅಧಿಕಾರಿಗಳು, ಮುಖಂಡರಾದ ಡಾ.ಎಲ್.ಹನುಮಂತಯ್ಯ, ಮಾವಳ್ಳಿ ಶಂಕರ್, ಇಂದೂಧರ ಹೊನ್ನಾಪುರ, ವಿ.ನಾಗರಾಜ್, ಚನ್ನಕೃಷ್ಣಪ್ಪ, ದಲಿತ ಉದ್ದಿಮೆದಾರರ ಸಂಘದ ಸಿ.ಜಿ.ಶ್ರೀನಿವಾಸ್ ಸೇರಿದಂತೆ ಇನ್ನಿತರರು ಹಾಜರಿದ್ದರು.