ಎತ್ತಿನಹೊಳೆ ಯೋಜನೆ ವಿಚಾರವಾಗಿ ಡಿಸಿಎಂ ಜೊತೆ ಚರ್ಚೆ : ಗೃಹ ಸಚಿವ ಜಿ.ಪರಮೇಶ್ವರ್‌

Update: 2024-09-30 08:43 GMT

ಜಿ.ಪರಮೇಶ್ವರ್‌

ಬೆಂಗಳೂರು : ಎತ್ತಿನಹೊಳೆ ಯೋಜನೆ ವಿಚಾರವಾಗಿ ಚರ್ಚಿಸಲು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಆಗಮಿಸಿದ್ದರು.‌ ಇದಕ್ಕೆ ಬೇರೆ ಅರ್ಥ ಕಲ್ಪಿಸುವ ಅವಶ್ಯಕತೆ ಇಲ್ಲ ಎಂದು ಗೃಹ ಸಚಿವ ಜಿ.ಪರಮೇಶ್ವರ್‌ ಹೇಳಿದರು.

ಸೋಮವಾರ ಸದಾಶಿವನಗರದ ತಮ್ಮ ನಿವಾಸದಲ್ಲಿ ಡಿ.ಕೆ.ಶಿವಕುಮಾರ್ ಜೊತೆ ಕೆಲಕಾಲ ಚರ್ಚಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಎತ್ತಿನಹೊಳೆ ಯೋಜನೆ ವೇಗವಾಗಿ ಆಗುತ್ತಿಲ್ಲ.‌ ಹಣ ಬಿಡುಗಡೆ ಆಗಬೇಕಿದೆ. ದೊಡ್ಡಬಳ್ಳಾಪುರದಲ್ಲಿ ನೀರು ಸಂಗ್ರಹಕ್ಕೆ ಐದು ಸಾವಿರ ಎಕರೆ ಭೂಮಿ ಪ್ರಸ್ತಾಪ‌ ಮಾಡಲಾಗಿತ್ತು. ಅದರಲ್ಲಿ 2500 ಎಕರೆ ಭೂಮಿ ಕೊರಟಗೆರೆ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ.‌ ಹಿಂದಿನ ಸರಕಾರ ಇದನ್ನು ಬದಲಾಯಿಸಿ, ನಿಲ್ಲಿಸಿತ್ತು. ಅದು ಆಗಬಾರದು ಎಂಬ ಚರ್ಚೆ ನಡೆಯುತ್ತಿತ್ತು. ಮುಂದಿನ ವರ್ಷಕ್ಕಾದರು ಜಿಲ್ಲೆಗೆ ನೀರು ಬರಬೇಕು.‌ ಈ ಬಗ್ಗೆ ಚರ್ಚಿಸಲು ಭೇಟಿ ಮಾಡುವುದಾಗಿ ಡಿಸಿಎಂ‌ ಅವರಿಗೆ ಹೇಳಿದ್ದೆ. ಡಿಸಿಎಂ ಅವರು ನಾನೇ ಬರುತ್ತೇನೆ, ಮಾತಾಡೋಣ ಎಂದಿದ್ದರು.‌ ಬನ್ನಿ ಎಂದು ಕರೆದಿದ್ದೆ" ಎಂದು ತಿಳಿಸಿದರು.

"ಡಿಸಿಎಂ ಭೇಟಿಯನ್ನು ಬೇರೆ ರೀತಿಯ ದೃಷ್ಟಿಕೋನದಲ್ಲಿ‌ ನೋಡಬೇಕಿಲ್ಲ. ನಮ್ಮ‌ ಕೆಲಸ ಕಾರ್ಯಗಳಾಗಬೇಕಾಗುತ್ತದೆ. ಗುಬ್ಬಿಯಿಂದ‌ ಕುಣಿಗಲ್‌ವರೆಗೆ ಎಕ್ಸ್‌ಪ್ರೆಸ್ ಕೆನಲ್ ಮಾಡಲು ಅನುಮತಿ ಸಿಕ್ಕಿದೆ.‌ ಕೆಲಸ‌ ಆರಂಭಿಸುವಾಗ ಜನರು ತಡೆದಿದ್ದಾರೆ. ಈ ಬಗ್ಗೆಯೂ ಚರ್ಚಿಸಲಾಗಿದೆ. ನೀರಾವರಿ ಸಚಿವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ತಾಂತ್ರಿಕ ಸಮಿತಿ ಮಾಡಿದ್ದಾರೆ.‌ ಅದರ ವರದಿ ಕೊಟ್ಟಮೇಲೆ ಮುಂದುವರಿಯುತ್ತದೆ. ನಮ್ಮ ಭೇಟಿ‌ಗೆ ಬೇರೆ ಬೇರೆ ಅರ್ಥ ಕಲ್ಪಿಸುವ ಅವಶ್ಯಕತೆ ಇಲ್ಲ" ಎಂದು ಸ್ಪಷ್ಟಪಡಿಸಿದರು.

ಸಾವಿರ ಕೋಟಿ ರೂ.ಇಟ್ಟುಕೊಂಡು ಸಿಎಂ ಆಗಲು ಕೆಲವರು ಕಾಯುತ್ತಿದ್ದಾರೆ ಎಂಬ ಯತ್ನಾಳ್ ಹೇಳಿಕೆಯ ಕುರಿತು ಪ್ರತಿಕ್ರಿಯಿಸಿ, "ನಾನು ಸಾವಿರ ಕೋಟಿ ರೂಪಾಯಿ ನೋಡಿಲ್ಲ. ಸರಕಾರ ಅಸ್ಥಿರಗೊಳಿಸಲು ಸಾವಿರ ಕೋಟಿ ರೂ. ಎಲ್ಲಿಟ್ಟಿದ್ದಾರೆ ಎಂಬುದನ್ನು ಯತ್ನಾಳ್ ಅವರನ್ನೇ‌ ಕೇಳಬೇಕು. ಸಾವಿರ ಕೋಟಿ ಎಲ್ಲಿಟ್ಟಿದ್ದಾರೆ ಎಂಬುದರ ಬಗ್ಗೆ ತನಿಖೆಯಾಗಬೇಕು. ಸುಮೋಟೋ ದಾಖಲಿಸುವ ಬಗ್ಗೆ ಪರಿಶೀಲಿಸಲಾಗುವುದು.‌ ಸಂದರ್ಭ ಬಂದರೆ ದಾಖಲಿಸಬೇಕಾಗುತ್ತದೆ" ಎಂದು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News