ವಿಪಕ್ಷಗಳನ್ನು ಸದೆಬಡಿದು ಮತ್ತೆ ಅಧಿಕಾರಕ್ಕೆ ಬರುವ ಮನಸ್ಥಿತಿಯಿಂದ ಬಿಜೆಪಿ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ: ಗೃಹ ಸಚಿವ ಜಿ.ಪರಮೇಶ್ವರ್

Update: 2024-03-30 07:57 GMT

ಬೆಂಗಳೂರು‌ : ವಿರೋಧ ಪಕ್ಷಗಳನ್ನು ಸದೆಬಡಿದು ಮತ್ತೇ ಅಧಿಕಾರಕ್ಕೆ ಬರುವ ಮನಸ್ಥಿತಿಯಿಂದ ಬಿಜೆಪಿಯವರು ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಅವರು ಹೇಳಿದರು.

ಸದಾಶಿವನಗರದ ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "‌ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತನಿಖಾ ಸಂಸ್ಥೆಗಳ ಕಾರ್ಯ ನಿರಂತರವಾಗಿ ನಡೆಯುತ್ತದೆ. ಆದರೆ, ಇಷ್ಟುದಿನ ಸುಮ್ಮನಿದ್ದು, ಚುನಾವಣೆ ಸಂದರ್ಭದಲ್ಲಿ ಆಸಕ್ತಿ ತೋರಿಸಿರುವುದು ಯಾಕೆ. ಆದಾಯ ತೆರಿಗೆ ಇಲಾಖೆಯವರು ಈಗ ತೆರಿಗೆ ಕಟ್ಟುವಂತೆ ನೋಟಿಸ್ ನೀಡುತ್ತಿರುವುದರ ಅರ್ಥವೇನು?. ಕಾಂಗ್ರೆಸ್ ಪಕ್ಷದ ಬ್ಯಾಂಕ್ ಖಾತೆಯನ್ನು ಯಾವ ಉದ್ದೇಶಕ್ಕಾಗಿ ನಿಷ್ಕ್ರೀಯ ಮಾಡಲಾಗಿತ್ತು" ಎಂದು ಪ್ರಶ್ನಿಸಿದರು.

"ಎಲೆಕ್ಟ್ರೋಲ್ ಬಾಂಡ್ಸ್ ಕೊಡಬಹುದು, ಹಣ ಕೊಡುವಂತಿಲ್ಲ ಎಂದು ಕಳೆದ ಚುನಾವಣೆಯಲ್ಲಿ ಹೇಳಲಾಗಿತ್ತು. ಇದಕ್ಕೆ ಚುನಾವಣೆ ಆಯೋಗ ಅನುಮತಿ ನೀಡಿತ್ತು. ಎಲ್ಲ ಪಾರ್ಟಿಯವರು ಎಲೆಕ್ಟ್ರೋಲ್ ಬಾಂಡ್ಸ್‌ಗಳನ್ನು ಡೊನೆಷನ್ ಮಾದರಿಯಾಗಿ ತೆಗೆದುಕೊಂಡರು. ಈಗ ಎಲೆಕ್ಟ್ರಾಲ್ ಬಾಂಡ್ಸ್ ತೆಗೆದುಕೊಂಡಿರುವುದು ತಪ್ಪು ಎನ್ನಲಾಗುತ್ತಿದೆ. ಬಿಜೆಪಿಯವರು ಹೆಚ್ಚು ಬಾಂಡ್ಸ್‌ಗಳನ್ನು ತೆಗೆದುಕೊಂಡಿದ್ದು,  8200 ಕೋಟಿ ರೂ. ಗೂ ಹೆಚ್ಚು ತೆಗೆದುಕೊಂಡಿದ್ದಾರೆ. ನಮ್ಮ ಪಾರ್ಟಿಗೆ 1800 ರೂ‌. ಕೋಟಿ ಬಂದಿದೆ" ಎಂದರು.

ಬಿಜೆಪಿಯವರು 8200 ಕೋಟಿ ರೂ. ಪೈಕಿ, 6600 ಕೋಟಿ ರೂ. ಲೆಕ್ಕ ಕೊಟ್ಟಿದ್ದು, ಬಾಕಿ ಹಣದ ಲೆಕ್ಕ ತೋರಿಸಿಲ್ಲ. ಇದಕ್ಕಿದ್ದಂತೆ 1800 ಕೋಟಿ ರೂ. ಟ್ಯಾಕ್ಸ್ ಕಟ್ಟವಂತೆ ನಮ್ಮ ಪಕ್ಷಕ್ಕೆ ನೋಟಿಸ್ ಕೊಡುವುದಾದರೆ, ಬಿಜೆಪಿಯವರು ಲೆಕ್ಕ ತೋರಿಸಿರುವ 6600 ಕೋಟಿ ರೂ. ಗೂ ನೋಟಿಸ್ ನೀಡಲಿ. ಬರೀ ಕಾಂಗ್ರೆಸ್‌ನವರಿಗೆ ನೋಟೀಸ್ ನೀಡಿರುವುದು, ರಾಜಕೀಯ ದುರುದ್ದೇಶ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ತುಮಕೂರಿನಿಂದ ಸ್ಪರ್ಧಿಸುವಂತೆ ದೇವೇಗೌಡರನ್ನು ನಾವ್ಯಾರು ಕರೆದಿರಲಿಲ್ಲ

ʼಕಳೆದ ಲೋಕಸಭಾ ಚುನಾವಣೆಯಲ್ಲಿ ದೇವೆಗೌಡ ಅವರನ್ನು ತೂಮಕೂರಿನಿಂದ ಸ್ಪರ್ಧಿಸುವಂತೆ ಯಾರು ಕರೆದಿರಲಿಲ್ಲ. ಆಗ ನಾನು ಕೆಪಿಸಿಸಿ ಅಧ್ಯಕ್ಷ್ಯನಾಗಿದ್ದೆ. ದೇವೇಗೌಡ ಅವರು ತುಮಕೂರಿನಿಂದ ಸ್ಪರ್ಧಿಸುತ್ತಾರೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ಬರುತ್ತಿದೆ. ನೀವು ಬರುತ್ತೀರಾ ಎಂದು ಖುದ್ದಾಗಿ ಕೇಳಿದ್ದೆ. ನಾನು ಇನ್ನು ತೀರ್ಮಾನ ಮಾಡಿಲ್ಲಪ್ಪ. ಬೆಂಗಳೂರು ಉತ್ತರ ಕ್ಷೇತ್ರದಿಂದ ನಿಲ್ಲಲು ತೀರ್ಮಾನ ಮಾಡಿಕೊಂಡಿದ್ದೀನಿ ಎಂದಿದ್ದರು. ತದನಂತರ ನಮ್ಮ ಹೈಕಮಾಂಡ್ ಜೊತೆ ಏನು ಮಾತನಾಡಿಕೊಂಡರೋ ಆ ಭಾಗ ನನಗೆ ಗೊತ್ತಿಲ್ಲʼ ಎಂದು ಸ್ಪಷ್ಟಪಡಿಸಿದರು.

ದೇವೇಗೌಡ ಅವರು ತುಮಕೂರಿನಿಂದ ಸ್ಪರ್ಧಿಸುತ್ತಾರೆ ಎಂದು ಹೈಕಮಾಂಡ್‌ನಿಂದ ಸೂಚನೆ ಬಂತು. ನಾವೆಲ್ಲ ಪ್ರಮಾಣಿಕವಾಗಿ ದೇವೇಗೌಡ ಅವರ ಗೆಲುವಿಗಾಗಿ ಕೆಲಸ ಮಾಡಿದ್ದೇವೆ. ಪ್ರಧಾನ ಮಂತ್ರಿಯಾಗಿದ್ದವರು ನಮ್ಮ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಅಂದಾಗ ಗೆಲ್ಲಿಸಿಕೊಳ್ಳಬೇಕು ಎಂಬುದು ನಮ್ಮ ಉದ್ದೇಶವಾಗಿತ್ತು. ಆದರೆ, ದೇವೇಗೌಡ ಪರವಾಗಿ ಜೆಡಿಎಸ್ ಪಕ್ಷದವರೆ ಕೆಲಸ ಮಾಡಲಿಲ್ಲ ಎಂದು ಹೇಳಿದರು‌.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News